ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಬಾಗಲಕೋಟೆ: ಒಳೇಟಿನಿಂದಾಗಿ ಸಿಗದ ಗೆಲುವಿನ ಲೆಕ್ಕಾಚಾರ

Published 16 ಮೇ 2024, 6:17 IST
Last Updated 16 ಮೇ 2024, 6:17 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವಾಗಬಹುದು ಎನ್ನುವ ಲೆಕ್ಕ ಬಿಜೆಪಿ, ಕಾಂಗ್ರೆಸ್ ನಾಯಕರಿಬ್ಬರಿಗೂ ಸಿಗುತ್ತಿಲ್ಲ. ಕಾರಣ ಸ್ವಪಕ್ಷೀಯರೇ ನೀಡಿರುವ ಒಳಹೊಡೆತ ಲೆಕ್ಕ ಸಿಗುತ್ತಿಲ್ಲ. ಆ ಲೆಕ್ಕ ಸಿಗದೇ ಗೆಲುವಿನ ಲೆಕ್ಕ ಸಿಗುವುದು ಕಷ್ಟ ಆಗುತ್ತಿದೆ.

ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಿಬ್ಬರ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಎನ್ನದೇ ದುಡಿದಿದ್ದಾರೆ. ನಾಯಕರೂ ಕೂಡ ಕೆಲಸ ಮಾಡಿದ್ದಾರೆ. ಆದರೆ, ಅವರಲ್ಲಿ ಒಳೇಟು ಕೊಟ್ಟವರು ಯಾರು? ಎಷ್ಟು ಪ್ರಮಾಣದಲ್ಲಿ ಕೊಟ್ಟಿದ್ದಾರೆ ಎಂಬುದು ಅಭ್ಯರ್ಥಿಗಳ ಲೆಕ್ಕಕ್ಕೆ ಸಿಗುತ್ತಿಲ್ಲ.

2014ರಲ್ಲಿ ನಡೆದ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಐವರು, ಬಿಜೆಪಿಯ ಮೂವರು ಶಾಸಕರಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿತ್ತು. ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿದ್ದರು. ಆದರೂ, ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿತ್ತು.

2019ರಲ್ಲಿ ಚುನಾವಣೆ ನಡೆದಾಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೇ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರು. ಪ್ರತಿಪಕ್ಷದ ನಾಯಕರೂ ಆಗಿದ್ದರು. ಆಗಲೂ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ದಡ ಸೇರಲಿಲ್ಲ. ಒಂದೆಡೆ ಮೋದಿ ಅಲೆಯಾದರೆ, ಅದಕ್ಕಿಂತ ಕಾಂಗ್ರೆಸ್‌ ಪಕ್ಷದ ನಾಯಕರ ಒಳಹೊಡೆತಗಳೂ ಕಾರಣವಾಗಿದ್ದವು ಎನ್ನುವುದನ್ನು ಕಾಂಗ್ರೆಸ್‌ ನಾಯಕರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವೀಣಾ ಕಾಶಪ್ಪನವರ ಈ ಬಾರಿಯೂ ಆಕಾಂಕ್ಷಿಯಾಗಿದ್ದರು. ನಿಮಗೆ ಬೆಂಬಲ ಎನ್ನುವಂತಿದ್ದ ನಾಯಕರು ಪಕ್ಷದ ಹೈಕಮಾಂಡ್ ಮುಂದೆ ಮಾತ್ರ ನಕಾರ ಸೂಚಿಸಿದ್ದರು. ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಅಭ್ಯರ್ಥಿಯಾದಾಗ ಹೊರಗಡೆ ಎಲ್ಲರೂ ಸ್ವಾಗತಿಸಿದರಾದರೂ, ಮನಸ್ಸಿನ ನಡೆ ಏನಾಗಿತ್ತು ಎಂಬುದು ನಿಗೂಢವಾಗಿದೆ.

ಬೇರೆ ಜಿಲ್ಲೆಯವರಿಗೆ ಸಂಸದರಾಗಲು ಅವಕಾಶ ನೀಡಬೇಕೇ? ಮುಂದಿನ ದಿನಗಳಲ್ಲಿ ಪಾಟೀಲರ ಕುಟುಂಬ ರಾಜಕೀಯವಾಗಿ ಜಿಲ್ಲೆಯನ್ನು ಆವರಿಸಿಕೊಳ್ಳುತ್ತದೆಯೇ? ಸಚಿವ ಪಾಟೀಲ ಜಿಲ್ಲೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಹುದೇ? ಪುತ್ರಿಯ ಗೆಲುವಿಗಾಗಿ ವಿರೋಧವಿದ್ದರೂ ಎದುರಾಳಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡವರು ಗೆದ್ದ ನಂತರ ಇನ್ನೇನು ಮಾಡಬಹುದು? ಅವರಿಗೆ ಯಾವ ಭರವಸೆ ನೀಡಿ ಸೇರ್ಪಡೆ ಮಾಡಿಕೊಂಡಿದ್ದಾರೋ ಎಂಬ ಅನುಮಾನಗಳು ಒಳೇಟಿಗೆ ಕಾರಣಗಳಾಗಲಿವೆ.

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಜನತಾ ಪರಿವಾರದಿಂದ ಬಂದವರು. ಉಳಿದ ಪಕ್ಷಗಳ ನಾಯಕರೊಂದಿಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ಈ ಕಾರಣಗಳಿಗೂ ಗೌಡರ ಪರವಾಗಿ ಜಿಲ್ಲೆಯ ಉಳಿದ ಪಕ್ಷಗಳ ನಾಯಕರೂ ಚುನಾವಣಾ ಸಂದರ್ಭದಲ್ಲಿ ಸಾಫ್ಟ್‌ ಕಾರ್ನರ್ ಅನುಸರಿಸುತ್ತಾರೆ ಎಂಬ ಮಾತುಗಳಿವೆ.

ಇನ್ನೊಂದೆಡೆ ಬಿಜೆಪಿಯಲ್ಲಿಯೂ ಹಲವಾರು ನಾಯಕರಿಂದ ಒಳೇಟಿನ ಭೀತಿಗಳಿವೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಿಲ್ಲ. ಜಿಲ್ಲೆಯ ನಾಯಕರ ನಡುವೆ ಮುನಿಸಿದ್ದರೂ, ಶಮನಕ್ಕೆ ಮುಂದಾಗದೇ ತಮ್ಮ ಚುನಾವಣೆ ಮಾಡಿಕೊಂಡು ಮುಂದೆ ಸಾಗುತ್ತಾರೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಟಿಕೆಟ್‌ಗೆ ಸಹಾಯ ಮಾಡಲಿಲ್ಲ ಎಂಬುದೂ ಸೇರಿದಂತೆ ಹಲವು ಕಾರಣಗಳಿಗೆ ಒಳೇಟಿನ ಭೀತಿ ಇದೆ.

ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕರು ಹಿಂಬಾಗಿಲಿನ ಮೂಲಕ ಬಿಜೆಪಿ ನಾಯಕರ ಮನೆ ಪ್ರವೇಶಿಸಿದ್ದರು. ಜಾತಿ, ಇನ್ನಿತರೆ ಅಸ್ತ್ರಗಳ ಮೂಲಕ ಕಟ್ಟಿಹಾಕುವ ಪ್ರಯತ್ನ ಮಾಡಿದ್ದರು. ಇದು ಎಷ್ಟು ಫಲ ನೀಡಿದೆ ಎಂಬುದು ಫಲಿತಾಂಶ ನಿರ್ಧರಿಸಲಿದೆ.

ಎದುರಾಳಿಯ ಸಾಮರ್ಥ್ಯವನ್ನು ಲೆಕ್ಕ ಹಾಕಬಹುದು. ಆದರೆ, ಜತೆಗಿದ್ದುಕೊಂಡೇ ಒಳೇಟು ನೀಡುವವರ ಲೆಕ್ಕ ಹಾಕುವುದು ಅಭ್ಯರ್ಥಿಗಳಿಗೆ ಕಷ್ಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT