ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ | ಬತ್ತಿದ ಜಲಮೂಲ: ಜಾನುವಾರು ಪರದಾಟ

ಪ್ರಾಣಿಗಳಿಗೆ ತೊಂದರೆಯಾದರೆ ಸೂಕ್ತ ಚಿಕಿತ್ಸೆಯೂ ಲಭಿಸುತ್ತಿಲ್ಲ: ಸಾರ್ವಜನಿಕರ ದೂರು
ಕೆ.ಎಸ್.ಸೋಮನಕಟ್ಟಿ
Published 6 ಏಪ್ರಿಲ್ 2024, 5:58 IST
Last Updated 6 ಏಪ್ರಿಲ್ 2024, 5:58 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಣಬಿಸಿಲು ಜಾನುವಾರಗಳಿಗೆ ಸಂಚಕಾರವಾಗಿ ಪರಿಣಮಿಸಿದೆ.

ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರು ವುದರಿಂದ ಜಾನುವಾರಗಳು ಸೂರ್ಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಆಹಾರ ಹುಡುಕಿಕೊಂಡು ಹೋಗಬೇಕಾಗಿದ್ದ ಜಾನುವಾರು ಸದ್ಯ ನೆರಳು ಸಿಕ್ಕರೆ ಸಾಕು ಎಂದು ಮರಗಳನ್ನು ಹುಡುಕುತ್ತಿವೆ.

ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾಯಂ ಪಶು ವೈದ್ಯಾಧಿಕಾರಿಗಳು ಇಲ್ಲದಿರುವುದ ರಿಂದ ಜಾನುವಾರುಗಳು ತೊಂದರೆ ಗೊಳಗಾದಲ್ಲಿ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ ಎಂಬ ದೂರು ಕೂಡ ಕೇಳಿ ಬರುತ್ತಿದೆ. ಗ್ರಾಮೀಣ ಭಾಗದಲ್ಲಿನ ಹೈನುಗಾರರು ದೂರದ ತಾಲ್ಲೂಕು ಕೇಂದ್ರದ ಪಶುವೈದ್ಯರನ್ನೇ ಆಶ್ರಯಿಸ ಬೇಕಾಗಿರುವುದರಿಂದ ಹೈನುಗಾರರು ತೊಂದರೆ ಅನುಭವಿಸುತ್ತಿದ್ದಾರೆ.

ಮೇವಿಲ್ಲ, ನೀರಿಲ್ಲ: ತಾಲ್ಲೂಕಿನಲ್ಲಿ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜಾನುವಾರು ಉಷ್ಣಾಂಶ ತಡೆದುಕೊಳ್ಳುವುದು ಕಷ್ಟ . ರಾಸುಗಳು ವಿವಿಧ ರೋಗಗಳಿಗೆ ತುತ್ತಾಗಿ, ಬಿಸಿಲಿನ ಝಳಕ್ಕೆ ಅನಾರೋಗ್ಯ ಕೀಡಾಗುತ್ತಿವೆ. ಹಸಿರು ಮೇವಿನ ಕೊರತೆಯಿಂದ ಹಾಲು ಪೂರೈಕೆಯೂ ಕುಂಠಿತಗೊಂಡಿದೆ.

ನದಿ, ಹಳ್ಳ, ಕಾಲುವೆಗಳು ಬತ್ತಿ ರುವುದರಿಂದ ವನ್ಯಜೀವಿಗಳು ನೀರಿಗಾಗಿ ಪರದಾಡುತ್ತಿವೆ. ಅರಣ್ಯ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಕಾಡ್ಗಿಚ್ಚಿ ನಿಂದಾಗಿ ಹಸಿರು ಮೇವು ಇಲ್ಲವಾಗಿದೆ. ಜಮೀನಿನ ಬದುಗಳಿಗೆ ಅಲ್ಲಲ್ಲಿ ಉಳಿದ ಬೇವಿನ ಮರಗಳು ಮತ್ತು ಪಾಳು ಬಿದ್ದ ಕಟ್ಟಡಗಳ ನೆರಳನ್ನು ಆಶ್ರಯಿಸಿವೆ.

ಜಮೀನುಗಳಲ್ಲಿನ ಕೊಳವೆ ಬಾವಿಗಳು, ನಾಲೆಯಲ್ಲಿ ಹರಿಯುವ ನೀರು ಬತ್ತಿಹೋಗಿದ್ದು, ನೀರಿಲ್ಲದೆ ದಾಹ ತೀರಿಸಿಕೊಳ್ಳಲಾಗದೆ ಪರದಾಡುತ್ತಿವೆ. ಕಲುಷಿತ ನೀರು, ಕೊಳಚೆ ನೀರು, ಕೆಸರು ನೀರು ಸೇವನೆಯಿಂದ ಭೇದಿಯ ಜತೆಗೆ ರೋಗ ನಿರೋಧಕ ಶಕ್ತಿ ಕುಂದಿ, ಜೀವಕ್ಕೆ ಅಪಾಯವಾಗುವ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಕುರಿಗಾಹಿಗಳು.

ಸಾಕು ಪ್ರಾಣಿಗಳಿಗೂ ಕಂಟಕ: ಮೇಕೆ, ಕುರಿ, ಕೋಳಿ, ನಾಯಿ ಸಹ ಬಿಸಿಲಿನ ಪ್ರತಾಪಕ್ಕೆ ಮೂಲೆ ಸೇರಿವೆ. ಬೇಧಿಗೂ ಒಳಗಾಗುತ್ತಿವೆ. ಸಾಕು ಪ್ರಾಣಿಗಳಿಗೆ ನೆರಳು ಮಾಡಲು ಅನ್ನದಾತರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇನ್ನಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು, ಆಯಕಟ್ಟಿನ ಪ್ರದೇಶಗಳಲ್ಲಿ ನೀರು, ಮೇವಿನ ನೆಲೆಗಳನ್ನು ತೆರೆಯಬೇಕು. ಬಿಸಿಲಿನ ತಾಪ ಇಳಿಯುವವರೆಗೂ ಪಶುವೈದ್ಯಾಧಿಕಾರಿಗಳನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ನೇಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಎಲ್ಲ ಅಧಿಕಾರಿಗಳು ಚುನಾವಣೆಯಲ್ಲಿ ಮುಳುಗಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆರೆ, ಹಳ್ಳ, ಕೊಳ್ಳಗಳಿಗೆ ನೀರು ಬಿಡುವ ಮೂಲಕ ದನಕರುಗಳನ್ನು ರಕ್ಷಿಸಿ
-ನಾಗಪ್ಪ, ರೈತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT