ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ | ಸ್ವಚ್ಛತೆಗೆ ಸವಾಲಾದ ಪ್ಲಾಸ್ಟಿಕ್ ತಾಜ್ಯ

Published 6 ಜನವರಿ 2024, 4:39 IST
Last Updated 6 ಜನವರಿ 2024, 4:39 IST
ಅಕ್ಷರ ಗಾತ್ರ

ಹುನಗುಂದ: ಪಟ್ಟಣದ ಸ್ವಚ್ಛತಗೆ ಪ್ಲಾಸ್ಟಿಕ್ ತಾಜ್ಯ ಸವಾಲಾಗಿ ಪರಿಣಮಿಸಿದೆ.

ಪಟ್ಟಣದ ಚರಂಡಿಗಳು, ಬಸ್ ನಿಲ್ದಾಣ, ವಿಜಯ ಮಹಾಂತೇಶ ವೃತ್ತ ಸೇರಿದಂತೆ ಹೆಚ್ಚಿನ ಜನಸಂದಣಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ತಾಜ್ಯ ಹೆಚ್ಚಾಗಿ ಕಂಡುಬರುತ್ತಿದ್ದು, ಸ್ವಚ್ಛತಗೆ ಪುರಸಭೆಯ ಪೌರ ಕಾರ್ಮಿಕರು ಹರಸಾಹಸ ಪಡುವಂತಾಗಿದೆ.

ಕೇಂದ್ರ ಸರ್ಕಾರ 2020 ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮಾರಾಟ ಮತ್ತು ಬಳಕೆ ಮಾಡುವುದನ್ನು ನಿಷೇಧಿಸಿದೆ. ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಚೀಲ, ಬ್ಯಾನರ್‌ಗಳು, ಬಂಟಿಂಗ್ಸ್, ಫ್ಲೆಕ್ಸ್, ಪ್ಲೇಟುಗಳು, ಪ್ಲಾಸ್ಟಿಕ್  ಧ್ವಜ, ಕಪ್, ಚಮಚಗಳು ಸೇರಿದಂತೆ ಕೆಲವು ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಟ್ಟಲುಗಳ ಬಳಕೆ ಮೀತಿ ಮೀರಿದೆ. ಇದರೊಂದಿಗೆ ನೀರಿನ ಪ್ಯಾಕೇಟ್‌ಗಳ ಬಳಕೆಯೂ ಕಡಿಮೆ ಆಗಿಲ್ಲ.

ಪಟ್ಟಣದ ಕೆಲವು ಬೀದಿ ಬದಿ ವ್ಯಾಪಾರಿಗಳು ಮತ್ತು ಹೋಟಲ್‌ಗಳಲ್ಲಿ ತಟ್ಟೆ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಬಳಸುತ್ತಿದ್ದಾರೆ. ಹೀಗೆ ಬಳಸುವ ಪ್ಲಾಸ್ಟಿಕ್ ಹಾಳೆಯನ್ನು ಅಲ್ಲಿಯೇ ಹತ್ತಿರದಲ್ಲಿರುವ ಚರಂಡಿಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಚರಂಡಿಯಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ವವರು ಮಾತ್ರ ನಮಗೂ ಇದಕ್ಕೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ.

ಬಿಡಾಡಿ ದನಗಳ ಹೊಟ್ಟೆ ಸೇರುವ ಪ್ಲಾಸ್ಟಿಕ್ ತಾಜ್ಯ

ಬೀದಿ ಬದಿ ಹಾಗೂ ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ತಯಾರಿಸುವ ತಿಂಡಿಗಳನ್ನು ತಟ್ಟೆಯ ಮೇಲ್ಭಾಗದ ಪ್ಲಾಸ್ಟಿಕ್ ಹಾಳೆ ಮೇಲೆ ಹಾಕಿ ಗ್ರಾಹಕರಿಗೆ ಕೊಡುತ್ತಾರೆ. ನಂತರ ಆ ಹಾಳೆಯಲ್ಲಿ ಉಳಿಯುವ ಪದಾರ್ಥವನ್ನು ಬಿಡಾಡಿ ದನಗಳು ತಿನ್ನುವುದರಿಂದ  ಪ್ಲಾಸ್ಟಿಕ್ ಹಾಳೆಯನ್ನೂ ನುಂಗುತ್ತಿವೆ ಎಂದು ಪಟ್ಟಣದ ಸಾರ್ವಜನಿಕರು ಆರೋಪಿಸಿದರು.

ಹಿರೇಹಳ್ಳದ ಒಡಲು ಸೇರುವ ತಾಜ್ಯ

ಪಟ್ಟಣದ ಮಧ್ಯ ಭಾಗದಲ್ಲಿ ಹಿರೇಹಳ್ಳ ಇದೆ. ಇದಕ್ಕೆ ಪಟ್ಟಣದ ಬಹುತೇಕ ಚರಂಡಿ ನೀರಿನ ಜೊತೆಗೆ ಪ್ಲಾಸ್ಟಿಕ್ ತಾಜ್ಯವು ಸೇರಿದಂತೆ ಇನ್ನೀತರ ತಾಜ್ಯವೂ ಸೇರುತ್ತದೆ. ಇದರಿಂದ ಹಿರೇಹಳ್ಳ ಮಲೀನಗೊಂಡು ದುರ್ನಾತ ಬೀರುವಂತಾಗಿದೆ.

ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪುರಸಭೆ ವ್ಯಾಪ್ತಿಯಲ್ಲಿ ಕರ ಪತ್ರ ಹಂಚಲಾಗಿದೆ. ಎರಡು ತಿಂಗಳ ಹಿಂದೆ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಕೆಲವರಿಗೆ ದಂಡವನ್ನೂ ವಿಧಿಸಲಾಗಿದೆ.
ಎಂ.ಎಸ್. ಹುಣಶ್ಯಾಳ, ಕಿರಿಯ ಆರೋಗ್ಯ ನಿರೀಕ್ಷಕ, ಪುರಸಭೆ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT