ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ರೈತರ ಸಹಕಾರ ಕಾರ್ಖಾನೆ ಆರಂಭಕ್ಕೆ ಹಲವು ತೊಡಕು

Published 9 ನವೆಂಬರ್ 2023, 4:43 IST
Last Updated 9 ನವೆಂಬರ್ 2023, 4:43 IST
ಅಕ್ಷರ ಗಾತ್ರ

ಬಾಗಲಕೋಟೆ: ಕಳೆದ ವರ್ಷ ಪ್ರತಿ ಟನ್‌ ಕಬ್ಬಿಗೆ (₹2,900) ಜಿಲ್ಲೆಯಲ್ಲಿಯೇ ಹೆಚ್ಚು ಹಣ ಪಾವತಿಸಿದ್ದ ರೈತರ ಸಹಕಾರ ಸಕ್ಕರೆ ಕಾರ್ಖಾನೆಯು ಈ ವರ್ಷ ಕಬ್ಬು ನುರಿಸುವುದು ಬಹುತೇಕ ಅಸಾಧ್ಯವಾಗಿದೆ.

ಜಿಲ್ಲೆಯ ಉಳಿದ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಪ್ರಸಕ್ತ ಸಾಲಿನ ಕಬ್ಬು ನುರಿಸುವಿಕೆ ಕಾರ್ಯ ಆರಂಭಿಸಿವೆ. ಆದರೆ, ರೈತರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿಲ್ಲ. ಹಾಗಾಗಿ, ಕಾರ್ಖಾನೆ ಆರಂಭವಾಗುವುದರ ಮೇಲೆ ಕರಿ ನೆರಳು ಕವಿದಿದೆ.

ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ವಿಧಾನಸಭಾ ಚುನಾವಣೆ ನಂತರ ಬದಲಾದ ರಾಜಕೀಯ ಬೆಳವಣಿಗೆಗಳನ್ನೇ ನೆಪವಾಗಿಸಿಕೊಂಡು ರಾಜೀನಾಮೆ ನೀಡಿದ್ದರು. ಕಾರ್ಖಾನೆಯ ಸಾಲದ ಸುಳಿಗೆ ಸಿಲುಕಿದ್ದು, ಹೊರ ಬರಲಾರದ ಸ್ಥಿತಿಗೆ ತಲುಪಿದೆ.

ಆಡಳಿತ ಮಂಡಳಿ ರಾಜೀನಾಮೆ ನೀಡುವಾಗ 1,600 ರೈತರ ₹27 ಕೋಟಿ ಮೊತ್ತ ಬಾಕಿ ಉಳಿಸಿ ಹೋಗಿತ್ತು. ಹಾಗೆಯೇ ಕಾರ್ಖಾನೆಯಲ್ಲಿ ಸಕ್ಕರೆಯೂ ಇತ್ತು. ಅದನ್ನು ಮಾರಾಟ ಮಾಡಿ, ರೈತರ ಕಬ್ಬಿನ ಬಿಲ್‌ ಬಾಕಿ ಪಾವತಿಸಲಾಗಿದೆ ಎನ್ನುವುದೇ ಸದ್ಯಕ್ಕೆ ಸಮಾಧಾನದ ಸಂಗತಿ.

ಪ್ರಸ್ತಾವ ತಿರಸ್ಕಾರ: ಸಕ್ಕರೆ ಕಾರ್ಖಾನೆ ಆರಂಭಕ್ಕೆ ₹60 ಕೋಟಿ ದುಡಿಯುವ ಬಂಡವಾಳ ಬೇಕು. ₹40 ಕೋಟಿ ಸಾಲ ತೆಗೆದುಕೊಂಡು ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ.

ಸಕ್ಕರೆ ಕಾರ್ಖಾನೆಯ ಮೇಲೆ ಅಸಲು ₹214 ಕೋಟಿ ಹಾಗೂ ₹116 ಬಡ್ಡಿ ಸೇರಿದಂತೆ ಒಟ್ಟು ₹330 ಕೋಟಿ ಸಾಲದ ಹೊರೆಯಿದೆ. ಅದರ ಮೇಲೆ ಮತ್ತೇ ₹40 ಕೋಟಿ ಸಾಲ ಮಾಡಲು ಉದ್ದೇಶಿಸಲಾಗಿತ್ತು. ಕಾರ್ಖಾನೆ ಆರಂಭಿಸಿದರೂ 4 ಲಕ್ಷ ಟನ್‌ ನಷ್ಟು ಕಬ್ಬು ಅರೆದರೆ ಮಾತ್ರ ಯಾವುದೇ ಲಾಭ, ನಷ್ಟವಿಲ್ಲದೇ ಖರ್ಚನ್ನು ಸರಿದೂಗಿಸಬಹುದಾಗಿತ್ತು. ಈಗಾಗಲೇ ವಿಳಂಬವಾಗಿರುವುದರಿಂದ ಅಷ್ಟು ಅರೆಯುವುದು ಕಷ್ಟ.

ಗುತ್ತಿಗೆ ಒಂದೇ ದಾರಿ: ಕಾರ್ಖಾನೆ ಆರಂಭಿಸಲು ಗುತ್ತಿಗೆ (ಲೀಸ್‌) ನೀಡುವುದೊಂದೇ ದಾರಿ. ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಗಬೇಕಿದೆ. ಆ ನಂತರ ಟೆಂಡರ್‌ ಕರೆದು ಲೀಸ್ ನೀಡಬೇಕು. ಈ ಎಲ್ಲ ಪ್ರಕ್ರಿಯೆ ನಡೆಯುವ ವೇಳೆಗೆ ಕಬ್ಬಿನ ಹಂಗಾಮು ಮುಗಿದು ಹೋಗಿರುತ್ತದೆ.

ಕಳೆದ ಬಾರಿ ರೈತರ ಸಹಕಾರ ಸಕ್ಕರೆ ಕಾರ್ಖಾನೆಗೆ ಸಾಗಿಸಿದ್ದ, ಇದೇ ಕಾರ್ಖಾನೆಯನ್ನು ನಂಬಿ ಕಬ್ಬು ಬೆಳೆದಿರುವ ರೈತರ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಕಳುಹಿಸುವ ವ್ಯವಸ್ಥೆ ಆಗಬೇಕಿದೆ. ಇಲ್ಲದಿದ್ದರೆ, ರೈತರು ಸಂಕಷ್ಟ ಎದುರಿಸಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT