ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ನಗರಸಭೆ: ಜ್ಯೋತಿಗೆ ಒಲಿದ ಅಧ್ಯಕ್ಷ ಸ್ಥಾನ

ಬಸವರಾಜ ಅವರಾದಿ ಉಪಾಧ್ಯಕ್ಷ
Last Updated 28 ಅಕ್ಟೋಬರ್ 2020, 12:00 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ನಗರಸಭೆ ನೂತನ ಅಧ್ಯಕ್ಷರಾಗಿ ಜ್ಯೋತಿ ಭಜಂತ್ರಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಅವರಾದಿ ಬುಧವಾರ ಅವಿರೋಧ ಆಯ್ಕೆಯಾದರು.

35 ಸದಸ್ಯರ ಬಲದ ಬಾಗಲಕೋಟೆ ನಗರಸಭೆಯಲ್ಲಿ 29 ಮಂದಿ ಸದಸ್ಯರನ್ನು ಒಳಗೊಂಡ ಬಿಜೆಪಿ ಸಂಪೂರ್ಣ ಬಹುಮತ ಹೊಂದಿದೆ. ಹೀಗಾಗಿ ನಿರೀಕ್ಷೆಯಂತೆಯೇ ಅದೇ ಪಕ್ಷದ ಸದಸ್ಯೆ 18ನೇ ವಾರ್ಡ್ ಪ್ರತಿನಿಧಿಸುವ ಜ್ಯೋತಿ ಸುಲಭವಾಗಿ ಅಧ್ಯಕ್ಷ ಸ್ಥಾನ ಪಡೆದರು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಜ್ಯೋತಿ ಅವರೊಂದಿಗೆ 20ನೇ ವಾರ್ಡ್‌ನ ನಾಗರತ್ನಾ ಹೆಬ್ಬಳ್ಳಿ ಕೂಡ ಆಕಾಂಕ್ಷಿಯಾಗಿದ್ದರು. ಶಾಸಕ ವೀರಣ್ಣ ಚರಂತಿಮಠ ತೀರ್ಮಾನವೇ ಅಂತಿಮವಾಗಿದ್ದ ಕಾರಣ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದರಂತೆ ಜ್ಯೋತಿ ಭಜಂತ್ರಿ ಅವರಿಗೆ ಅದೃಷ್ಟ ಒಲಿದುಬಂದಿತು.

ಈ ಹಿಂದೆ 2010ರಿಂದ 12ರವರೆಗೆ ನಗರಸಭೆ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದ ಜ್ಯೋತಿ ಭಜಂತ್ರಿ ಈಗ ಎರಡನೇ ಬಾರಿಗೆ ನಗರದ ಪ್ರಥಮ ಪ್ರಜೆಯ ಗೌರವಕ್ಕೆ ಪಾತ್ರರಾದರು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, 25ನೇ ವಾರ್ಡ್ ಪ್ರತಿನಿಧಿಸುವ ಬಸವರಾಜ ಅವರಾದಿ ಅವಕಾಶ ಪಡೆದರು. ಬಿಜೆಪಿ ನಗರ ಘಟಕದ ಅಧ್ಯಕ್ಷರೂ ಆದ ಅವರಾದಿ ಇದೇ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಜ್ಯೋತಿ ಭಜಂತ್ರಿ ಹಾಗೂ ಬಸವರಾಜ ಅವರಾದಿ ಅವಿರೋಧ ಆಯ್ಕೆಯಾದ ಬಗ್ಗೆ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಘೋಷಣೆ ಮಾಡಿದರು. ಜಿಲ್ಲಾಧಿಕಾರ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ನಗರಸಭೆ ಆಯುಕ್ತ ಮುನಿಸ್ವಾಮಪ್ಪ ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ನಾರಾಯಣ ಸಾ ಭಾಂಡಗೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹಾಜರಿದ್ದರು.

ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಜ್ಯೋತಿ ಭಜಂತ್ರಿ ಹಾಗೂ ಬಸವರಾಜ ಅವರಾದಿ ಬೆಂಬಲಿಗರು ನಗರಸಭೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT