ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬಯಲು ನಾಡಿನಲ್ಲಿ ಫೈನಾಪಲ್‌ ಬೆಳೆದ ರೈತ

ನಷ್ಟ ಕಂಡಿದ್ದ ರೈತ, ಲಾಭದತ್ತ ಸಾಗಿದ ಯಶೋಗಾಥೆ
Published 1 ಸೆಪ್ಟೆಂಬರ್ 2023, 3:53 IST
Last Updated 1 ಸೆಪ್ಟೆಂಬರ್ 2023, 3:53 IST
ಅಕ್ಷರ ಗಾತ್ರ

ಬಾಗಲಕೋಟೆ: ತೋಟಗಾರಿಕೆ ಬೆಳೆಗಳ ಪ್ರಯೋಗಶಾಲೆ ಎನಿಸಿದೆ ಬಾಗಲಕೋಟೆ ಜಿಲ್ಲೆ. ಚಿಕ್ಕು, ಪಪ್ಪಾಯಿ, ದಾಳಿಂಬೆ , ಪೇರಲ, ದ್ರಾಕ್ಷಿ ಸೇರಿದಂತೆ ಹಲವು ಬೆಳೆಗಳಿಗೆ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಕೆಲವರು ಡ್ರ್ಯಾಗನ್‌ ಫ್ರೂಟ್‌ ಬೆಳೆಯುತ್ತಿದ್ದಾರೆ. ಆ ಸಾಲಿಗೆ ಈಗ ಫೈನಾಪಲ್‌ ಸೇರಿಕೊಂಡಿದೆ.

ಜಿಲ್ಲೆಯ ಬೀಳಗಿ ತಾಲ್ಲೂಕಿನ ಬೂದಿಹಾಳ ಎಸ್‌.ಎಚ್‌. ಗ್ರಾಮದ ಯುವ ರೈತ ಮಲ್ಲಿಕಾರ್ಜುನ ಭಗವತಿ ಫೈನಾಪಲ್‌ ಬೆಳೆಯುವ ಮೂಲಕ ಅದರ ಘಮಲನ್ನು ಸುತ್ತಲೂ ಹರಡಿಸಿದ್ದಾರೆ.

ಕಬ್ಬು ಬೆಳೆಗೆ ಸತತ ಗೊಣ್ಣೆ ಹುಳುವಿನ ಕಾಟವಾಗಿದ್ದರಿಂದ ಸತತ ಮೂರು ವರ್ಷ ನಷ್ಟ ಅನುಭವಿಸಿದ್ದರು. ಇದ್ದ ಕಬ್ಬನ್ನು ಕಿತ್ತು ಹೊಸದಾದ ಫೈನಾಪಲ್‌ ಬೆಳೆಯ ಪ್ರಯೋಗಕ್ಕೆ ಮುಂದಾದರು. ಈಗ ಆ ಬೆಳೆ ಅವರ ಕೈಹಿಡಿದಿದೆ. ಪರಿಣಾಮ ಮೂರು ವರ್ಷಗಳ ನಂತರ ಲಾಭದತ್ತ ಮುಖ ಮಾಡಿದ್ದಾರೆ.

ಮೊದಲು 20 ಗುಂಟೆಗೆ 8 ಸಾವಿರ ರಾಜಾ ತಳಿಯ ಸಸಿಗಳನ್ನು ಸಾಗಾಣೆ ವೆಚ್ಚ ಸೇರಿ ₹10 ರಂತೆ ಕೇರಳದಿಂದ  ತರಿಸಿದ್ದರು. ಅದರಲ್ಲಿ ₹2 ಲಕ್ಷದಷ್ಟು ಲಾಭವಾದ ನಂತರ ಬೆಳೆ ವಿಸ್ತರಿಸಲು ಯೋಜನೆ ಹಾಕಿದರು. ಈಗ ಮತ್ತೇ 22 ಸಾವಿರ ಸಸಿಗಳನ್ನು ತರಿಸಿ, ಒಂದೂವರೆ ಎಕರೆಯಲ್ಲಿ ನಾಟಿ ಮಾಡಿ, ಫಸಲು ಪಡೆಯುತ್ತಿದ್ದಾರೆ.

ನಾಟಿ ಮಾಡಿದ 14 ತಿಂಗಳಿಗೆ ಫಸಲು ಬರಲಾರಂಭಿಸುತ್ತಿದೆ. ವರ್ಷಪೂರ್ತಿ ಫಸಲನ್ನು ಪಡೆಯಬಹುದಾಗಿದೆ. ಅದಕ್ಕೆ ತಕ್ಕಂತೆ ನಾಟಿ ಮಾಡಬೇಕು. ನಾಲ್ಕು ಅಡಿ ಅಂತರದಲ್ಲಿ ನಾಟಿ ಮಾಡಿದರೆ, ಎಕರೆಗೆ 15 ಸಾವಿರದಷ್ಟು ಸಸಿಗಳನ್ನು ನಾಟಿ ಮಾಡಬಹುದಾಗಿದೆ.

ಕೆಂಪು ಮಣ್ಣು ಇದಕ್ಕೆ ಉತ್ತಮ. ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲವಾದರೂ, ಸಸಿಗಳು ಒಣಗುವುದನ್ನು ಗಮನಿಸಿಕೊಂಡು ನೀರು ನೀಡಬೇಕು. ಸಸಿಗಳು ಬೇಗನೆ ಒಣಗುವುದಿಲ್ಲ. ಮಳೆ ಹೆಚ್ಚಾದರೆ ಬುಡದಲ್ಲಿ ಕೊಳೆಯಲಾರಂಭಿಸುತ್ತದೆ. ಮಳೆ ಬಂದಾಗ ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸರಾಗಿ ಹರಿದು ಹೋದರೆ ಒಳ್ಳೆಯದು.

ಒಂದೂವರೆ ಎಕರೆಯಲ್ಲಿ ಅಡಿಕೆ ಸಸಿಗಳನ್ನು ಹಾಕಿದ್ದು, ಅವುಗಳ ಮಧ್ಯದಲ್ಲಿ ಅಂತರ ಬೆಳೆಯಾಗಿ ಫೈನಾಪಲ್‌ ಅನ್ನು ಬೆಳೆಯುತ್ತಿದ್ದಾರೆ ಮಲ್ಲಿಕಾರ್ಜುನ.

‘ಪ್ರತಿ ಎಕರೆಗೆ ₹2 ಲಕ್ಷದಷ್ಟು ಖರ್ಚು ಬರುತ್ತದೆ. ಖರ್ಚು ಹೋಗಿ ₹2 ಲಕ್ಷ ಉಳಿಯುತ್ತದೆ. ನಮ್ಮಲ್ಲಿ ಬೆಳೆದಿರುವ ರಾಜಾ ತಳಿಯ ಫೈನಾಪಲ್‌ 1.5 ಯಿಂದ 2 ಕೆ.ಜಿ. ತೂಗುತ್ತಿವೆ. ಪ್ರತಿ ಕೆ.ಜಿ.ಗೆ ₹20 ರಿಂದ ₹30ರವರೆಗೆ ಬೆಲೆ ಸಿಗುತ್ತದೆ’ ಎನ್ನುತ್ತಾರೆ ಮಲ್ಲಿಕಾರ್ಜುನ.

ವಿಜಯಪುರ, ಬಾಗಲಕೋಟೆ, ಬೀಳಗಿ ಮಾರುಕಟ್ಟೆಗೆ ಕಳುಹಿಸುತ್ತಿದ್ದೇನೆ. ಜ್ಯೂಸ್ ಅಂಗಡಿಯ ಕೆಲವರು ಇಲ್ಲಿಗೇ ಬಂದು, ತೆಗೆದುಕೊಂಡು ಹೋಗುತ್ತಿದ್ದರೆ, ಕೆಲವರಿಗೆ ನಾವೇ ತೆಗೆದುಕೊಂಡು ಹೋಗಿ ಕೊಡುತ್ತಿದ್ದೇವೆ ಎನ್ನುತ್ತಾರೆ ಅವರು.

ಅಪ್ಪ, ಅಮ್ಮ, ಸಹೋದರ ಈ ಕೃಷಿಗೆ ಕೈ ಜೋಡಿಸಿದ್ದಾರೆ. ಮೊದಲ ಬಾರಿ ಬೆಳೆದಿದ್ದರಿಂದ ಹಲವರು ಇಲ್ಲಿ ಬೆಳೆಯಲು ಸಾಧ್ಯವೇ? ನಮ್ಮ ಬಿಸಿಲಿಗೆ ಉಳಿಯುತ್ತದೆಯೇ ಎಂದು ಗೇಲಿ ಮಾಡಿದ್ದರು. ಆದರೆ, ಯಾವುದೇ ತೊಂದರೆ ಇಲ್ಲದೆ ಬೆಳೆದಿದೆ ಎಂದು ಹೇಳಿದರು.

ಫೈನಾಪಲ್‌ ತೋಟ
ಫೈನಾಪಲ್‌ ತೋಟ
ಬಾಗಲಕೋಟೆ ಜಿಲ್ಲೆಯ ಬೂದಿಹಾಳ ಎಸ್‌.ಎಚ್‌. ನಲ್ಲಿ ಬೆಳೆದಿರುವ ಫೈನಾಪಲ್‌ ಬೆಳೆ ತೋರಿಸುತ್ತಿರುವ ರೈತ ಮಲ್ಲಿಕಾರ್ಜುನ ಭಗವತಿ
ಬಾಗಲಕೋಟೆ ಜಿಲ್ಲೆಯ ಬೂದಿಹಾಳ ಎಸ್‌.ಎಚ್‌. ನಲ್ಲಿ ಬೆಳೆದಿರುವ ಫೈನಾಪಲ್‌ ಬೆಳೆ ತೋರಿಸುತ್ತಿರುವ ರೈತ ಮಲ್ಲಿಕಾರ್ಜುನ ಭಗವತಿ
ಫೈನಾಪಲ್
ಫೈನಾಪಲ್

ಪೈನಾಪಲ್‌ ಬೆಳೆಯಿಂದ ಲಾಭ ದೊರಕಿದೆ. ಲಭ್ಯವಿರುವ ಮಾರುಕಟ್ಟೆಯನ್ನು ವಿಸ್ತರಿಸಲು ಸರ್ಕಾರ ನೆರವು ನೀಡಬೇಕಿದೆ ಮಲ್ಲಿಕಾರ್ಜುನ ಭಗವತಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT