ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಮಗುವನ್ನು ತೆಪ್ಪದಲ್ಲಿ ಬಿಟ್ಟು ಹರಕೆ ತೀರಿಸಿದ ಪೋಷಕರು

ಸಂತಾನ ಭಾಗ್ಯಕ್ಕೆ ಕೋರಿ ಬನಶಂಕರಿ ದೇವಿಗೆ ಹರಕೆ ಹೊರುವ ದಂಪತಿ
Published 28 ಜನವರಿ 2024, 15:42 IST
Last Updated 28 ಜನವರಿ 2024, 15:42 IST
ಅಕ್ಷರ ಗಾತ್ರ

ಬನಶಂಕರಿ (ಬಾದಾಮಿ): ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಪೋಷಕರು ಮಗುವನ್ನು ಭಾನುವಾರ ತೆಪ್ಪದಲ್ಲಿ ಬಿಟ್ಟು ಹರಕೆ ಪೂರೈಸಿದರು.

ಬಹಳ ವರ್ಷಗಳಿಂದ ಮಕ್ಕಳಾಗದ ದಂಪತಿ ಮಕ್ಕಳಾದ ಮೇಲೆ ತೆಪ್ಪದಲ್ಲಿ ಬಿಡುತ್ತೇವೆ ಎಂದು ಬನಶಂಕರಿದೇವಿಗೆ ಹರಕೆ ಹೊತ್ತಿರುತ್ತಾರೆ. ಮಕ್ಕಳಾದ ಮೇಲೆ ನಾಲ್ಕು-ಐದು ವರ್ಷಗಳ ನಂತರ ಪುಷ್ಕರಣಿಯಲ್ಲಿ ತೆಪ್ಪದಲ್ಲಿ ಬಿಡುವ ಸಂಪ್ರದಾಯ ಅನೇಕ ದಶಕಗಳಿಂದ ನಡೆದು ಬಂದಿದೆ.

ರಥೋತ್ಸವದ ಮರುದಿನ ತೆಪ್ಪದಲ್ಲಿ ಬಿಡುವ ಸೇವೆ ನಡೆಯುತ್ತದೆ. ಚೊಳಚಗುಡ್ಡ ಗ್ರಾಮದ ಅಂಬಿಗೇರ ಕುಟುಂಬದವರು ತೆಪ್ಪ ಬಿಡುವ ಸೇವೆಯನ್ನು ಮಾಡುತ್ತಾರೆ.

ಈ ಬಾರಿ ಹರಿದ್ರಾತೀರ್ಥ ಪುಷ್ಕರಣಿಗೆ ನೀರು ತಡವಾಗಿ ಬಂದದ್ದರಿಂದ ರಥೋತ್ಸವದ ಮಾರನೇ ದಿನ ತೆಪ್ಪದ ಕಾರ್ಯ ನಡೆಯಲಿಲ್ಲ. ಭಾನುವಾರ ಮಗುವನ್ನು ತೆಪ್ಪದಲ್ಲಿ ಬಿಡುವ ಸೇವೆ ಆರಂಭವಾಗಿದ್ದು ಕಂಡು ಬಂದಿತು.

ಬಾಳೆದಿಂಡಿನಿಂದ ಆಯತಾಕಾರವಾಗಿ ತೆಪ್ಪವನ್ನು ರೂಪಿಸಿ ಅದರಲ್ಲಿ ಮಗುವನ್ನು ಕೂರಿಸಿ, ಅಂಬಿಗೇರರು ಹರದ್ರಾತೀರ್ಥದ ಪೂರ್ವದ ದಂಡೆಯಲ್ಲಿರುವ ಹತ್ತಿಮರದ ಸತ್ಯವ್ವ ದೇವಾಲಯದಿಂದ ತೆಪ್ಪವನ್ನು ನೂಕುತ್ತ ಪಶ್ಚಿಮದ ದಂಡೆಯ ಬನಶಂಕರಿದೇವಿ ಪಾದಗಟ್ಟೆ ವರೆಗೆ ಬರುವರು.

ಪೋಷಕರನ್ನು ಬಿಟ್ಟ ಮಗು ರೋಧಿಸುತ್ತ ತೆಪ್ಪದಲ್ಲಿ ಬರುವಾಗ ಅಂಬಿಗ ಸಮಾಧಾನ ಮಾಡುವರು. ದಂಡೆಯಲ್ಲಿದ್ದ ಪೋಷಕರೂ ಮಗುವನ್ನು ಜೋರಾಗಿ ಕೂಗುತ್ತ ಸಮಾಧಾನ ಮಾಡುವರು. ತೆಪ್ಪದಲ್ಲಿ ಮಗು ಬರುವಾಗ ಪೋಷಕರು ಕುತೂಹಲದಿಂದ ವೀಕ್ಷಿಸುವರು.

ಪುಷ್ಕರಣಿಯ ಪಶ್ಚಿಮದ ದಂಡೆಗೆ ಬಂದಾಗ ಪೋಷಕರು ಮಗುವಿಗೆ ಹೊಸ ಬಟ್ಟೆ, ಮಾಲೆ ಹಾಕಿ ಕುಂಕುಮದ ತಿಲಕವಿಟ್ಟು ಆರತಿ ಬೆಳಗುವರು. ನಂತರ ಬನಶಂಕರಿದೇವಿ ದರ್ಶನ ಪಡೆಯುವರು.

ಮೂರು ತಲೆಮಾರಿನಿಂದ ತೆಪ್ಪ ಬಿಡುವ ಸೇವೆಯನ್ನು ನಮ್ಮ ಕುಟುಂಬದವರು ಮುಂದುವರೆಸಿಕೊಂಡು ಬಂದಿದ್ದಾರೆ. 

-ಶಂಕ್ರಪ್ಪ ಅಂಬಿಗೇರ ಮಾರುತಿ ಅಂಬಿಗೇರ ಚೊಳಚಗುಡ್ಡ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT