ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಿ ಸಂಧಾನ: 27,376 ಪ್ರಕರಣಗಳು ಇತ್ಯರ್ಥ

ಲೋಕ ಅದಾಲತ್; ಒಂದಾದ 10 ಜೋಡಿ 
Published : 16 ಸೆಪ್ಟೆಂಬರ್ 2024, 15:56 IST
Last Updated : 16 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 27,376 ‍ಪ್ರಕರಣಗಳನ್ನು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.

ವಿವಿಧ ನ್ಯಾಯಾಲಯಗಳಲ್ಲಿನ 7,151 ಪೈಕಿ 4,819 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 24,107 ಪೈಕಿ 22,557 ಪ್ರಕರಣಗಳು ಇತ್ಯರ್ಥ ಮಾಡಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ ನೇತೃತ್ವದಲ್ಲಿ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ₹25.11 ಕೋಟಿ ಮೊತ್ತದ ಪ್ರಕರಣಗಳಿಗೆ ಪರಿಹಾರ ಕೊಡಿಸಲಾಯಿತು.

ಜಿಲ್ಲಾ ನ್ಯಾಯಾಲಯದಲ್ಲಿರುವ ಬಾಕಿ ಇರುವ 1,471 ಪೈಕಿ 1,186 ಪ್ರಕರಣಗಳು ಇತ್ಯರ್ಥಗೊಂಡರೆ, ಬೀಳಗಿ ನ್ಯಾಯಾಲಯದಲ್ಲಿನ 230 ಪೈಕಿ 188, ಮುಧೋಳ ನ್ಯಾಯಾಲಯದಲ್ಲಿನ 557 ಪೈಕಿ 456, ಬನಹಟ್ಟಿ ನ್ಯಾಯಾಲಯದಲ್ಲಿನ 1,364 ಪೈಕಿ 531, ಹುನಗುಂದ ನ್ಯಾಯಾಲಯದಲ್ಲಿನ 478 ಪೈಕಿ 346, ಇಳಕಲ್ ನ್ಯಾಯಾಲಯದಲ್ಲಿನ 392 ಪೈಕಿ 323, ಜಮಖಂಡಿ ನ್ಯಾಯಾಲಯದಲ್ಲಿನ 2,028 ಪೈಕಿ 1,263 ಹಾಗೂ ಬಾದಾಮಿ ನ್ಯಾಯಾಲಯದಲ್ಲಿನ 731 ಪೈಕಿ 626 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

ಬಾಕಿ ಇರುವ ಪ್ರಕರಣಗಳಲ್ಲಿ ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ 770 ಪ್ರಕರಣಗಳ ಪೈಕಿ 683, ಪೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದ 3,463 ಪೈಕಿ 3,430 ಪ್ರಕರಣಗಳು ಇತ್ಯರ್ಥಗೊಂಡು ₹3.59 ಲಕ್ಷ ನಿಗದಿಪಡಿಸಲಾಯಿತು.

ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ 1,686 ಪೈಕಿ 124 ಇತ್ಯರ್ಥಗೊಂಡು ₹1.75 ಕೋಟಿ, ವಿದ್ಯುತ್‌ಗೆ ಸಂಬಂಧಿಸಿದ 154 ಪೈಕಿ ಎಲ್ಲ ಪ್ರಕರಣಗಳು ಇತ್ಯರ್ಥಗೊಂಡು ₹3.39 ಲಕ್ಷ, ಸಂಚಾರಿ ನಿಯಮ ಉಲ್ಲಂಘನೆ ಸಂಬಂಧಿಸಿದ 7,812 ಪೈಕಿ ಎಲ್ಲ ಪ್ರಕರಣ ಇತ್ಯರ್ಥಗೊಂಡು ₹25.99 ಲಕ್ಷ ನಿಗದಿ ಪಡಿಸಲಾಯಿತು. ಆಸ್ತಿ ತೆರಿಗೆಗೆ ಸಂಬಂಧಿಸಿದ 14,064 ಪೈಕಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹3.53 ಕೋಟಿ ಸೆಟೆಲ್‌ಮೆಂಟ್ ಮಾಡಲಾಯಿತು.

ಲೋಕ ಅದಾಲತ್‌ನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಸ್.ಬಿ.ರೆಹಮಾನ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ನ್ಯಾಯಾಧೀಶರು ಹಾಗೂ ಸಿಜೆಎಂ ಹೇಮಾ ಪಸ್ತಾಪೂರ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಮಹೇಶ ಪಾಟೀಲ, ಎರಡನೇ ಹೆಚ್ಚುವರಿ ಹಿರಿಯ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಎಂ.ಎಚ್.ಕಡಕೋಳ ಇದ್ದರು.

ಒಂದಾದ ಹತ್ತು ಜೋಡಿಗಳು ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 10 ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಯಿತು. ಒಂದಾದ ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಜೀವನ ಆರಂಭಿಸಲು ಮುಂದಾದರು. ಸಿಹಿ ಹಂಚಿ ಅವರಿಗೆ ಶುಭ ಕೋರಲಾಯಿತು. ಜಮೀನು ಹಂಚಿಕೆ ವಿವಾದ ಇತ್ಯರ್ಥ ನಾಗಸಂಪಿಗೆ ಗ್ರಾಮದಲ್ಲಿರುವ ಒಟ್ಟು 80 ಎಕರೆ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ಬಾಗಲಕೋಟೆ ಎ.ಎಸ್.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಭೀಮಪ್ಪ ರಾಮಪ್ಪ ಮೇಟಿ ಹಾಗೂ ಇತರರ ವಿರುದ್ದ ಶಿವನಪ್ಪ ಯಲ್ಲಪ್ಪ ಮೇಟಿ (೯೦ ವರ್ಷ) ಹಾಗೂ ಇತರರು ದಾವೆ ಹೂಡಿದ್ದರು. ಸದರಿ ಪ್ರಕರಣದಲ್ಲಿ ವಾದಿ ಪ್ರದಿವಾದಿಗಳು ಒಂದೇ ಕುಟುಂಬದ ಸದಸ್ಯರಾಗಿದ್ದರು. 2ನೇ ಹೆಚ್ಚುವರಿ ನ್ಯಾಯಾಧೀಶ ಹಾಗೂ ಪಿ.ಎಸ್.ಮಗಜಿ ಮನವಲಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಜನತಾ ನ್ಯಾಯಾಲಯದಲ್ಲಿ ಬೇಗನೇ ಪ್ರಕರಣ ಇತ್ಯರ್ಥಗೊಂಡಿದ್ದಕ್ಕೆ ಶಿವನಪ್ಪ ಯಲ್ಲಪ್ಪ ಮೇಟಿ ಖುಷಿಪಟ್ಟು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT