ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಲಿಂಗಪುರ | ಹಾಳು ಕೊಂಪೆಯಾದ ಸರ್ಕಾರಿ ಕಟ್ಟಡ

ಅಸಮರ್ಪಕ ನಿರ್ವಹಣೆ; ಅನೈತಿಕ ಚಟುವಟಿಕೆ ತಾಣವಾಗಿ ಪರಿವರ್ತನೆ
ಮಹೇಶ ಮನ್ನಯ್ಯನವರಮಠ
Published : 12 ಆಗಸ್ಟ್ 2024, 5:42 IST
Last Updated : 12 ಆಗಸ್ಟ್ 2024, 5:42 IST
ಫಾಲೋ ಮಾಡಿ
Comments

ಮಹಾಲಿಂಗಪುರ: ಸರ್ಕಾರವು ವಿವಿಧ ಇಲಾಖೆಗಳಿಗೆ ಕೋಟ್ಯಂತರ ಅನುದಾನ ನೀಡಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದೆ. ಆದರೆ, ಹಳೇ ಕಟ್ಟಡಗಳನ್ನು ಹಾಗೇ ಬಿಟ್ಟು ಪಾಳು ಬೀಳುವಂತೆ ಮಾಡುತ್ತಿದೆ. ಇಂತದ್ದೇ ಅವಸ್ಥೆಯನ್ನು ಪಟ್ಟಣದ ಹಲವು ಸರ್ಕಾರಿ ಕಟ್ಟಡಗಳು ಹೊಂದಿದ್ದು, ಹಾಳು ಕೊಂಪೆಯಾಗಿ ಮಾರ್ಪಟ್ಟಿವೆ.

ಸರ್ಕಾರಿ ಆಸ್ಪತ್ರೆ ಹಳೆ ಕಟ್ಟಡ:

ಪಟ್ಟಣದ ಗಾಂಧಿ ವೃತ್ತದ ಬಳಿ ಇರುವ ಸರ್ಕಾರಿ ಆಸ್ಪತ್ರೆ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅಂದಾಜು 13,500 ಚದರ ಅಡಿ ಜಾಗೆಯ ಮೇಲೆ ಕಟ್ಟಡ ನಿರ್ಮಾಣವಾಗಿದೆ. ಈ ಜಾಗೆಯು ಲೋಕೋಪಯೋಗಿ ಇಲಾಖೆ ಹೆಸರಿನಲ್ಲಿದೆ. ₹12 ಕೋಟಿಗೂ ಅಧಿಕ ಮೌಲ್ಯ ಹೊಂದಿರುವ ಈ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಆಗರವಾಗಿದೆ.

ಕಟ್ಟಡದ ಒಳಗೆ ಮುಳ್ಳು ಪೊದೆಗಳು ಬೆಳೆದಿದ್ದರಿಂದ ಹಾವು, ಚೇಳು ಸೇರಿ ವಿಷ ಜಂತುಗಳ ಹಾವಳಿಯೂ ಹೆಚ್ಚಾಗಿದೆ.

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ 1955 ರಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿತ್ತು. ಸ್ಥಾನಿಕ ಅಭಿವೃದ್ಧಿ ಯೋಜನೆಯಡಿ 1957 ರಲ್ಲಿ ಮೈಸೂರು ರಾಜ್ಯದ ಅಂದಿನ ಆರೋಗ್ಯ ಸಚಿವ ಆರ್.ಎಂ.ಪಾಟೀಲ, 1959ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರು ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಉದ್ಘಾಟಿಸಿದ್ದರು. ಪಟ್ಟಣದ ಮಧ್ಯ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ ಆಗಿದ್ದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು. 1996ರಲ್ಲಿ ಈ ಆಸ್ಪತ್ರೆಯನ್ನು ಪಟ್ಟಣದ ಅನತಿ ದೂರದಲ್ಲಿದ್ದ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಹೀಗಾಗಿ, ಹೊಸ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಗೊಂಡ ನಂತರ ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಯಿತು. ಅಲ್ಲದೆ, ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿತು.

ಈ ಕಟ್ಟಡದ ಪಕ್ಕವೇ ಇರುವ ಪುರಸಭೆಯ ಹಳೆ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಆಗುವವರೆಗೂ ಇದೇ ಕಟ್ಟಡದ ಸ್ವಲ್ಪ ಭಾಗದಲ್ಲಿ ಪುರಸಭೆ ಕಾರ್ಯ ನಿರ್ವಹಿಸಿತ್ತು. ಕೆಲ ವರ್ಷಗಳವರೆಗೆ ಗ್ರಂಥಾಲಯವೂ ಕಾರ್ಯ ನಿರ್ವಹಿಸಿತ್ತು. ಇದೇ ಆವರಣದಲ್ಲಿದ್ದ ನಗರ ಭೂಮಾಪನ ಕಚೇರಿ ಕಟ್ಟಡ ಶಿಥಿಲಾವಸ್ಥೆ ಇರುವುದರಿಂದ ಸ್ಥಳಾಂತರಗೊಂಡಿದೆ.

ಇದೇ ಕಟ್ಟಡದಲ್ಲಿ ಉಪಖಜಾನೆ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವ ಕೂಡ ಸಲ್ಲಿಸಲಾಗಿದೆ. ಕಟ್ಟಡದ ಒಂದು ಕೋಣೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ, ಮತ್ತೊಂದು ಕೋಣೆಯಲ್ಲಿ ಅಟಲ್‍ಜೀ ಜನಸ್ನೇಹಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೂ, ಕಟ್ಟಡ ಯಾವುದೇ ಕ್ಷಣ ಕುಸಿದು ಬೀಳುವ ಆತಂಕದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕಟ್ಟಡದ ಕಿಟಕಿಗಳು, ಬಾಗಿಲುಗಳು ಮುರಿದಿವೆ. ಹಂಚು ಕಿತ್ತು ಹೋಗಿದೆ. ಈ ಕಟ್ಟಡದ ಎರಡು ಕೋಣೆಗಳನ್ನು ಚುನಾವಣೆಗೆ ಮತಗಟ್ಟೆಯನ್ನಾಗಿಸಲಾಗಿತ್ತು. ಶಿಥಿಲಾವಸ್ಥೆ ಕಾರಣದಿಂದ ಕಳೆದ ವರ್ಷದಿಂದ ಮತಗಟ್ಟೆ ರದ್ದು ಮಾಡಲಾಗಿದೆ.

‘ಈ ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸಿಕೊಂಡು ಅಲ್ಲಿ ಎರಡು ಅಂತಸ್ತಿನ ನೂತನ ಕಟ್ಟಡ ನಿರ್ಮಿಸಿ ಕೆಳ ಮಹಡಿಯಲ್ಲಿ ಕಾಂಪ್ಲೆಕ್ಸ್ ಹಾಗೂ ತುರ್ತು ಆರೋಗ್ಯ ಚಿಕಿತ್ಸೆ ಘಟಕ, ಎರಡನೇ ಮಹಡಿಯಲ್ಲಿ ಸರ್ಕಾರಿ ಕಚೇರಿಗಳಿಗೆ ಸ್ಥಳವಕಾಶ ನೀಡಬೇಕು’ ಎಂಬುದು ಸಾರ್ವಜನಿಕರ ಆಗ್ರಹ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಅಲ್ಲದೆ, 2011 ರಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಠರಾವು ಸಹ ಮಾಡಲಾಗಿದೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಟೆಂಡರ್ ಹಾಲ್ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಕಟ್ಟಡದೊಳಗೆ ನಿರುಪಯುಕ್ತ ವಸ್ತುಗಳನ್ನು ಇರಿಸಲಾಗಿದ್ದು, ಕಸ ತುಂಬಿಸಿದೆ. ಅಂದಿನ ಕೃಷಿ ಮಾರುಕಟ್ಟೆ ಸಚಿವರಾಗಿದ್ದ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದ್ದರು. ಟೆಂಡರ್ ಪ್ರಕ್ರಿಯೆ ಜತೆಗೆ ಎಪಿಎಂಸಿಯ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು. ಸದ್ಯ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಇದರ ಪಕ್ಕದಲ್ಲಿಯೇ 2014-15ನೇ ಸಾಲಿನಲ್ಲಿ ₹83 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 1,000 ಎಂ.ಟಿ. ಸಾಮರ್ಥ್ಯದ ಗೋದಾಮಿಗೂ ಬೀಗ ಜಡಿಯಲಾಗಿದೆ. ಲೈಸನ್ಸ್ ಹೊಂದಿದ ಕೃಷಿ ಹುಟ್ಟುವಳಿ ವ್ಯಾಪಾರಸ್ಥರು ಬಾಡಿಗೆ ತೆಗೆದುಕೊಳ್ಳಲು ಮುಂದೆ ಬರದೇ ಇರುವುದರಿಂದ ಈ ಕಟ್ಟಡ ನಿರ್ಮಾಣದ ಬಳಿಕ ಬಳಕೆಯೇ ಇಲ್ಲದಂತಾಗಿದೆ.

ಪಟ್ಟಣದ ಘಟಪ್ರಭಾ ಎಡದಂಡೆ ಕಾಲುವೆ (ಜಿಎಲ್‍ಬಿಸಿ) ಆವರಣದಲ್ಲಿ ಎರಡು ಕಟ್ಟಡಗಳು ಪಾಳು ಬಿದ್ದಿವೆ. ಗೋಡೆಗಳು ಸುಸ್ಥಿತಿಯಲ್ಲಿದ್ದರೂ ಅರ್ಧಂಬರ್ಧ ಛಾವಣಿ ಇದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಹೆಂಚು ಉದುರಿವೆ. ಒಂದು ಕಟ್ಟಡವನ್ನು ಅಂಗನವಾಡಿ ಕೇಂದ್ರವನ್ನಾಗಿ ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ನಡೆಸುತ್ತಿದ್ದು, ಇನ್ನೊಂದು ಕಟ್ಟಡ ಜಿಎಲ್‍ಬಿಸಿ ಗೋದಾಮು ಆಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಇವೆರಡು ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದರಿಂದ ನಿರ್ವಹಣೆ ಇಲ್ಲದೆ ಹಲವು ವರ್ಷಗಳಿಂದ ಪಾಳು ಬಿದ್ದಿವೆ.

ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿನ ಕೋಣೆಗಳ ಕಿಟಕಿ ಮುರಿದಿರುವುದು
ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿನ ಕೋಣೆಗಳ ಕಿಟಕಿ ಮುರಿದಿರುವುದು
ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿನ ಕೋಣೆಗಳ ಹೊರಗೆ ಮುಳ್ಳು ಪೊದೆ ಬೆಳೆದಿರುವುದು
ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿನ ಕೋಣೆಗಳ ಹೊರಗೆ ಮುಳ್ಳು ಪೊದೆ ಬೆಳೆದಿರುವುದು
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿರುವ ಟೆಂಡರ್ ಹಾಲ್‌ಗೆ ಬೀಗ ಜಡಿದಿರುವುದು
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿರುವ ಟೆಂಡರ್ ಹಾಲ್‌ಗೆ ಬೀಗ ಜಡಿದಿರುವುದು
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿರುವ ಟೆಂಡರ್ ಹಾಲ್ ಒಳಗಡೆ ಇಟ್ಟಿರುವ ನಿರುಪಯುಕ್ತ ವಸ್ತುಗಳು
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿರುವ ಟೆಂಡರ್ ಹಾಲ್ ಒಳಗಡೆ ಇಟ್ಟಿರುವ ನಿರುಪಯುಕ್ತ ವಸ್ತುಗಳು
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿರುವ ಗೋದಾಮಿಗೆ ಬೀಗ ಹಾಕಿರುವುದು
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿರುವ ಗೋದಾಮಿಗೆ ಬೀಗ ಹಾಕಿರುವುದು
ಮಹಾಲಿಂಗಪುರದ ಜಿಎಲ್‍ಬಿಸಿ ಆವರಣದಲ್ಲಿರುವ ಎರಡು ಕಟ್ಟಡ ಪಾಳು ಬಿದ್ದಿರುವುದು
ಮಹಾಲಿಂಗಪುರದ ಜಿಎಲ್‍ಬಿಸಿ ಆವರಣದಲ್ಲಿರುವ ಎರಡು ಕಟ್ಟಡ ಪಾಳು ಬಿದ್ದಿರುವುದು
ಮಹಾಲಿಂಗಪುರದ 220 ಕೆಇಬಿ ಆವರಣದಲ್ಲಿರುವ 30ಕ್ಕೂ ಹೆಚ್ಚು ವರ್ಷಗಳಿಂದ ಪಾಳು ಬಿದ್ದಿರುವ ಕಟ್ಟಡ
ಮಹಾಲಿಂಗಪುರದ 220 ಕೆಇಬಿ ಆವರಣದಲ್ಲಿರುವ 30ಕ್ಕೂ ಹೆಚ್ಚು ವರ್ಷಗಳಿಂದ ಪಾಳು ಬಿದ್ದಿರುವ ಕಟ್ಟಡ

ಪಟ್ಟಣದಲ್ಲಿ ಅನೇಕ ಸರ್ಕಾರಿ ವಸತಿ ನಿಲಯ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ಪಾವತಿಸಿ ಕಾರ್ಯ ನಿರ್ವಹಿಸುತ್ತಿವೆ. ಅವಶ್ಯಕ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಿಸಿ ಅವುಗಳಿಗೆ ನೀಡಬಹುದಾಗಿದೆ - ಚನಬಸು ಹುರಕಡ್ಲಿ ನಿವಾಸಿ ಮಹಾಲಿಂಗಪುರ

ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಹಸ್ತಾಂತರದ ನಂತರವಷ್ಟೇ ಮುಂದಿನ ಯೋಜನೆ ರೂಪಿಸಲಾಗುವುದು. - ಈರಣ್ಣ ದಡ್ಡಿ ಮುಖ್ಯಾಧಿಕಾರಿ ಪುರಸಭೆ

ಆನ್‍ಲೈನ್‍ನಲ್ಲಿಯೇ ಬೆಲ್ಲದ ಟೆಂಡರ್ ನಡೆದಿದ್ದರಿಂದ ಟೆಂಡರ್ ಹಾಲ್ ಬಳಕೆ ಮಾಡುತ್ತಿಲ್ಲ. ಕಚೇರಿಯ ನಿರುಪಯುಕ್ತ ವಸ್ತುಗಳನ್ನು ಇಡಲು ಬಳಕೆ ಮಾಡಲಾಗಿದೆ. ಗೋದಾಮು ಕಟ್ಟಡಕ್ಕೆ ಬಾಡಿಗೆ ಹೆಚ್ಚಾಗಿದ್ದರಿಂದ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. - ಬಿ.ಎಸ್.ಬಾವಿಹಾಳ ಕಾರ್ಯದರ್ಶಿ ಎಪಿಎಂಸಿ

ಅನುದಾನ ಕೊರತೆಯಿಂದಾಗಿ ಗೋದಾಮು ಕಟ್ಟಡ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಇನ್ನೊಂದು ಕಟ್ಟಡ ದುರಸ್ತಿ ಮಾಡಿಕೊಂಡು ಅಂಗನವಾಡಿ ಕೇಂದ್ರ ನಿರ್ವಹಣೆ ಮಾಡಲು ಸಿದ್ಧರಾದರೆ ಸಮೀರವಾಡಿ ಕಾರ್ಖಾನೆಯವರಿಗೆ ನೀಡಲಾಗುವುದು. - ವೆಂಕಟೇಶ ಬೆಳಗಲ್ಲ ಎಇಇ ಜಿಎಲ್‍ಬಿಸಿ

ಕಾಯಕಲ್ಪಕ್ಕೆ ಕಾದಿರುವ ಕಟ್ಟಡ ಪಟ್ಟಣದ ಕೆಇಬಿ ಆವರಣದಲ್ಲಿ ಮೂರು ಕಟ್ಟಡಗಳು ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಯ ತಾಣಗಳಾಗಿವೆ. ಅತಿಥಿ ಗೃಹವಾಗಿ ಬಳಕೆಯಾಗಿದ್ದ ಒಂದು ಕಟ್ಟಡವಂತೂ 30ಕ್ಕೂ ಹೆಚ್ಚು ವರ್ಷಗಳಿಂದ ಪಾಳು ಬಿದ್ದಿದೆ. ಇನ್ನೊಂದು ಕಟ್ಟಡ ಸರ್ಕಾರಿ ಶಾಲೆ ಹಾಗೂ ಮತ್ತೊಂದು ಕಟ್ಟಡವನ್ನು ಗೋದಾಮು ಆಗಿ ಬಳಕೆ ಮಾಡಲಾಗುತ್ತಿತ್ತು. ಇವೆರಡು ಕಟ್ಟಡಗಳು ಸಹ ಹತ್ತಾರು ವರ್ಷಗಳಿಂದ ಬಳಕೆ ಮಾಡುತ್ತಿಲ್ಲ.. ಮೂರು ಕಟ್ಟಡಗಳಲ್ಲಿ ಹಗಲಿನಲ್ಲಿಯೇ ಸಿಗರೇಟ್ ಮದ್ಯ ಸೇವನೆ ನಿರಂತರವಾಗಿದೆ. ಒಳಾಂಗಣದಲ್ಲಿ ದೂಳು ಮತ್ತು ಕಸದ ರಾಶಿ ತುಂಬಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT