ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಚೀಟಿ: ಸಂಖ್ಯೆ ಹೆಚ್ಚುವಂತಿಲ್ಲ, ಹಳೆಯದು ರದ್ದಾದರಷ್ಟೇ ಹೊಸದು

ಹೊಸಬರಿಗೆ ನೀಡಿದರೂ, ಒಟ್ಟು ಪಡಿತರ ಚೀಟಿ ಸಂಖ್ಯೆ ಹೆಚ್ಚುವಂತಿಲ್ಲ
Published 16 ನವೆಂಬರ್ 2023, 14:29 IST
Last Updated 16 ನವೆಂಬರ್ 2023, 20:37 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಹೊಸ ಪಡಿತರ ಚೀಟಿಗಳನ್ನು ವಿತರಿಸಿದಷ್ಟೇ ಪ್ರಮಾಣದಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು. ಒಟ್ಟಾರೆ ಈಗಿರುವ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿಸುವಂತಿಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶವು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ರಾಜ್ಯದಲ್ಲಿ 10.88 ಲಕ್ಷ  ಅಂತ್ಯೋದಯ ಮತ್ತು 1.16 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಇದ್ದಾರೆ. ‘ಹೊಸ ಬಿಪಿಎಲ್‌ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಇಲಾಖೆಯ ಆದೇಶ ಹೊರಬಂದಿದೆ.

ಒಟ್ಟು 2.95 ಲಕ್ಷ ಪೈಕಿ 2.78 ಲಕ್ಷ ಅರ್ಜಿಗಳ ಸ್ಥಳ ಪರಿಶೀಲನೆ ನಡೆದಿದೆ. 2.28 ಲಕ್ಷ ಅರ್ಜಿಗಳು ಅರ್ಹವೆಂದು ಕಂಡು ಬಂದಿವೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 27,486 ಅರ್ಜಿ ಸಲ್ಲಿಕೆಯಾಗಿವೆ.

ಯಾರದ್ದು ರದ್ದು: ಸತತ 6 ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಆದ್ಯತೆ ಮೇರೆಗೆ ಸೂಚಿಸಲಾಗಿದೆ. ಅನರ್ಹರೂ ಪಡಿತರ ಚೀಟಿಗಳನ್ನು ಪಡೆದ ಬಗ್ಗೆ ದೂರುಗಳಿದ್ದು, ಪರಿಶೀಲಿಸಿ ಅಂತಹವರ ಕಾರ್ಡ್‌ಗಳನ್ನು ರದ್ದುಪಡಿಸಲು ತಿಳಿಸಲಾಗಿದೆ.

ರಾಜ್ಯದಲ್ಲಿರುವ ಒಟ್ಟು ಪಡಿತರ ಚೀಟಿದಾರರ ಪೈಕಿ 14,826 ಅಂತ್ಯೋದಯ ಮತ್ತು 3.32 ಲಕ್ಷ ಬಿಪಿಎಲ್‌ ಕಾರ್ಡ್ ಹೊಂದಿದವರು ಸತತ 6 ತಿಂಗಳಿಂದ ಆಹಾರ ಧಾನ್ಯ ಪಡೆಯದಿರುವುದು ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಪಡಿತರ ಪಡೆಯದಿರುವವರ ಸಂಖ್ಯೆ 37,880 ಇದೆ.

ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿಗಳ ಆಧಾರದ ಮೇಲೆಯೇ ಗೃಹಲಕ್ಷ್ಮಿ, ಆಯುಷ್ಮಾನ್‌ ಆರೋಗ್ಯ ಚಿಕಿತ್ಸೆಯ ₹5 ಲಕ್ಷ ವೆಚ್ಚ, ವಿವಿಧ ಇಲಾಖೆ, ನಿಗಮಗಳ ಫಲಾನುಭವಿಗಳ ಆಯ್ಕೆ, ಸಾಲ ಸೌಲಭ್ಯ ನೀಡಲಾಗುತ್ತದೆ. ಪಡಿತರ ಚೀಟಿ ಸಂಖ್ಯೆ ಹೆಚ್ಚಳವಾದರೆ, ಸರ್ಕಾರಕ್ಕೂ ಹೊರೆಯಾಗುವ ಕಾರಣ ಪಡಿತರ ಕಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

‘6 ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT