ಭಾರತ ಬಂದ್: ಬಾಗಲಕೋಟೆ ಜಿಲ್ಲೆಯಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ

ಬಾಗಲಕೋಟೆ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಪಕ್ಷಗಳು ಕರೆದಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಜಿಲ್ಲಾಡಳಿತ ಮುಂಜಾಗರೂಕತಾ ಕ್ರಮಕ್ಕೆ ಮುಂದಾಗಿದೆ. ಸೋಮವಾರ ಜಿಲ್ಲೆಯ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಜಿ.ಶಾಂತರಾಮ್ ಆದೇಶ ಹೊರಡಿಸಿದ್ದಾರೆ.
ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಬಸ್ಗಳನ್ನು ರಸ್ತೆಗೆ ಇಳಿಸುವುದಿಲ್ಲ ಎಂದು ವಾಯವ್ಯ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ. ಹಾಗಾಗಿ ಎಂಟು ತಾಸು ಕಾಲ ಬಾಗಲಕೋಟೆ ವಿಭಾಗ ವ್ಯಾಪ್ತಿಯಲ್ಲಿನ 638 ಬಸ್ಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ. ನಗರ ಸಾರಿಗೆ ಬಸ್ ಸೇವೆಯೂ ಈ ಅವಧಿಯಲ್ಲಿ ಇರುವುದಿಲ್ಲ.
ಕೆಎಸ್ಆರ್ಟಿಸಿ ಸ್ಟ್ಯಾಫ್ ಅಂಡ್ ವರ್ಕರ್ಸ್ ಫೆಡರೇಶನ್, ಸಾರಿಗೆ ನೌಕರರ ಮಹಾಮಂಡಲ ಸೇರಿದಂತೆ ಪ್ರಮುಖ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ’ಸಂಘಟನೆಗಳ ಕರೆಗೆ ಸಂಸ್ಥೆಯ ನೌಕರರು ಸ್ಪಂದಿಸಿರುವ ಕಾರಣ ಅನಿವಾರ್ಯವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆ ನಂತರ ಬಸ್ ಸೇವೆ ಎಂದಿನಂತೆಯೇ ಇರಲಿದೆ’ ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಆದರೆ ಜಿಲ್ಲೆಯ ಲಾರಿ ಮಾಲೀಕರ ಸಂಘ ಮಾತ್ರ ಬಂದ್ ಕರೆಯಿಂದ ಅಂತರ ಕಾಯ್ದುಕೊಂಡಿದೆ. ’ನಾವು ಬಂದ್ ಬೆಂಬಲಿಸಿಲ್ಲ. ನಮ್ಮ ಸಂಘದಲ್ಲಿ ನೋಂದಣಿಯಾಗಿರುವ 400 ಲಾರಿಗಳು ಎಂದಿನಂತೆ ಸಂಚಾರ ನಡೆಸಲಿವೆ’ ಎಂದು ಜಿಲ್ಲಾ ಮಲ್ಟಿ ಆ್ಯಕ್ಸೆಲ್ ಲಾರಿ ಅಸೋಸಿಯೇಶನ್ ಸಂಘದ ಅಧ್ಯಕ್ಷ ಎನ್.ಎ.ಪಾಟೀಲ ತಿಳಿಸಿದರು. ಟಂಟಂ, ಆಟೊ ರಿಕ್ಷಾ ಓಡಾಟ, ವೈದ್ಯಕೀಯ ಸೇವೆ ಎಂದಿನಂತೆಯೇ ಇರಲಿದೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ.
ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಹಾಲು ಪೂರೈಕೆ ಎಂದಿನಂತೆ ಇರಲಿದೆ. ’ಹಾಲು ಅಗತ್ಯ ವಸ್ತುವಾದ ಕಾರಣ ಈ ಸೇವೆ ಅಬಾಧಿತವಾಗಿರಲಿದೆ’ ಎಂದು ವಿಜಯಪುರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್ ತಿಳಿಸಿದ್ದಾರೆ.
ಹಾಲು,ತರಕಾರಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಾಹನಗಳಿಗೆ ಅಗತ್ಯ ಬಿದ್ದಲ್ಲಿ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.
’ಬಂದ್ ಹಿನ್ನೆಲೆ ನಗರದ ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆಗೆ ಕೆಎಸ್ಆರ್ಪಿ ಹಾಗೂ ಡಿಎಆರ್ ತುಕಡಿಗಳನ್ನು ಬಳಸಿಕೊಂಡು ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಗದ್ದನಕೇರಿ ಕ್ರಾಸ್, ಬಾದಾಮಿ ರಸ್ತೆಯ ಫ್ಲೈಓವರ್, ಸಂಗಮ ಕ್ರಾಸ್ ಬಳಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗುವುದು’ ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.