ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಹರಡುವಿಕೆ ತಡೆಗೆ ಕ್ರಮ: ಬಡವರಿಗೆ ಗ್ರಾಮ ಪಂಚಾಯಿತಿಯಿಂದ ಮಾಸ್ಕ್ ವಿತರಣೆ

ಪಿಡಿಒಗಳಿಗೆ ದಂಡ ವಿಧಿಸುವ ಅಧಿಕಾರ
Last Updated 14 ಜುಲೈ 2020, 19:31 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್–19 ನಿಯಂತ್ರಣದ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ಉಚಿತವಾಗಿ ಮುಖಗವಸು (ಮಾಸ್ಕ್) ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೂಡಲೇ ವಿತರಣೆ ಆರಂಭಿಸಲು ರಾಜ್ಯದ 6021 ಗ್ರಾಮ ಪಂಚಾಯ್ತಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೊರೊನಾ ಸೋಂಕು ದಿನೇ ದಿನೇ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತಲಾ ಒಂದರಂತೆ ಮರು ಬಳಸಲು ಸಾಧ್ಯವಿರುವ ಮುಖಗವಸು ವಿತರಿಸಲಾಗುತ್ತಿದೆ.

ಸಂಘಗಳಿಂದ ಖರೀದಿಗೆ ಸೂಚನೆ:ಮುಖಗವುಸು ಖರೀದಿಗೆ ಗ್ರಾಮ ಪಂಚಾಯಿತಿಯ ಬೇರೆ ಬೇರೆ ನಿಧಿಗಳಲ್ಲಿರುವ ಹಣ ಬಳಸಲು ಹಾಗೂ ಗ್ರಾಮೀಣ ಮಹಿಳಾ ಸ್ವ–ಸಹಾಯ ಸಂಘಗಳಿಂದ ಅವುಗಳನ್ನು ಖರೀದಿಸಲು ಯೋಚಿಸಲಾಗಿದೆ. ಗುಣಮಟ್ಟ ಹಾಗೂ ಪಾರದರ್ಶಕ ಖರೀದಿಗೆ ಒತ್ತು ನೀಡುವಂತೆ ಪಿಡಿಒಗಳ ಸಭೆ ನಡೆಸಿ ಸೂಚನೆ ನೀಡಲು ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಇಲ್ಲಿನ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜೆ.ಎಸ್.ಪಠಾಣ ಹೇಳುತ್ತಾರೆ.

ಪಿಡಿಒಗೆ ದಂಡ ವಿಧಿಸುವ ಅಧಿಕಾರ:ಗ್ರಾಮ ಪಂಚಾಯಿತಿ, ಬಸ್‌ ನಿಲ್ದಾಣ ಮೊದಲಾದ ಕಡೆ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು ಇಡುವ ಜೊತೆಗೆ ಸಾರ್ವಜನಿಕರು ಕೈ ತೊಳೆಯಲು ಸಾಬೂನು ಹಾಗೂ ನೀರಿನ ವ್ಯವಸ್ಥೆ ಮಾಡಬೇಕಿದೆ.

ಗ್ರಾಮಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನದ ಜೊತೆಗೆ ಊರಿನಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಿಡಿಒಗಳಿಗೆ ವಹಿಸಲಾಗಿದೆ.

ಸಾರ್ವಜನಿಕ ಸ್ಥಳ, ಕೆಲಸ ಮಾಡುವ ಪರಿಸರ ಹಾಗೂ ಬಸ್‌, ವಾಹನಗಳಲ್ಲಿ ಸಂಚರಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ತಪ್ಪಿದಲ್ಲಿ ಅವರಿಗೆ ₹100 ದಂಡ ವಿಧಿಸುವ ಅಧಿಕಾರ ಪಿಡಿಒಗಳಿಗೆ ನೀಡಲಾಗಿದೆ. ಇಲ್ಲಿಯವರೆಗೆ ಪೊಲೀಸರು ಮಾತ್ರ ದಂಡ ವಿಧಿಸುತ್ತಿದ್ದರು.

*

ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರುವ ಕುಟುಂಬಗಳಿಗೆ ಮಾತ್ರವಲ್ಲ, ಖರೀದಿಸಲು ಸಾಮರ್ಥ್ಯವಿಲ್ಲದ ಎಲ್ಲರಿಗೂ ಮಾಸ್ಕ್ ವಿತರಣೆ ಮಾಡಲಾಗುವುದು.
-ಟಿ.ಭೂಬಾಲನ್, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT