ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಬರಿದಾದ ಮಲಪ್ರಭೆ ಒಡಲು: ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ

ಎಚ್.ಎಸ್.ಘಂಟಿ
Published 18 ಮಾರ್ಚ್ 2024, 4:15 IST
Last Updated 18 ಮಾರ್ಚ್ 2024, 4:15 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನಲ್ಲಿ ಶಿವಯೋಗಮಂದಿರದಿಂದ ಕಾಟಾಪುರ, ಪಟ್ಟದಕಲ್ ನಾಗರಾಳ ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ ಅಲ್ಲೂರ, ಹಳದೂರ, ಇಂಜಿನವಾರಿ ಗ್ರಾಮಗಳ ಮೂಲಕ ಕಮತಗಿ ತಲುಪುವ ಮಲಪ್ರಭಾ ನದಿ ಪ್ರಸ್ತುತ ನೀರಿಲ್ಲದೆ ಬರಿದಾಗಿರುವುದರಿಂದ ಜನ– ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ.

ತಿಂಗಳ ಹಿಂದೆಯಷ್ಟೇ ನವಿಲುತೀರ್ಥ ಜಲಾಶಯದಿಂದ ನೀರು ಬಿಡಲಾಗಿತ್ತು. ಆದರೆ ಆ ನೀರನ್ನು ಕುಡಿಯಲು ಮಾತ್ರ ಬಳಸಬೇಕಿತ್ತು. ರೈತರು ಕೃಷಿಗೆ ಬಳಸಿದ್ದರಿಂದ ತಿಂಗಳಲ್ಲಿಯೇ ನೀರು ಖಾಲಿಯಾಗಿದ್ದರಿಂದ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ.

ಹೂಳಿನ ಸಮಸ್ಯೆ: ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾಲ್ಲೂಕಿನ ನಾಗರಾಳ ಎಸ್.ಪಿ, ಸಬ್ಬಲಹುಣಸಿ, ಲಾಯದಗುಂದಿ ಹಾಗೂ ಆಸಂಗಿ ಹತ್ತಿರ ಬ್ಯಾರೇಜ್‍ಗಳನ್ನು ನಿರ್ಮಿಸುವುದರಿಂದ, ಅಲ್ಲಿ ನೀರನ್ನು ನಿಲ್ಲಿಸುತ್ತಿರುವುದರಿಂದ ಹೂಳು ತುಂಬಿಕೊಂಡಿದೆ. ಹೀಗಾಗಿ ಹೊಳೆಯಲ್ಲಿ ದೀರ್ಘಕಾಲ ನೀರು ನಿಲ್ಲದ ಸ್ಥಿತಿ ಎದುರಾಗಿದೆ.

ಪಂಪ್‌ಸೆಟ್ ಸಮಸ್ಯೆ: ನದಿಗೆ ಹೊಂದಿಕೊಂಡಂತೆ ಹೊಳೆಯ ಆಚೆ ಹುನಗುಂದ ತಾಲ್ಲೂಕಿಗೆ ಸೇರಿದ ಈಚೇ ಗುಳೇದಗುಡ್ಡ ತಾಲ್ಲೂಕಿಗೆ ಸೇರಿದ ಸಾವಿರಾರು ಎಕರೆ ನೀರಾವರಿ ಮಾಡಿ ಬೆಳೆ ಬೆಳೆಯಲು ಪಂಪ್‌ಸೆಟ್‍ಗಳ ಮೂಲಕ ನೀರನ್ನು ಬಳಸುವುದರಿಂದ ಹೊಳೆಯ ನೀರು ಬೇಗನೇ ಖಾಲಿಯಾಗುತ್ತದೆ. ಕನಿಷ್ಟ ಆರನೂರು ಪಂಪ್‌ಸೆಟ್‍ಗಳು ಇವೆ ಎಂದು ಹೇಳಲಾಗುತ್ತಿದೆ.

ನೀರು ಬಿಡಲು ರೈತರ ಆಗ್ರಹ: ಇತ್ತೀಚಿಗೆ ಮಲಪ್ರಭಾ ನದಿಗೆ ಕುಡಿಯುವ ಹಾಗೂ ದನಕರುಗಳಿಗೆ ನೀರಿನ ಅಭಾವವಾಗಿತ್ತು. ನವಿಲುತೀರ್ಥ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನೀರಿನ ಸಮಸ್ಯೆ ಬಗೆಹರಿದಿತ್ತು. ಆದರೆ ಈಗ ಮತ್ತೇ ನೀರು ಖಾಲಿಯಾಗಿದ್ದರಿಂದ ಮತ್ತೇ ನೀರಿನ ಸಂಕಷ್ಟ ಎದುರಾಗಿದೆ. ಮತಕ್ಷೇತ್ರದ ಜನ ಪ್ರತಿನಿಧಿಗಳು ಆದಷ್ಟು ಬೇಗ ಕ್ರಮವಹಿಸಬೇಕು ಎಂದು  ಹೊಳೆಸಾಲ ಗ್ರಾಮಸ್ಥರ ಆಗ್ರಹಿಸಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಹೇಳಿ ತಿಂಗಳಿಗೊಮ್ಮೆ ನವಿಲು ತೀರ್ಥ ಜಲಾಶಯದಿಂದ ನೀರು ಬಿಡುವಂತೆ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಬೇಕು ಎಂದು ನಾಗರಾಳ ಗ್ರಾಮದ ಲೆಂಕೆಪ್ಪ ಹಿರೇಕುರುಬರ ಹೇಳುತ್ತಾರೆ.

Quote - ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಿದರೆ ನದಿ ಪಾತ್ರದ ಜನರಿಗೆ ಜನ–ಜಾನುವಾರು ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಪ್ರಕಾಶ ಗೌಡರ ಅಧ್ಯಕ್ಷ ಪಿಕೆಪಿಎಸ್ ಲಾಯದಗುಂದಿ

Quote - ಮಲಪ್ರಭಾ ನದಿಗೆ ನೀರು ಬಿಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ ರಾಜು ಬಿಸನಾಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಪ್ರಭಾರ) ಗುಳೇದಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT