ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಗ್ರಾಮ’ ಪುರಸ್ಕಾರದ ಗ್ರಾಮಕ್ಕಿಲ್ಲ ರಸ್ತೆ

ಅಧಿಕಾರಿಗಳಿಗೆ ಕಾಣದ ಹದಗೆಟ್ಟ ರಸ್ತೆ; ವಾಹನ ಸವಾರರ ಪರದಾಟ
Last Updated 18 ಆಗಸ್ಟ್ 2020, 7:41 IST
ಅಕ್ಷರ ಗಾತ್ರ

ಯಡ್ರಾಮಿ: ಪಟ್ಟಣದಿಂದ ಮಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಶಾಹಾಪುರ-ಸಿಂದಗಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಮಳ್ಳಿ ಗ್ರಾಮ 5,000 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ತನ್ನ ಕೇಂದ್ರ ಸ್ಥಾನದಲ್ಲಿಯೇ ಗ್ರಾ.ಪಂ ಕಚೇರಿ ಹೊಂದಿದೆ.

ರಸ್ತೆಗಳ ದುರಸ್ತಿಗಾಗಿ ಹಲವಾರು ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರಸ್ತೆಗಳು ಮಾತ್ರ ಅಭಿವೃದ್ಧಿ ಹೊಂದಿಲ್ಲ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಎಲ್ಲಾ ರಸ್ತೆಗಳು ಕೆಸರಿನಿಂದ ತುಂಬಿಕೊಂಡಿದ್ದು, ಜನರಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಜಮೀನಿಗೆ ತೆರಳುವ ರಸ್ತೆಯಂತೆ ಕಾಣುವ ರಾಜ್ಯ ಹೆದ್ದಾರಿ ಎಂದರೆ ಆಶ್ಚರ್ಯವಾದೀತು! ಹೌದು, ಇದು ಯಡ್ರಾಮಿಯಿಂದ ಮಳ್ಳಿ ಮಾರ್ಗವಾಗಿ ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ದುಸ್ಥಿತಿ.

ಇನ್ನು ಮಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ, ಸ್ವಚ್ಛತೆ ಮರಿಚೀಕೆಯಾಗಿವೆ. ಒಂದು ಕಡೆ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದು ಮಳೆ ನೀರು ತುಂಬಿಕೊಂಡರೆ, ಇನ್ನೊಂದೆಡೆ ರಸ್ತೆ ಪಕ್ಕದಲ್ಲಿ ತಿಪ್ಪೆಗುಂಡಿಗಳು ಇರುವುದರಿಂದ ಇಡೀ ಗ್ರಾಮ ಗಬ್ಬು ವಾಸನೆ ಬರುತ್ತಿದೆ. ಗ್ರಾಮದಲ್ಲಿ ನಾನಾ ಸಮಸ್ಯೆಗಳು ತಾಂಡವಾಡುತ್ತಿವೆ. ಗ್ರಾಮ ಪಂಚಾಯತಿಯವರು ತಾತ್ಕಾಲಿಕವಾಗಿ ನೀರು ನಿಂತ ಜಾಗದಲ್ಲಿ ಜಲ್ಲಿಕಲ್ಲು, ಮುರಮ್‌ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘2019ನೇ ಸಾಲಿನಲ್ಲಿ ಕರ ವಸೂಲಿಯಲ್ಲಿ ಶೇ 100 ಸಾಧನೆ, ಮಹಿಳೆಯರಿಗೆ 80 ಶೌಚಗೃಹ ನಿರ್ಮಿಸಿದ ಹೆಗ್ಗಳಿಕೆಗೆ ಮಳ್ಳಿ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಆದರೆ ಈಗ ಗ್ರಾಮಕ್ಕೆ ತೆರಳಲು ಜನರಿಗೆ ರಸ್ತೆ ಇಲ್ಲದಂತಾಗಿರುವುದು ವಿಪರ್ಯಾಸ ಸಂಗತಿ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

‘ಹಲವು ವರ್ಷದಿಂದಲೂ ಮಳ್ಳಿ ಗ್ರಾಮಕ್ಕೆ ತೆರಳಲು ರಸ್ತೆ ಸಮಸ್ಯೆ ಇದೆ. ಕಿರಿದಾದ ರಸ್ತೆಯಲ್ಲೇ ಜನರು ತಮ್ಮ ವಾಹನ ನಡೆಸಿಕೊಂಡು ಹೋಗುತ್ತಿದ್ದರು. ಮಳೆಗಾಲ ಆಗಿರುವುದರಿಂದ ತಗ್ಗುಗುಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT