ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ದಾಖಲೆ ಕೊಡೊಲ್ಲ, ಜೈಲಿಗೆ ಹಾಕಲಿ: ವಿಜಯಾನಂದ ಕಾಶಪ್ಪನವರ್

ಸಿಎಎ ವಿರೋಧಿ ಧರಣಿಯಲ್ಲಿ ಕಾಶಪ್ಪನವರ ಸವಾಲ್
Last Updated 26 ಫೆಬ್ರುವರಿ 2020, 10:12 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಯಾರಾದರೂ ನನ್ನ ಬಳಿ ದಾಖಲೆಗಳನ್ನು ಕೇಳಲು ಬಂದರೆ ಕೊಡೊಲ್ಲ ಎಂದು ಸ್ಪಷ್ಟವಾಗಿ ಹೇಳುವೆ. ಅಂಜುವ ಅವಶ್ಯಕತೆಯೇ ಇಲ್ಲ. ಬೇಕಿದ್ದರೆ ನನ್ನನ್ನೂ ಜೈಲಿಗೆ ಹಾಕಲಿಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಬುಧವಾರ ’ನಾವು ಭಾರತೀಯರು’ ಸಂಘಟನೆಯಿಂದ ನಡೆದ 18ನೇ ದಿನದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿಎಎ ಅಡಿ ಕೇಂದ್ರ ಸರ್ಕಾರ ಕೇಳುತ್ತಿರುವ ದಾಖಲೆಗಳು ದೇಶದ ಜನಸಂಖ್ಯೆಯ ಶೇ 42ರಷ್ಟು ಜನರ ಬಳಿ ಮಾತ್ರ ಇವೆ. ಉಳಿದ ಶೇ 58ರಷ್ಟು ಮಂದಿ ಎಲ್ಲಿಂದ ತಂದುಕೊಡುವುದು ಎಂದು ಪ್ರಶ್ನಿಸಿದ ಅವರು, ಕಾಯ್ದೆಯಿಂದ ಬರೀ ಅಲ್ಪಸಂಖ್ಯಾತರು ಮಾತ್ರ ತೊಂದರೆ ಅನುಭವಿಸುವುದಿಲ್ಲ. ದಲಿತರು, ಹಿಂದುಳಿದ ವರ್ಗದವರು, ಎಲ್ಲ ಜಾತಿಯ ಬಡವರು ಬಾಧಿತರಾಗಲಿದ್ದಾರೆ. ನಿನ್ನ ಮುತ್ತಜ್ಜನ ದಾಖಲೆ ತಂದುಕೊಡು ಎಂದು ಕೇಳಿದರೆ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು.

ಈ ದೇಶ ನಮ್ಮದು. 128 ಕೋಟಿ ಜನ ನಾವು ಒಗ್ಗಟ್ಟಾಗಿದ್ದೇವೆ. ಅಣ್ಣ–ತಮ್ಮಂದಿರಂತೆ ಬದುಕಿದ್ದ ನಮ್ಮನ್ನು (ಹಿಂದೂ–ಮುಸ್ಲಿಮರನ್ನು) ಒಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಪ್ರಾಮಾಣಿಕ ಭಾರತೀಯರು, ಮನುಷ್ಯತ್ವ ಹೊಂದಿದ ಹಿಂದೂಗಳು ಎಂದಿಗೂ ಇಂತಹ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿಯನ್ನು ಕಟುಕಿದರು.

ದೇಶ ವಿರೋಧಿಗಳಿಗೆ ಗುಂಡಿಕ್ಕಿ ಎಂದರೆ ಒಪ್ಪಿಕೊಳ್ಳೋಣ ಆದರೆ ಬಿಜೆಪಿಯವರು ದೇಶದವರಿಗೆ ಗುಂಡಿಕ್ಕಲು ಹೊರಟಿದ್ದಾರೆ. ದೆಹಲಿಯಲ್ಲಿ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸುತ್ತಿದ್ದಾರೆ. 300 ವರ್ಷ ದೇಶವನ್ನು ಆಳಿದ ಬ್ರಿಟಿಷರ ಗುಂಡಿಗೆ, ಬೂಟಿನ ಏಟಿಗೆ ಹೆದರದೇ ಪ್ರತಿರೋಧ ತೋರಿ ಓಡಿಸಿದ್ದೇವೆ. ಇವರು ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತಾರೆ ನೋಡೋಣ. ಕೊನೆಯ ಉಸಿರಿರುವವರೆಗೂ ಹೋರಾಟ ಮಾಡೋಣ ಎಂದರು.

ಸಿಎಎ ವಿರೋಧಿ ಹೋರಾಟಗಾರ್ತಿ ನಜ್ಮಾ ನಜೀರ್ ಮಾತನಾಡಿ, ಹಮ್ ಕಾಗಜ್‌ ಸೆ ಹಿಂದೂಸ್ತಾನಿ ನಹೀ, ಖೂನ್‌ಸೆ (ರಕ್ತದಿಂದ) ಹಿಂದೂಸ್ತಾನಿ ಎಂದು ಹೇಳಲುಬುರ್ಕಾ, ಬಿಂದಿ, ನಾಮ, ಟೋಪಿ ಧರಿಸಿದ ಎಲ್ಲರೂ ಒಂದಾಗಿದ್ದೇವೆ. ಸಿಎಎ ದಾಖಲೆಗಳ ಕೇಳಲು ಬಂದರೆ ಯಾವುದೇ ಕಾರಣಕ್ಕೂ ಕೊಡಬೇಡಿ. ಮೇಲಿನಂತೆ ಹೇಳಿ ಕಳುಹಿಸಿ ಎಂದು ನೆರೆದವರಿಗೆ ಸಲಹೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ ಮಾತನಾಡಿ, ಆರ್‌ಎಸ್‌ಎಸ್ ಕಳೆದ 70 ವರ್ಷಗಳಲ್ಲಿ ದಲಿತರು, ಬಡವರ ಪರವಾಗಿ, ದೇಶದ ಅಭಿವೃದ್ಧಿ ಪರವಾಗಿ ಹೋರಾಟ ನಡೆಸಿ ಜನರ ಹಿತಕ್ಕೆ ಕೆಲಸ ಮಾಡಿದ ಒಂದಾದರೂ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು. ಧರ್ಮ ಒಡೆದು ದೇಶದ ಜನರ ನಡುವೆ ವಿಷಬೀಜ ಬಿತ್ತಿ ಅಧಿಕಾರ ಹಿಡಿದು ಮನುಸ್ಮೃತಿಯನ್ನು ಜಾರಿಗೊಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೈನುದ್ದೀನ್ ನಬಿವಾಲೆ, ಎಂಐಎಂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಗಣಿ, ಜೆಡಿಎಸ್ ಮುಖಂಡ ಜಬ್ಬಾರ್ ಕಲಬುರ್ಗಿ, ಪೆಂಡಾರ್ ಮೊಹಲ್ಲಾ ಜಮಾತ್ ಅಧ್ಯಕ್ಷ ಮೆಹಬೂಬ್ ಜಮಾದಾರ್, ಮೆಕಾನಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಪೈಂಗಪಲ್ಲಿ, ಶಬ್ಬೀರ್ ಜಮಖಂಡಿ, ಎ.ಎ.ದಾಂಡಿಯಾ, ಮೊಹಮ್ಮದ್ ಅಲಿ ಖಿಲ್ಲೇದಾರ್, ಗೋವಿಂದ ಬಳ್ಳಾರಿ, ಚಂದ್ರಶೇಖರ ರಾಥೋಡ, ಎ.ಡಿ.ಮೊಕಾಶಿ, ರಜಾಕ್ ಹಳ್ಳೂರ, ಹುಸೇನ್ ಮೋರೆಗಾರ, ಆರೀಫ ಡಲಾಯತ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT