ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಡಿತರ ಚೀಟಿಗೆ ನೆಟ್‌ವರ್ಕ್‌ ಸಮಸ್ಯೆ: ಕರ್ನಾಟಕ ಒನ್‌ ಸೆಂಟರ್‌ ಮುಂದೆ ಜನರ ಸಾಲು

ಬಸವರಾಜ ಹವಾಲ್ದಾರ‌
Published 9 ಜುಲೈ 2024, 5:37 IST
Last Updated 9 ಜುಲೈ 2024, 5:37 IST
ಅಕ್ಷರ ಗಾತ್ರ

ಬಾಗಲಕೋಟೆ: ಹೊಸದಾಗಿ ಪಡಿತರ ಚೀಟಿ ಪಡೆಯಲು, ಹೆಸರು ಸೇರ್ಪಡೆ, ಡಿಲಿಟ್‌ ಮಾಡಿಸಲು, ಬೇರೆ ಕಡೆಗೆ ವರ್ಗಾವಣೆ ಮಾಡಿಸಲು ಜನರು ನಿತ್ಯ ಕರ್ನಾಟಕ ಒನ್‌ ಕೇಂದ್ರಕ್ಕೆ ಅಲೆಯುತ್ತಿದ್ದಾರೆ.

ಹೊಸದಾಗಿ ಪಡಿತರ ಚೀಟಿ ಪಡೆಯಲು ಜನರು ಹಲವಾರು ತಿಂಗಳುಗಳಿಂದ ಕಾಯುತ್ತಿದ್ದಾರೆ. ಆದರೆ, ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇಂದು, ನಾಳೆ ಎಂದು ಮುಂದು ಹಾಕುತ್ತಲೇ ಬರುತ್ತಿದೆ.

ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಿಗೆ ಪಡಿತರ ಚೀಟಿಯನ್ನೇ ಆಧಾರವಾಗಿ ಕೇಳುತ್ತಾರೆ. ಆದರೆ, ಅದೇ ಸಿಗುತ್ತಿಲ್ಲ. ಅರ್ಜಿ ಹಾಕಿ ವರ್ಷದಿಂದ ಕಾಯುತ್ತಿರುವವರಿಗೂ ಪಡಿತರ ಚೀಟಿ ಸಿಕ್ಕಿಲ್ಲ.

ಪಡಿತರ ಚೀಟಿ ಅರ್ಜಿ ಹಾಕಲು ಹದಿನೈದು, ಇಪ್ಪತ್ತು ದಿನಕ್ಕೊಮೆ ಅವಕಾಶ ನೀಡಲಾಗುತ್ತದೆ. ಅದು ಒಂದೆರಡು ಗಂಟೆಗೆ ಮಾತ್ರ ಸೀಮಿತವಾಗಿರುತ್ತದೆ. ಆಗಲೂ ನೆಟ್‌ವರ್ಕ್‌ ಸಮಸ್ಯೆ ಜನರನ್ನು ಕಾಡುತ್ತಲೇ ಇರುತ್ತದೆ.

ಅರ್ಜಿ ಹಾಕಲು ಅವಕಾಶ ನೀಡುವ ಮಾಹಿತಿಯನ್ನು ಸರಿಯಾಗಿ ನೀಡುವುದಿಲ್ಲ. ಬಾಯಿ ಮಾತಿನಿಂದಲೇ ತಿಳಿದುಕೊಳ್ಳುವ ಜನರು ಕರ್ನಾಟಕ ಒನ್‌ ಸೆಂಟರ್‌ಗೆ ಬಂದರೆ ಜನರು ಸಾಲು, ಸಾಲಾಗಿ ನಿಂತಿರುತ್ತಾರೆ. ಸಂಜೆಯವರೆಗೂ ನಿಂತರೂ ಅರ್ಜಿ ಸಲ್ಲಿಸಲು ಆಗುವುದಿಲ್ಲ. 

ಪಡಿತರ ಚೀಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು, ಡಿಲಿಟ್‌ ಮಾಡಿಸಲೂ, ಬೇರೆ ಕಡೆಗೆ ವರ್ಗಾವಣೆ ಮಾಡಲೂ ಅವಕಾಶ ಸಿಗುತ್ತಿಲ್ಲ. ಜನರು ಹತ್ತಾರು ಬಾರಿ ಅಲೆದಾಡಬೇಕಿದೆ.

ಕರ್ನಾಟಕ ಒನ್‌ನಲ್ಲಿ ಮಾತ್ರ ಅವಕಾಶ ನೀಡುವುದರಿಂದ ಎಲ್ಲರೂ ಅಲ್ಲಿಗೇ ಬರಬೇಕು. ಅಲ್ಲಿ ಆಧಾರ್‌ ಕಾರ್ಡ್‌ ನೀಡುವುದು, ವಿವಿಧ ದಾಖಲೆಗಳ ತಿದ್ದುಪಡಿ, ವಿದ್ಯಾರ್ಥಿಗಳಿಗೆ ಬಸ್‌ ಪಾಸ್ ನೀಡುವುದು, ವಿದ್ಯುತ್‌ ಬಿಲ್‌ ಪಾವತಿ ಸೇರಿದಂತೆ ವಿವಿಧ ಕೆಲಸಗಳಿರುವುದರಿಂದ ಗಂಟೆಗಟ್ಟಲೇ ಕಾಯಬೇಕಾಗುತ್ತದೆ.

ಬಾಗಲಕೋಟೆಯಲ್ಲಿರುವ ನವನಗರದಲ್ಲಿ ಕರ್ನಾಟಕ ಒನ್‌ ಸೆಂಟರ್‌ ತೆಗೆಯುವುದು ಬೆಳಿಗ್ಗೆ 8 ಗಂಟೆಯಾದರೂ, ಜನರು ಬೆಳಿಗ್ಗೆ 6 ಗಂಟೆಯಿಂದಲೇ ಹೆಸರು ನೋಂದಾಯಿಸಲು ಬರುತ್ತಾರೆ. ದಿನ ಪೂರ್ತಿ ಇದೇ ಕೆಲಸವಾಗುವುದರಿಂದ ದುಡಿಮೆಯೂ ಹೊಡೆತ ಬೀಳುತ್ತದೆ.

‘ಕೆಲ ದಿನಗಳ ಹಿಂದೆ ಹೊಸ ಪಡಿತರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರು. ನೆಟ್‌ವರ್ಕ್ ಸಮಸ್ಯೆಯ ನಡುವೆಯೇ ಕೆಲವರ ಅರ್ಜಿ ಸಲ್ಲಿಸಲಾಗಿದೆ. ನಿತ್ಯವೂ ಹತ್ತಾರು ಜನರು ಕೇಳಿಕೊಂಡು ಬರುತ್ತಿದ್ದಾರೆ. ಆದರೆ, ಮತ್ತೇ ಯಾವಾಗ ಅವಕಾಶ ಕೊಡುತ್ತಾರೆ ಗೊತ್ತಿಲ್ಲ’ ಎನ್ನುತ್ತಾರೆ ಕರ್ನಾಟಕ ಒನ್‌ ಸಿಬ್ಬಂದಿಯೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT