ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಹೊಸ ಪದಾಧಿಕಾರಿಗಳ ಪಟ್ಟಿ: ಜಿಲ್ಲಾ ಚುಕ್ಕಾಣಿ ಹಿಡಿಯುವವರು ಯಾರು?

ಬಿಜೆಪಿ ಹೊಸ ಪದಾಧಿಕಾರಿಗಳ ಪಟ್ಟಿ ನಿರೀಕ್ಷೆಯಲ್ಲಿ ಮುಖಂಡರು
ಬಸವರಾಜ ಹವಾಲ್ದಾರ
Published 10 ಡಿಸೆಂಬರ್ 2023, 5:28 IST
Last Updated 10 ಡಿಸೆಂಬರ್ 2023, 5:28 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡಿದ್ದಾರೆ. ಅದರೊಂದಿಗೆ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಯಾವಾಗ ಎಂಬ ಪ್ರಶ್ನೆ ಮುಖಂಡರ ಮುಂದಿದೆ. ಜಿಲ್ಲಾ ಘಟಕದ ಹೊಸ ಅಧ್ಯಕ್ಷರ ನೇಮಕವಾಗಲು ನಾಯಕರು ತೆರೆಮರೆಯಲ್ಲಿ ಯತ್ನಿಸುತ್ತಿದ್ದಾರೆ.

ಜಿಲ್ಲಾ ಘಟಕಕ್ಕೆ ಹೊಸ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ನೇಮಕವಾಗಲಿದೆ. ಹೊಸ ಹುರುಪಿನೊಂದಿಗೆ ಕೆಲಸ ಮಾಡುವ ಹುಮ್ಮಸ್ಸು ಜಿಲ್ಲಾ ನಾಯಕರದ್ದಾಗಿದೆ. ಆದರೆ, ರಾಜ್ಯ ಘಟಕದ ಅಧ್ಯಕ್ಷ, ವಿರೋಧ ಪಕ್ಷದ ನಾಯಕನ ಆಯ್ಕೆಗೆ ಆರು ತಿಂಗಳು ತೆಗೆದುಕೊಂಡ ಹೈಕಮಾಂಡ್, ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಎಷ್ಟು ದಿನ ತೆಗೆದುಕೊಳ್ಳಲಿದೆ ಎಂಬ ಆತಂಕವೂ ಇದೆ.

ಶಾಂತಗೌಡ ಪಾಟೀಲ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಅವರು ಸೋಲನುಭವಿಸಿದರು. ಜಿಲ್ಲೆಯಲ್ಲಿಯೂ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಪರಿಣಾಮ ಸಂಘಟನೆ ಚುರುಕುಗೊಳಿಸಬೇಕಾದ ಅಗತ್ಯವಿದೆ.

ಜಿಲ್ಲಾ ಘಟಕದ ಹಿರಿಯ ನಾಯಕರ ನಡುವೆ ಬಹಿರಂಗ ಹಾಗೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಮಾಜಿ ಸಚಿವರು, ಮಾಜಿ ಶಾಸಕರ ಕಿತ್ತಾಟದ ಪರಿಣಾಮವಾಗಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಏರು–ಪೇರಾಯಿತು ಎನ್ನುವುದು ಬಹಿರಂಗ ಗುಟ್ಟು.

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐವರಿದ್ದ ಶಾಸಕರ ಸಂಖ್ಯೆ ಎರಡಕ್ಕೆ ಇಳಿದಿದೆ. ಅವರ ವೈಮನಸ್ಸಿನಿಂದಾಗಿ ಎರಡನೇ ಹಂತದ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ಬಳಿ ಹೋದರೆ ಇವರಿಗೆ ಸಿಟ್ಟು, ಇವರ ಬಳಿ ಹೋದರೆ ಅವರಿಗೆ ಸಿಟ್ಟು ಬರುವುದರಿಂದ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಇದರ ಪರಿಣಾಮ 20 ವರ್ಷಗಳಿಂದ ಬಿಜೆಪಿ ವಶದಲ್ಲಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನೂ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು. ಅದನ್ನು ತಪ್ಪಿಸಲು ಎಲ್ಲರನ್ನೂ ಒಂದುಗೂಡಿಸುವ ಜೊತೆಗೆ ಹೊಸ ತಂಡ ರಚನೆ ಮಾಡಬೇಕಿದೆ.

ವಿಧಾನಸಭೆ ಚುನಾವಣೆಯ ನಂತರ ಜಿಲ್ಲೆಯಲ್ಲಿ ಬಿಜೆಪಿ ಮಂಕಾಗಿದೆ. ಸರ್ಕಾರದ ವಿರುದ್ಧ ಅಲ್ಲೊಂದು, ಇಲ್ಲೊಂದು ಪ್ರತಿಭಟನೆ ಬಿಟ್ಟರೆ, ಉಳಿದ ಚಟುವಟಿಕೆಗಳೂ ಜೋರಾಗಿಲ್ಲ.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ ಎಂದು ಪ್ರಧಾನ ಕಾರ್ಯದರ್ಶಿಯಾಗಿರುವ ರಾಜು ನಾಯ್ಕರ್ ಬಹಿರಂಗವಾಗಿಯೇ ಹೇಳಿದ್ದಾರೆ. ಇಷ್ಟು ವರ್ಷಗಳ ದುಡಿಮೆಗೆ ಮಾನ್ಯತೆ ಸಿಗುವುದು ಎಂಬ ನಿರೀಕ್ಷೆಯಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿವೆ. 

ವಿಧಾನ ಮಂಡಲ ಅಧಿವೇಶನ ನಂತರ ಜಿಲ್ಲಾ ಘಟಕಗಳ ಪುನರ್‌ರಚನೆಯಾಗುವುದೇ? ಲೋಕಸಭಾ ಚುನಾವಣೆ ಮುಗಿಯುವವರಿಗೂ ಕಾಯ್ದು ನೋಡುವ ತಂತ್ರವನ್ನು ಪಕ್ಷದ ವರಿಷ್ಠರು ಅನುಸರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT