ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ | ಪಾರಂಪರಿಕ ಪುಷ್ಕರಣಿಗೆ ಜೀವಕಳೆ

Published 10 ಸೆಪ್ಟೆಂಬರ್ 2023, 4:20 IST
Last Updated 10 ಸೆಪ್ಟೆಂಬರ್ 2023, 4:20 IST
ಅಕ್ಷರ ಗಾತ್ರ

ಬಾದಾಮಿ: ಸಮೀಪದ ಶಿವಯೋಗಮಂದಿರ ಮತ್ತು ಹೊಸ ಮಹಾಕೂಟೇಶ್ವರ ದೇವಾಲಯದ ರಸ್ತೆ ಮಧ್ಯೆ ನಿಸರ್ಗ ಸೌಂದರ್ಯದ ಬೆಟ್ಟದ ಕಂದಕದಲ್ಲಿ ಚಾಲುಕ್ಯ ಶಿಲ್ಪಿಗಳು ದ್ರಾವಿಡ ಶೈಲಿಯ ದೇವಾಲಯ ಮತ್ತು ಗಜಪ್ರಷ್ಠ ಆಕಾರದಲ್ಲಿ ಮಹಾಕೂಟೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಾಲಯಗಳ ಸಮುಚ್ಚಯವವೇ ಹಳೇ ಮಹಾಕೂಟ.

ದೇವಾಲಯದ ಎದುರಿಗೆ ನಂದಿವಿಗ್ರಹ, ವಿಶಾಲವಾದ ಪುಷ್ಕರಣಿಯನ್ನು ನಿರ್ಮಿಸಿದ್ದಾರೆ. ವರ್ಷದುದ್ದಕ್ಕೂ ಪುಷ್ಕರಣಿಯಲ್ಲಿ ನೀರು ಸಂಗ್ರಹವಾಗಿ ಹರಿಯುತ್ತದೆ. ಹರಿಯುವ ನೀರನ್ನು ರೈತರು ತೋಟಕ್ಕೆ ಬಳಸುವರು. ದೇವಾಲಯದ ಸುತ್ತ ಹಸಿರ ಸಿರಿಯ ಸೌಂದರ್ಯ ಇಮ್ಮಡಿಯಾಗಿದೆ.

‘ ಪುಷ್ಕರಣಿ ಸಂಪೂರ್ಣವಾಗಿ ಶಿಥಿಲವಾಗಿ ಮೆಟ್ಟಿಲು ಮತ್ತು ಕಾಲುವೆ ಕುಸಿದು ಅಪಾಯದ ಸ್ಥಿತಿಯಲ್ಲಿತ್ತು. ನಂದಿಕೇಶ್ವರ ಗ್ರಾಮ ಪಂಚಾಯ್ತಿ ನರೇಗಾ ಯೋಜನೆಯಲ್ಲಿ ₹ 10 ಲಕ್ಷ ವೆಚ್ಚದಿಂದ ಪುಷ್ಕರಣಿ ಮತ್ತು ಕಾಲುವೆಯನ್ನು ದುರಸ್ತಿ ಕೈಗೊಂಡು ಜೀವಕಳೆ ತುಂಬಲಾಗಿದೆ. ಪಕ್ಕದಲ್ಲಿ ಉದ್ಯಾನ ನಿರ್ಮಿಸಿದೆ ’ ಎಂದು ನಂದಿಕೇಶ್ವರ ಗ್ರಾಮದ ಶಿವಕುಮಾರ ಮಡ್ಡಿ ಹೇಳಿದರು.

ಹಳೇ ಮಹಾಕೂಟೇಶ್ವರ ದೇವಾಲಯವು ಇತಿಹಾಸ ತಜ್ಞರಿಂದ, ಪ್ರವಾಸಿಗರಿಂದ ಮತ್ತು ಭಕ್ತರಿಂದ ದೂರವಾಗಿದೆ. ಇತಿಹಾಸ ತಜ್ಞರು ಸಂಶೋಧನೆ ಮಾಡಬೇಕಿದೆ. ದ್ರಾವಿಡ ಶೈಲಿಯ ಎರಡು ಶಿವಲಿಂಗ ದೇವಾಲಯಗಳನ್ನು ರಾಜ್ಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿಸಬೇಕಿದೆ.

ಮಾತೃದೇವತೆಯಾದ ಲಜ್ಜಾಗೌರಿಯ ಮೂರ್ತಿಯೊಂದು ಇತ್ತು. ಇದನ್ನು ಯಾರೋ ಒಡೆದು ಭಗ್ನಗೊಳಿಸಿದ್ದಾರೆ. ಆಲದ ಮರದ ಕೆಳಗೆ ಶಕ್ತಿದೇವತೆಯ ಮೂರ್ತಿಯನ್ನು ಕಾಣಬಹುದು. ಶಿವ ಮತ್ತು ಶಿವೆಯ ಸಂಗಮವೇ ಮಹಾಕೂಟ ಎಂದು ಇತಿಹಾಸ ತಜ್ಞರು ಹೇಳುವರು.

ದೇವಾಲಯದ ಮುಖ್ಯ ರಸ್ತೆಯಲ್ಲಿ ನೂರಾರು ವರ್ಷದ ಆಲದಮರವು ಬೃಹದಾಕಾರವಾಗಿ ಬೆಳೆದು ಭಕ್ತರನ್ನು ಸ್ವಾಗತಿಸುವಂತಿದೆ.

‘ದೇವಾಲಯದ ಹಿಂದೆ ಬೃಹತ್ ಕೆರೆ ಇದೆ. ಕೆರೆಯು ಸಂಪೂರ್ಣವಾಗಿ ಹೂಳು ತುಂಬಿದೆ. ಹೂಳನ್ನು ತೆಗೆಸಿದರೆ ಮಳೆಗಾಲದಲ್ಲಿ ಕೆರೆಯು ಭರ್ತಿಯಾಗಿ ಸುತ್ತಲಿನ ಕೊಳವೆಬಾವಿಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗುವುದು ’ ಎಂದು ನಂದಿಕೇಶ್ವರ ಗ್ರಾಮದ ರೈತ ಸದಾಶಿವ ತೋಟಗಂಟಿ ಹೇಳಿದರು.

ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ದಿನ ಸೆ. 14 ರಂದು ಸಂಜೆ 5 ಗಂಟೆಗೆ ಹಳೇ ಮಹಾಕೂಟೇಶ್ವರ ರಥೋತ್ಸವ ಜರುಗಲಿದೆ. ಬೆಳವಲಕೊಪ್ಪ ಗ್ರಾಮದ ಭಕ್ತರು ಪಾದಯಾತ್ರೆಯ ಮೂಲಕ ರಥಕ್ಕೆ ಕಳಸವನ್ನು ತರುವರು. ಸುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವರು.

ಹಳೇ ಮಹಾಕೂಟೇಶ್ವರ ದೇವಾಲಯಕ್ಕೆ ಭಕ್ತರನ್ನು ಸ್ವಾಗತಿಸುವಂತೆ ರಸ್ತೆಯಲ್ಲಿ ಬೆಳೆದು ನಿಂತ ಬೃಹದಾಕಾರದ ಆಲದ ಮರ
ಹಳೇ ಮಹಾಕೂಟೇಶ್ವರ ದೇವಾಲಯಕ್ಕೆ ಭಕ್ತರನ್ನು ಸ್ವಾಗತಿಸುವಂತೆ ರಸ್ತೆಯಲ್ಲಿ ಬೆಳೆದು ನಿಂತ ಬೃಹದಾಕಾರದ ಆಲದ ಮರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT