ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡಗಳ ಚಿತ್ತಾರವೇ ‘ಮಹಾಭಾರತ’

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಮಹಾಭಾರತದ ಕಥೆ ಮುಖ್ಯವಾಗಿ ಚಂದ್ರವಂಶದ ರಾಜಮನೆತನದ ಕಥೆ. ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧದಲ್ಲಿ ಹಲವಾರು ಕ್ಷತ್ರಿಯರನ್ನು ಬಲಿಪಡೆದ ಮತ್ಸರದ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕೌರವ ಮತ್ತು ಪಾಂಡವರ ನಡುವೆ ನಡೆಯುವ ಹೋರಾಟ ಕುರಿತ ವಸ್ತು ವಿಷಯವನ್ನೊಳಗೊಂಡಿದೆ. ‌‌

ಯುದ್ಧದ ಮೂಲ ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮೂಲಭಾರತದ ಕಥೆಯ ಆಯ್ದ 15 ಪಾತ್ರಗಳ ಮೂಲಕ ಕಟ್ಟಿಕೊಡುವ ಒಂದು ಪ್ರಯತ್ನವಾಗಿ ‘ಮಹಾಭಾರತ’ ನಾಟಕ ಮೂಡಿಬಂದಿದೆ. ನಾಟಕದ ಆರಂಭ ತೊಗಲುಗೊಂಬೆಯಾಟದ ಮೂಲಕ ಬಿತ್ತರಿಸಿದ ರೀತಿ ರಂಗಕ್ಕೆ ಹೊಸತನ ತೋರಿತು.

ನಾಟಕ ನಿರೂಪಣೆಗಾರರ ಇಂಗ್ಲಿಷ್ ಸಂಭಾಷಣೆ, ಹಾವಭಾವ, ತೆಳು ಹಾಸ್ಯ  ಮುದ್ದಣ-ಮನೋರಮೆ ಅವರನ್ನು ನೆನಪಿಸುತ್ತಿತ್ತು. ಅಂಬೆ, ಅಂಬಿಕೆ, ಅಂಬಾಲಿಕೆ ಇವರ ಮದುವೆಯಿಂದ ಆರಂಭವಾಗಿ, ಕುಂತಿ ಮತ್ತು ಮಾದ್ರಿಯು ದೂರ್ವಾಸನ ಮುನಿಗಳ ವರಪ್ರಸಾದದಿಂದ ಯಮನಿಂದ ಧರ್ಮರಾಯ, ವಾಯುವಿನಿಂದ ಭೀಮ, ಇಂದ್ರನಿಂದ ಅರ್ಜುನ, ಅಶ್ವಿನಿ ದೇವತೆಗಳಿಂದ ನಕುಲ ಮತ್ತು ಸಹದೇವ ಪಾಂಡವ ಸಂತಾನದ ಜನನ. ಇದರಿಂದ ಕುಪಿತಳಾದ ಗಾಂಧಾರಿ ತನ್ನ ಹೊಟ್ಟೆಯನ್ನು ಕಿವುಚಿಕೊಂಡ ಕಾರಣ ಭ್ರೂಣವು ನೂರ ಒಂದು ತುಂಡುಗಳಾಗಲೂ ಆ ತುಂಡುಗಳನ್ನು ವ್ಯಾಸಮುನಿ ಮಡಿಕೆಯಲ್ಲಿ ಇಡುವುದರಿಂದ ಕೌರವ ಸಂತಾನ ಜನನವಾಗುತ್ತದೆ. ಈ ಕಥೆಯನ್ನು ತೊಗಲು ಗೊಂಬೆಯಾಟದ ಮೂಲಕ ಹಳಗನ್ನಡದ ಗಟ್ಟಿಧ್ವನಿಯಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ಕಟ್ಟಿಕೊಡಲಾಯಿತು.

ರಂಗದಲ್ಲಿ ಅತಿ ಗಾಂಭೀರ್ಯವಾಗಿ ಕಂಡು ಬಂದ ಅಭಿಮನ್ಯು ಚಕ್ರವ್ಯೂಹ ಭೇದಿಸಿದ ಪ್ರಸಂಗದಲ್ಲಿ ಕಲಾವಿದರ ನರ್ತನ ಶೈಲಿ, ಯುದ್ಧದ ಭೀಕರ ಸಾರಲು ಘೋರವಾದ ಶಬ್ದ, ಕೆಂಪು ಬೆಳಕಿನ ಸೂಕ್ಷ್ಮ ವಿಸ್ತರಣೆ ಅರ್ಥಪೂರ್ಣವಾಗಿತ್ತು. ಮಹಾಭಾರತದ ಸಮಾಪ್ತಿಗೆ ಶಕುನಿ ಮಂತ್ರ ವಿದ್ಯೆಯ ಮೂಲಕ ಜನ್ಮ ಪಡೆದು ಪಗಡೆಯಾಟದಲ್ಲಿ ಕೌರವರ ಪರ ವಿಜಯಿಯಾಗುವುದು, ಪಾಂಡವರು ತಮ್ಮ ಸರ್ವಸ್ವವನ್ನೆಲ್ಲ ಕಳೆದುಕೊಳ್ಳುವುದರ ಜೊತೆಗೆ ದ್ರೌಪದಿಯನ್ನು ಪಣದಲ್ಲಿಟ್ಟು ಸೋಲುವ ಸಂದರ್ಭಗಳನ್ನು ಮುಖವಾಡಗಳ ಜೊತೆಗೆ ನೀಲಿ-ಕೆಂಪು ಬೆಳಕಿನ ನಡುವೆ ಪ್ರಸ್ತುತ ಪಡಿಸುವ ಕೌಶಲ ರಂಗಕಲೆಯ ಮೇಲಿನ ಶ್ರದ್ಧೆ, ಪರಿಶ್ರಮವನ್ನು ತಿಳಿಸಿಕೊಡುತ್ತಿತ್ತು.

ನಾಟಕದಲ್ಲಿ ಎಲ್ಲಾ ಕಲಾವಿದರ ನಟನ ಕೌಶಲ ಉತ್ತಮವಾಗಿತ್ತು. ಬಿಳಿ ವಸ್ತ್ರದಲ್ಲಿ ಯುಧಿಷ್ಠಿರ, ಕೃಷ್ಣನ ಪಾತ್ರಧಾರಿಗಳು, ಕಪ್ಪು ವಸ್ತ್ರದಲ್ಲಿ ಉಳಿದ ಪಾತ್ರಧಾರಿಗಳು ಕಾಣಿಸಿಕೊಂಡು ಜಯದೃತನ ಮರಣ ಸನ್ನಿವೇಶ, ಅರ್ಜುನನಿಂದ ದ್ರೋಣರ ಹತ್ಯೆ, ಕರ್ಣನನ್ನು ಮೋಸದಿಂದ ಕೊಂದ ಅರ್ಜುನ ಮುಖವಾಡ ಎಲ್ಲಾ ಪಾತ್ರಗಳ ಸೃಷ್ಟಿಗೂ ಹೊಂದುವ ಗೊಂಬೆಯ ರೂಪಕಗಳು ಮೆಚ್ಚುವಂತಹದ್ದು. ಶಕುನಿ ಮತ್ತು ದ್ರೌಪದಿಯ ಶಪಥ ತೋರಿಸಿದ ನಿರ್ದೇಶಕಿ ಅನುರೂಪ ರಾಯ್ ಮತ್ತು ಉದಯ್‍ ಕುಮಾರ್ ಅವರ ಅಭಿನಯ ರಂಗ ಮಂಟಪದಲ್ಲಿ ಹೆಣ್ಣು-ಗಂಡಿನ  ಸಮಾನ ಮನಸನ್ನು ಸಾರುವಂತಿತ್ತು.

ಬೆಳಕಿನ ವಿನ್ಯಾಸ, ಹಿನ್ನಲೆ ಸಂಗೀತ ನಾಟಕಕ್ಕೆ ಹೊಂದಿಕೆಯಾಗುವಂತೆ ಸಮಯೋಚಿತವಾಗಿ ಚಿತ್ತಾರ ಮೂಡಿಸಿದರೆ, ರಂಗದ ಮೇಲೆ ಮಹಾಭಾರತದ ಯುದ್ಧದ ಭೀಕರತೆಯನ್ನು ಸಾರುವ ದೃಶ್ಯಾವಳಿಗಳು, ಮುಖವಾಡಗಳು, ಗೊಂಬೆಯ ಮೂಲಕ ಕರ್ಣನ ಪ್ರತಿರೂಪ ನಿರ್ಮಿಸಿ ರಥದಚಕ್ರ ಭೂಮಿಯಲ್ಲಿ ಹೂತಿರುವಾಗ ಅರ್ಜುನ, ಕರ್ಣನನ್ನು ಕೊಲ್ಲುವ ಸಂದರ್ಭ, ಭೀಮ-ದುಶ್ಯಾಸನರ ನಡುವಿನ ಮಲ್ಲಯುದ್ಧದಲ್ಲಿ ದುಶ್ಯಾಸನ ಹತನಾದಾಗ ಆತನ ರಕ್ತವನ್ನು ಭೀಮನು ದ್ರೌಪದಿಯ ಹೆರಳಿಗೆ ಲೇಪಿಸುವುದು, ಅಶ್ವತ್ಥಾಮನು ತನ್ನ ತಂದೆ ಸಾವಿಗೆ ಕಾರಣರಾದ ಪಾಂಡವರನ್ನು ಕೊಲ್ಲುವ ಆತುರದಲ್ಲಿ ಉಪ ಪಾಂಡವರ ಕೊಂದು ಬಾಲವಧೆ ಪಾಪಕ್ಕೆ ಗುರಿಯಾಗಿ ಪಾಶ್ಚಾತ್ತಾಪ ಪಡುವುದು... ಹೀಗೆ ಎಲ್ಲಾ ರೂಪಕಗಳು ಸಹೃದಯರ ಗಮನ ಸೆಳೆದವು. ಮಹಾಭಾರತದ ಕಥೆಯನ್ನು ವಿನೂತನ ಶೈಲಿಯಲ್ಲಿ ತೋರಿಸಿದ ನವದೆಹಲಿಯ ಕಠ್‍ಕಥಾ ಪೊಪೆಟ್ ಆರ್ಟ್ಸ್‌ ಟ್ರಸ್ಟ್ ಅವರ ರಂಗ ಉತ್ಸಾಹ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT