ಮಂಗಳವಾರ, ಸೆಪ್ಟೆಂಬರ್ 28, 2021
22 °C

ವೀಳ್ಯದೆಲೆ ಧಾರಣೆ ಇಳಿಮುಖ; ರೈತರ ಆತಂಕ

ಎಸ್.ಎಂ. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬನಶಂಕರಿ (ಬಾದಾಮಿ): ಬಿಳಿ ಅಂಬಾಡಿ ಎಲೆ ಮತ್ತು ಕರಿ ಎಲೆಯ ಧಾರಣೆ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ ಇದು ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆದ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಇಲ್ಲಿನ ಬನಶಂಕರಿ ದೇವಾಲಯದ ಆವರಣದಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ನಡೆಯುವ ಮಾರುಕಟ್ಟೆಗೆ ಎಲೆಪೆಂಡಿ ತಂದಿದ್ದ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ತೋಟದಲ್ಲಿ ಎಲೆಯ ಕಟಾವಿನ ನಂತರ 12 ಮತ್ತು 6 ಸಾವಿರ ಎಲೆಗಳನ್ನು ಹೊಂದಿರುವ ಪೆಂಡೆಗಳನ್ನು ರೈತರು ಮಾರಾಟಕ್ಕೆ ತರುತ್ತಾರೆ. ಬಿಳಿ ಅಂಬಾಡಿ ಎಲೆಯ ಸಾಲು ಮತ್ತು ಕರಿ ಎಲೆಯ ಪೆಂಡೆಯ ಸಾಲನ್ನು ಬೇರೆ ಬೇರೆ ಮಾಡುವರು. ವಾರದಲ್ಲಿ ಎರಡು ಬಾರಿ 400ಕ್ಕೂ ಅಧಿಕ ಎಲೆ ಪೆಂಡೆಗಳನ್ನು ರೈತರು ಮಾರುಕಟ್ಟೆಗೆ ತರುತ್ತಾರೆ.

ಚೊಳಚಗುಡ್ಡ, ಬನಶಂಕರಿ ಸೇರಿದಂತೆ ಕುಷ್ಟಗಿ ಮತ್ತು ರೋಣ ತಾಲ್ಲೂಕಿನ ವಿವಿಧ ಗ್ರಾಮಗಳ ತೋಟದಲ್ಲಿ ಬೆಳೆದ ಎಲೆಗಳ ಪೆಂಡೆಯನ್ನು ರೈತರು ಮಾರಾಟಕ್ಕೆ ತರುತ್ತಾರೆ. ಬೈಲಹೊಂಗಲ, ಯರಗಟ್ಟಿ, ರಾಮದುರ್ಗ, ಗುಳೇದಗುಡ್ಡ ಭಾಗ ದಿಂದ ಖರೀದಿದಾರರು ಮತ್ತು ವರ್ತ ಕರು ಎಲೆ ಕೊಂಡೊಯ್ಯಲು ಬರುತ್ತಾರೆ.

‘ಎರಡು ವರ್ಷಗಳಿಂದ ಎಲಿಗೆ ರೇಟು ಬಂದಿಲ್ಲ. ಹೋದ ವರ್ಸ ಅಲ್ಲದ ಅದರ ಹಿಂದಿನ ವರ್ಸ ಎಲಿ ರೇಟು ಚೊಲೋ ಇತ್ತರಿ. ಈಗ ರೇಟ್ ಬಹಳ ಕುಸದೈತ್ರಿ. ಮಳಿ ಆಗದ ಕಾರಣ ಬಾವಿ ಬತ್ತ್ಯಾವ. ನೀರು ಇಲ್ಲ. ಒಮ್ಮೊಮ್ಮೆ ಎಲೆ ಹರದ ಕೂಲಿ ಬರೂದಿಲ್ಲರಿ ‘ ಎಂದು ಕುಷ್ಟಗಿ ತಾಲ್ಲೂಕಿನ ಮಡಿಕ್ಕೇರಿಯ ರೈತ ಪರಸಪ್ಪ ಮೇಟಿ ಹೇಳಿದರು.

12 ಸಾವಿರ ಎಲೆ ಇರುವ ಪೆಂಡೆ ₹5 ರಿಂದ 6 ಸಾವಿರಕ್ಕೆ ಮಾರಾಟವಾ ಗುತ್ತವೆ. 6 ಸಾವಿರ ಎಲೆಗಳು ಇರುವ ಪೆಂಡೆ ₹ 2 ರಿಂದ 3 ಸಾವಿರಕ್ಕೆ ಮಾರಾಟವಾಗುತ್ತದೆ. ಕರಿಎಲೆ ₹ 900ರಿಂದ 2 ಸಾವಿರಕ್ಕೆ ಮಾರಾಟ ವಾಗುತ್ತದೆ ಎಂದು ರೈತರು ಹೇಳುತ್ತಾರೆ.

ಬನಶಂಕರಿ ಮತ್ತು ಚೊಳಚಗುಡ್ಡ ಗ್ರಾಮದ ಪರಿಸರದಲ್ಲಿ ಮೊದಲು ಸರಸ್ವತಿ ಹಳ್ಳ ಮತ್ತು ಹರಿದ್ರಾತೀರ್ಥ ಹೊಂಡದ ನೀರು ವರ್ಷದ 12 ತಿಂಗಳೂ ಇರುತ್ತಿತ್ತು. ಆಗ ರೈತರು ಹೆಚ್ಚಿನ ಪ್ರಮಾಣದಲ್ಲಿ ರೈತರು ಎಲೆಬಳ್ಳಿ ನಾಟಿ ಮಾಡುತ್ತಿದ್ದರು.

ಬನಶಂಕರಿ ಮತ್ತು ಚೊಳಚಗುಡ್ಡ ಪರಿಸರದಲ್ಲಿ ಬೆಳೆದ ಎಲೆಗೆ ಭಾರಿ ಬೇಡಿಕೆ ಇದೆ. ಇಲ್ಲಿನ ಅಂಬಾಡಿ ಎಲೆ ಸವಿಯಲು ರುಚಿ ಮತ್ತು ಮೃದುವಾಗಿ ಇರುವುದು ಇದಕ್ಕೆ ಕಾರಣ ಎಂದು ರೈತ ನಿಂಗಪ್ಪ ಚಲವಾದಿ ಹೇಳಿದರು.

ಈಗ ಸರಸ್ವತಿ ಹಳ್ಳ ಮತ್ತು ಹರಿದ್ರಾತೀರ್ಥ ಹೊಂಡವು ಬತ್ತಿದ ಕಾರಣ ರೈತರು ಕೊಳವೆ ಬಾವಿ ನಂಬಿ ಕೃಷಿ ಮಾಡುತ್ತಿದ್ದರು. ಆದರೆ ಮೂರ್ನಾಲ್ಕು ವರ್ಷಗಳಿಂದ ಮಳೆಯಾಗದೇ ಕೊಳವೆ ಬಾವಿ ಬತ್ತಿವೆ. ಅಂತರ್ಜಲಮಟ್ಟ 600 ಅಡಿಗೂ ಅಧಿಕ ದೂರ ಹೋಗಿದೆ. ಎಲೆ ಬಳ್ಳಿ ಒಣಗಲು ಆರಂಭಿಸಿವೆ. ಆದರೂ ಮಾರುಕಟ್ಟೆಯಲ್ಲಿ ಬೆಲೆ ಇಳಿಮುಖವಾಗಿದೆ ಎಂದು ಚೊಳಚಗುಡ್ಡ ಗ್ರಾಮದ ರೈತ ಸಂಗಪ್ಪ ದೊಡಮನಿ ಮತ್ತು ಶರಣಪ್ಪ ಈಳಗೇರ ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.