ಲೋಕಾಪುರ: ವೇಮನರ ತತ್ವ, ಸಿದ್ಧಾಂತಗಳು ಜಗತ್ತಿಗೆ ಮಾದರಿಯಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಸಮೀಪದ ಮೆಟಗುಡ್ಡ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಧಾನ ಹಾಗೂ ಹೇಮ ವೇಮ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಚನಾತ್ಮಕ ಕೆಲಸಗಳನ್ನು ಮಾಡುವುದರಿಂದ ಒಳ್ಳೆ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಅವರ ವಚನ ಮತ್ತು ಬದುಕನ್ನು ನಾಡಿಗೆ ತಿಳಿಸುವ ಕಾರ್ಯ ನಡೆಯಬೇಕು. ಸಮುದಾಯಗಳ ಮಧ್ಯೆ ಸಮನ್ವಯ ಇದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡುವುದಾಗಿ ಸಚಿವ ತಿಮ್ಮಾಪೂರ ಭರವಸೆ ನೀಡಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಮುದಾಯ ಭವನವನ್ನು ಸದುಪಯೋಗಪಡಿಕೊಳ್ಳಬೇಕು ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಬಿ.ಆರ್.ಯಾವಗಲ್, ಆರ್.ವಿ.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಸ್.ತಳೇವಾಡ, ಸತೀಶ ಬಂಡಿವಡ್ಡರ ಇದ್ದರು.