ಶುಕ್ರವಾರ, ಜುಲೈ 1, 2022
26 °C
20 ವರ್ಷಗಳ ಹಿಂದಿನ ದರಕ್ಕೆ ಕುಸಿತ: ಕ್ವಿಂಟಲ್‌ಗೆ ₹1130ರ ಆಸುಪಾಸು!

ಬಾಗಲಕೋಟೆ: ಮೆಕ್ಕೆಜೋಳದ ಬೆಲೆ ಪಾತಾಳಕ್ಕೆ, ದಿಕ್ಕೆಟ್ಟ ಬೆಳೆಗಾರ

ರಾಮಕೃಷ್ಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕುಳಗೇರಿ ಕ್ರಾಸ್: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದು ತಡೆಯಲು ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರು ಇಲ್ಲದೇ ಮೆಕ್ಕೆಜೋಳದ ಬೆಲೆ ದಿಢೀರನೆ ಪಾತಾಳಕ್ಕೆ ಕುಸಿದಿದೆ. ಇದರಿಂದ ರೈತಾಪಿ ವರ್ಗ ದಿಕ್ಕೆಟ್ಟು ಕುಳಿತಿದೆ.

ಫೆಬ್ರುವರಿ ಮೊದಲ ವಾರದಲ್ಲಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ಗೆ ₹2070 ಇತ್ತು. ಮಾರ್ಚ್ ಮೊದಲ ವಾರದಲ್ಲಿ ₹ 1870ಕ್ಕೆ ಕುಸಿದಿತ್ತು. ನಂತರ ಘೋಷಣೆಯಾದ ಲಾಕ್‌ಡೌನ್‌ ಹಾಗೂ ಕೊರೊನಾ ವೈರಸ್ ಬಾಧೆ ಇಡೀ ಮಾರುಕಟ್ಟೆಯನ್ನು ಬಲಿ ತೆಗೆದುಕೊಂಡಿದೆ. ಮಾರ್ಚ್ ಕೊನೆಯ ವಾರದಲ್ಲಿ ಮೆಕ್ಕೆಜೋಳ ಕ್ವಿಂಟಲ್‌ಗೆ ₹1130ಕ್ಕೆ ಬಂದು ತಲುಪಿದೆ. ಅರ್ಧಕ್ಕರ್ಧ ಬೆಲೆ ಕುಸಿದ ಪರಿಣಾಮ ರೈತಾಪಿ ವರ್ಗ ಸಂಪೂರ್ಣ ಕುಸಿದು ಹೋಗಿದೆ. 

ಮೆಕ್ಕೆಜೋಳ ಅಂಗನವಾಡಿ ಆಹಾರ, ಕುಕ್ಕುಟೋದ್ಯಮಕ್ಕೆ ಬಳಕೆಯಾಗುತ್ತದೆ. ಜೊತೆಗೆ ವಿದೇಶಕ್ಕೂ ರಫ್ತು ಆಗುತ್ತದೆ. ಈಗ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಲಾಕ್‌ಡೌನ್ ಪರಿಣಾಮ ಮಕ್ಕಳ ಮನೆಗೂ ಆಹಾರ ತಲುಪಿಸಲು ಆಗುತ್ತಿಲ್ಲ. ಹೀಗಾಗಿ ಅಂಗನವಾಡಿ ಆಹಾರಕ್ಕೆ ಬೇಡಿಕೆಯೂ ಇಲ್ಲ.

’ಕೊರೊನಾ ಹಾಗೂ ಹಕ್ಕಿಜ್ವರದ ನೆಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಅಪಪ್ರಚಾರದಿಂದ ಬಹುತೇಕ ಕುಕ್ಕುಟೋದ್ಯಮ ನೆಲಕಚ್ಚಿದೆ. ಮೆಕ್ಕೆಜೋಳ ಕೋಳಿಗೆ ಆಹಾರವಾಗಿ ಬಳಕೆಯಾಗುತ್ತಿತ್ತು. ಈಗ ಫಾರಂಗಳಲ್ಲಿ ಕೋಳಿ ಸಾಕಾಣಿಕೆಯೇ ನಿಂತಿದೆ ಇನ್ನು ಮೆಕ್ಕೆಜೋಳ ಯಾರು ಖರೀದಿಸುತ್ತಾರೆ‘ ಎಂದು ವರ್ತಕರು ಪ್ರಶ್ನಿಸುತ್ತಾರೆ.

ಜಿಲ್ಲೆಯಲ್ಲಿ ಬಾದಾಮಿ, ಜಮಖಂಡಿ, ಬೀಳಗಿ ಹಾಗೂ ಮುಧೋಳ ತಾಲ್ಲೂಕುಗಳ ನೀರಾವರಿ ಸೌಕರ್ಯ ಇರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಬಾದಾಮಿ ತಾಲ್ಲೂಕಿನಲ್ಲಿ ಹೆಚ್ಚಿನ ಪಾಲು ಕುಳಗೇರಿ ಹೋಬಳಿಯಲ್ಲಿಯೇ ಬೆಳೆಯಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು