ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು, ನವ ದಂಪತಿ ಸಾವು

ಚಿಕ್ಕೇನಹಳ್ಳಿ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ದುರ್ಘಟನೆ–ಮುಳುಗುವ ಮಕ್ಕಳನ್ನು ರಕ್ಷಣೆಗೆ ಯತ್ನ
Last Updated 9 ಏಪ್ರಿಲ್ 2018, 11:48 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಕೈಲಾಂಚ ಹೋಬಳಿಯ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮತ್ತು ನವದಂಪತಿ ಮೃತಪಟ್ಟಿದ್ದಾರೆ. ಚನ್ನಪಟ್ಟಣದ ಹನುಮಂತನಗರದ ದಂಪತಿ ಶೇಖರ್ (32) ಹಾಗೂ ಸುಮಾ (26) ಮತ್ತು ಮಕ್ಕಳಾದ ಧನುಷ್ (8)ಹಾಗೂ ಹಂಸ (12) ಮೃತ ದುರ್ದೈವಿಗಳು. ಎರಡು ತಿಂಗಳ ಹಿಂದೆಯಷ್ಟೇ ಶೇಖರ್ ಮತ್ತು ಸುಮಾ ವಿವಾಹ ನೆರವೇರಿತ್ತು. ಚಿಕ್ಕೇನಹಳ್ಳಿಯಲ್ಲಿರುವ ಸಂಬಂಧಿಕರಾದ ರಾಜು ಅವರ ಮನೆಗೆ ನವದಂಪತಿ ಬಂದಿದ್ದರು. ಭಾನುವಾರ ಗ್ರಾಮದ ಪಕ್ಕದಲ್ಲಿದ್ದ ನಾಗಪ್ಪ ದೇವಸ್ಥಾನಕ್ಕೆ ಅವರು ಸಂಬಂಧಿಕರ ಮಕ್ಕಳ ಜತೆಯಲ್ಲಿ ತೆರಳಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ನಾಲ್ವರು ಸಮೀಪದಲ್ಲಿಯೇ ಇದ್ದ ಕೆರೆ ಬಳಿಗೆ ಹೋಗಿದ್ದಾರೆ. ಮೊದಲು ಹಂಸ ಮತ್ತು ಧನುಷ್‌ ಕೆರೆಯಲ್ಲಿ ಈಜಾಡಲು ಇಳಿದಿದ್ದಾರೆ. ಮಕ್ಕಳು ಮುಳುಗುತ್ತಿರುವುದನ್ನು ಕಂಡ ಶೇಖರ್ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಲು ಸುಮಾ ಕೆರೆಗೆ ಇಳಿದಾಗ ಮೃತಪಟ್ಟಿದ್ದಾರೆ.

ಕೆರೆಯಲ್ಲಿ ಬಾಲಕಿ ಹಂಸ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ನುರಿತ ಈಜುಗಾರರು ಕೆರೆಯಲ್ಲಿ ಮುಳುಗಿದ್ದ ಉಳಿದ ಮೂವರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಂತ್ಯಕ್ರಿಯೆ: ಧನುಷ್ ಹಾಗೂ ಹಂಸ ಅವರ ಅಂತ್ಯಕ್ರಿಯೆ ಭಾನುವಾರ ರಾತ್ರಿ ನಡೆಯಿತು. ಧನುಷ್‌ ಮೂರನೆ ತರಗತಿಯಲ್ಲಿ, ಹಂಸ ಐದನೇ ತರಗತಿಯಲ್ಲಿ ಓದುತ್ತಿದ್ದರು. ಇವರ ತಂದೆ ರಾಜು ಹೋಟೆಲ್‌ ನಡೆಸುತ್ತಿದ್ದಾರೆ.

ಆದ್ದರಿಂದ ಕೆರೆಯ ಸುತ್ತ ತಂತಿ ಬೇಲಿ, ಇಲ್ಲವೆ ಸೂಚನಾ ಫಲಕಗಳನ್ನು ಹಾಕಿದರೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಬಹುದು. ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಸಾವಿಗೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.

10ಕ್ಕೂ ಹೆಚ್ಚು ಬಲಿ

ಚಿಕ್ಕೇನಹಳ್ಳಿ ಕೆರೆಯು ಮೃತ್ಯು ಕೂಪವಾಗಿ ಮಾರ್ಪಟ್ಟಿದೆ. ಈಜು ಹೊಡೆಯಲು ಬಂದವರು, ಬಟ್ಟೆ ತೊಳೆಯಲು ಬಂದವರು ಸೇರಿದಂತೆ ಕಳೆದ ಎರಡು ವರ್ಷಗಳಿಂದೀಚೆಗೆ ಸುಮಾರು 10ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಈ ಕೆರೆಯ ಅಕ್ಕಪಕ್ಕದಲ್ಲಿರುವ ಇಟ್ಟಿಗೆ ಕಾರ್ಖಾನೆಯವರು ಕೆರೆಯ ಮಣ್ಣನ್ನು ತೆಗೆದಿರುವುದರಿಂದ ಕೆರೆಯಲ್ಲಿ ದೊಡ್ಡದೊಡ್ಡ ಗುಂಡಿಗಳಾಗಿವೆ. ಇದರಿಂದ ಕೆರೆ ತುಂಬಾ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಈಗ ಬೇಸಿಗೆ ಕಾಲವಾದ್ದರಿಂದ ಹಲವು ಮಂದಿ ಇಲ್ಲಿ ಈಜಾಡಲು ಬರುತ್ತಾರೆ ಎಂದು ತಿಳಿಸಿದರು.

ಕೆರೆಯ ಮುಂಭಾಗ ನಾಗಪ್ಪನ ದೇವಸ್ಥಾನ ಇರುವುದರಿಂದ ಹಲವು ಮಂದಿ ಪ್ರತಿನಿತ್ಯ ದೂರದ ಸ್ಥಳಗಳಿಂದ ಬರುತ್ತಾರೆ. ಅವರಿಗೆ ಕೆರೆಯಲ್ಲಿನ ಗುಂಡಿಗಳ ಬಗ್ಗೆ ತಿಳಿದಿರುವುದಿಲ್ಲ. ಇಂತಹ ಸಮಯದಲ್ಲಿ ಅವಘಡಗಳು ಸಂಭವಿಸುತ್ತವೆ ಎಂದು ತಿಳಿಸಿದರು.

ಕೆರೆಯಲ್ಲಿ ಮುಳುಗಿ ಮೃತಪಟ್ಟ ಹಂಸ, ಧನುಷ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT