ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಪೂರೈಕೆಗೆ ಮುಂದಾದ ಸಾರಿಗೆ ಸಂಸ್ಥೆ

ಕೊರೊನಾ ವೈರಸ್ ಭೀತಿ: 16 ಸಾವಿರ ಚಾಲಕರು–ನಿರ್ವಾಹಕರ ಸುರಕ್ಷತೆಗೆ ಒತ್ತು
Last Updated 14 ಮಾರ್ಚ್ 2020, 13:45 IST
ಅಕ್ಷರ ಗಾತ್ರ

ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಹುಬ್ಬಳ್ಳಿಯ ನೈರುತ್ಯ ರೈಲ್ವೆ ತನ್ನ ಸಿಬ್ಬಂದಿಯ ಸುರಕ್ಷತೆಗೆ ಅಗತ್ಯ ಕ್ರಮಕ್ಕೆ ಮುಂದಾಗಿವೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ಎಂಟು ವಿಭಾಗಗಳ ವ್ಯಾಪ್ತಿಯ 16 ಸಾವಿರ ಚಾಲಕರು ಹಾಗೂ ನಿರ್ವಾಹಕರಿಗೆ ಮಾಸ್ಕ್ ಪೂರೈಕೆಗೆ ಮುಂದಾಗಿದೆ. ಅದರಲ್ಲೂ ಪ್ರಿಮಿಯರ್ (ಐಷಾರಾಮಿ) ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಮಾಸ್ಕ್ ಧರಿಸುವುದನ್ನು ಭಾನುವಾರದಿಂದ ಕಡ್ಡಾಯಗೊಳಿಸಿದೆ.

ಸ್ಥಳೀಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ದ್ರಾವಕಗಳನ್ನು ಖರೀದಿಸಿ ನಿರ್ವಾಹಕರು ಹಾಗೂ ಚಾಲಕರಿಗೆ ಪೂರೈಸುವಂತೆ ಕೇಂದ್ರ ಕಚೇರಿಯಿಂದ ಶನಿವಾರ ಸುತ್ತೋಲೆ ಕಳುಹಿಸಲಾಗಿದೆ. ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಬಸವರಾಜ ಅಮ್ಮಣ್ಣವರ ’ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ಗಳಲ್ಲಿ ಸ್ವಚ್ಛತೆಗೆ ಒತ್ತು

ಸಾರಿಗೆ ಸಂಸ್ಥೆ ಬಸ್‌ಗಳ ಸ್ವಚ್ಛಗೊಳಿಸುವ ವೇಳೆಇಲ್ಲಿಯವರೆಗೆ ಸಾಮಾನ್ಯ ರೀತಿಯಲ್ಲಿ ತೊಳೆಯಲಾಗುತ್ತಿತ್ತು. ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಎಲ್ಲ ಬಸ್‌ಗಳನ್ನು ಸ್ಯಾನಿಟೈಸೇಶನ್‌ಗೆ (ನೈರ್ಮಲೀಕರಣ) ಒಳಪಡಿಸಲಾಗುತ್ತಿದೆ. ಡೆಟಾಲ್ ಹಾಗೂ ಬ್ಯಾಕ್ಟೀರಿಯಾ ಮತ್ತು ವೈರಸ್ ನಾಶಕ ರಾಸಾಯನಿಕಗಳನ್ನು (ಲೋಶನ್) ಬೆರೆಸಿ ಬಸ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ವಿಭಾಗಗಳಿಗೂ ಸುತ್ತೋಲೆ ಕಳುಹಿಸಲಾಗಿದೆ ಎಂದು ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ ತಿಳಿಸಿದರು.

ಅದರಲ್ಲೂ ನಿಗಮದ ವ್ಯಾಪ್ತಿಯಲ್ಲಿರುವ ಹವಾನಿಯಂತ್ರಿತ ವ್ಯವಸ್ಥೆ ಒಳಗೊಂಡ165 ಪ್ರಿಮಿಯರ್ ಬಸ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಬಸ್‌ಗಳಲ್ಲಿ ಚಾಲಕರು, ನಿರ್ವಾಹಕರ ಜೊತೆಗೆಪ್ರಯಾಣಿಕರಿಗೂ ಸ್ಯಾನಿಟೈಸೇಶನ್ ದ್ರಾವಕಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳುತ್ತಾರೆ.

ಬಸ್ ನಿಲ್ದಾಣ, ಅಲ್ಲಿನ ವಸತಿ ಗೃಹ, ಡಿಪೊ,ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು. ಅಗತ್ಯಬಿದ್ದಲ್ಲಿ ನಿರ್ವಾಹಕರು ಹ್ಯಾಂಡ್‌ಗ್ಲೌಸ್ ಹಾಕಿಕೊಳ್ಳುವುದು, ಮಾಸ್ಕ್ ಧರಿಸುವಂತೆ ಪ್ರಯಾಣಿಕರಿಗೂ ಸೂಕ್ತ ತಿಳಿವಳಿಕೆ ನೀಡುವ ಬಗ್ಗೆ ಕೆಎಸ್‌ಆರ್‌ಟಿಸಿ ಆಫೀಸರ್ಸ್ ವೆಲ್‌ಫೇರ್ ಅಸೋಸಿಯೇಶನ್ ಕರಪತ್ರದ ಮೂಲಕ ಜಾಗೃತಿ ಮೂಡಿಸುತ್ತಿದೆ.

ಪ್ರಯಾಣದ ವೇಳೆ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಯಾರಿಗಾದರೂ ಕಂಡುಬಂದಲ್ಲಿ ಸಮೀಪದ ಘಟಕ ವ್ಯವಸ್ಥಾಪಕರು ಇಲ್ಲವೇ ಆರೋಗ್ಯ ಇಲಾಖೆ ಹೆಲ್ಪ್‌ಲೈನ್ ಸಂಖ್ಯೆ 104 ಸಂಪರ್ಕಿಸುವಂತೆ ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT