ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ಬನಶಂಕರಿದೇವಿ ಜಾತ್ರೆ: ಗಮನ ಸೆಳೆದ ಬಾಗಿಲು ಚೌಕಟ್ಟು

ಕಲಾತ್ಮಕ ಬಾಗಿಲು ಚೌಕಟ್ಟುಗಳಿಗೆ ಕುಶಲ ಕಲೆಯ ಶೃಂಗಾರ
Published 7 ಫೆಬ್ರುವರಿ 2024, 4:32 IST
Last Updated 7 ಫೆಬ್ರುವರಿ 2024, 4:32 IST
ಅಕ್ಷರ ಗಾತ್ರ

ಬಾದಾಮಿ: ಸಮೀಪದ ಬನಶಂಕರಿದೇವಿ ಜಾತ್ರೆಯಲ್ಲಿ ರೋಣ ತಾಲ್ಲೂಕಿನ ಹೊಳೆಆಲೂರಿನ ಕಟ್ಟಿಗೆಯ ಬಾಗಿಲು ಚೌಕಟ್ಟುಗಳು ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಯಿಂದ ಯಾತ್ರಿಕರನ್ನು ಆಕರ್ಷಿಸುತ್ತಿವೆ.

ಜಾತ್ರೆಗೆ ಬಂದ ಯಾತ್ರಿಕರು ಕೆಲವರು ಕಟ್ಟಿಗೆ ಕಲೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಹೊಸ ಮನೆಗೆ ಎಂತಹ ಮುಂಬಾಗಿಲು ಹಚ್ಚಬೇಕು ಎಂದು ಜಾತ್ರೆಗೆ ಬಂದಾಗ ಬಾಗಿಲನ್ನು ವೀಕ್ಷಿಸಿ ಖರೀದಿಸುತ್ತಾರೆ.

‘ಮೊದಲು ಬರೀ ಗ್ರಾಮೀಣ ಪ್ರದೇಶದ ಜನರು ಮಾತ್ರ ಬಾಗಿಲು ಖರೀದಿಸುತ್ತಿದ್ದರು. ಈಚೆಗೆ ನಗರ ಪ್ರದೇಶದ ಜನರೂ ಸಹ ಹೊಸ ನಮೂನೆಯ ಬಾಗಿಲು ಖರೀದಿ ಮಾಡುತ್ತಾರೆ’ ಎಂದು ಕಲಾವಿದ, ಅಂಗಡಿಯ ಮಾಲೀಕ ಬಷೀರಅಹ್ಮದ್ ಕೊತಬಾಳ’ ಹೇಳಿದರು.

ನಮ್ಮ ಮನೆಯಲ್ಲಿ ಇಡೀ ಕುಟುಂಬದ 10 ಜನರು ಆರು ತಿಂಗಳು ಮುಂಚೆಯೇ ಬಾಗಿಲು ಚೌಕಟ್ಟನ್ನು ರೂಪಿಸುತ್ತೇವೆ. ಪ್ರತಿ ಜಾತ್ರೆಗೆ 80 ರಿಂದ 100 ಬಾಗಿಲು ಮಾರಾಟಕ್ಕೆ ತರುತ್ತೇವೆ ಎಂದರು.

‘ಈ ಸಲ ವ್ಯಾಪಾರ ಇಲ್ಲರಿ. ಮಳಿ ಆಗಿಲ್ಲ. ಜನರ ಕೈಯಾಗ ರೊಕ್ಕ ಇಲ್ಲ. ಖರೀದಿ ಮಾಡಾಕ ಬರವಲ್ಲರು. ಈಗಾಗಲೇ ಲಕ್ಷಕ್ಕೂ ಹೆಚ್ಚಿನ ವ್ಯಾಪಾರ ಅಕ್ಕಿತ್ತು ಕೇವಲ ₹ 20-30 ಸಾವಿರ ವ್ಯಾಪಾರ ಆಗೈತಿ’ ಎಂದು ಬೇಸರದಿಂದ ಹೇಳಿದರು.

‘ಮೊದಲು ಕೇವಲ ಬಡಿಗೇರ ಜನಾಂಗದವರು ಮಾತ್ರ ಬಾಗಿಲು ರೂಪಿಸುತ್ತಿದ್ದರು. ಈಗ ಎಲ್ಲ ವರ್ಗದ ಜನಾಂಗದವರು ಬಾಗಿಲು ಚೌಕಟ್ಟು ಮಾಡುವ ಕಲೆಯನ್ನು ಹೊಂದಿದ್ದಾರೆ’ ಎಂದು ಕಲಾವಿದರು ತಿಳಿಸಿದರು.

ಸಾಗವಾನಿ, ಮೈಸೂರ ಸಾಗವಾನಿ ಮತ್ತು ಬೇವಿನ ಕಟ್ಟಿಗೆಯಲ್ಲಿ 9 ಅಡಿ ಮತ್ತು ಏಳು ಅಡಿ ಅಳತೆಯ ಬಾಗಿಲು ತಯಾರಿ ಮಾಡುವರು. ಗ್ರಾಮೀಣ ಪ್ರದೇಶದ ಜನರು 9 ಅಡಿ ಎತ್ತರ ಬಾಗಿಲು ಖರೀದಿ ಮಾಡಿದರೆ ನಗರ ಪ್ರದೇಶದ ಜನರು 7 ಅಡಿ ಎತ್ತರದ ಬಾಗಿಲು ಖರೀದಿಸುವರು. ಸಾಗವಾನಿ ಕಟ್ಟಿಗೆಯ ಬಾಗಿಲಕ್ಕೆ ₹ 30 ರಿಂದ ₹ 40 ಸಾವಿರ ಮತ್ತು ಮೈಸೂರು ಸಾಗವಾನಿ ಬಾಗಿಲಕ್ಕೆ ₹ 14 ರಿಂದ ₹ 20 ಸಾವಿರ ಮತ್ತು ಬೇವಿನ ಬಾಗಿಲಕ್ಕೆ ₹ 4 ರಿಂದ ₹ 6 ಮಾರಾಟ ಮಾಡುತ್ತಿದ್ದಾರೆ.

ಬಾಗಿಲು ಚೌಕಟ್ಟಿನಲ್ಲಿ ಹಬ್ಬಿದ ಬಳ್ಳಿ, ಗಿಡ, ಸೂರ್ಯ, ಚಂದ್ರ, ನವಿಲು, ಆನೆ, ಪಕ್ಷಿ, ನಂದಿ, ಗಣೇಶ, ಶಿವ, ಸರಸ್ವತಿ, ಲಕ್ಷ್ಮಿ, ತಿರುಪತಿ ತಿಮ್ಮಪ್ಪ, ಬಸವಣ್ಣ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ ಮತ್ತಿತರ ಮೂರ್ತಿಗಳನ್ನು ಕಾಷ್ಠದಲ್ಲಿ ಕಲಾವಿದರು ಕರಕುಶಲ ಕಲೆಯಿಂದ ಅರಳಿಸಿದ್ದಾರೆ.

ಹೊಳೆ ಆಲೂರ ಮತ್ತು ಸುತ್ತಲಿನ ಗ್ರಾಮಗಳ ನೂರಾರು ಕಲಾವಿದರು ಬಾಗಿಲು ಚೌಕಟ್ಟು ನಿರ್ಮಾಣ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಲ್ಲಪ್ಪ ಕುರಿ, ಶಿವಪ್ಪ ಅಮರಗೋಳ, ಎಚ್.ಆರ್ ಟಕ್ಕೇದ, ಬಾಳಪ್ಪ ಖ್ಯಾಡ, ಎಚ್ಚರಪ್ಪ ಗೌಡರ, ರಮೇಶ, ಕಾಶೀಮ್ ಮುಲ್ಲಾ, ಹನುಮಪ್ಪ ಹೆಗ್ರಿ, ಎಚ್ಚರಪ್ಪ ಗಾಣಿಗೇರ, ಮಲ್ಲಪ್ಪ ಹಡಪದ, ಮೆಹಬೂಬಸಾಬ್, ರಾಘು ಬಡಿಗೇರ, ಆರ್.ಎಂ.ಕೊತಬಾಳ, ಮಂಜಪ್ಪ ಹೆಗ್ರಿ ನೂರಾರು ಕಲಾವಿದರಿದ್ದಾರೆ.

‘ಕಾಷ್ಠ ಕಲೆ ಒಂದು ಕಾಲಕ್ಕೆ ಒಂದು ವರ್ಗದ ಸೀಮಿತವಾಗಿತ್ತು. ಈಗ ಆಸಕ್ತಿಯಿಂದ ದುಡಿಯುವವರ ಎಲ್ಲ ಜನಾಂಗದ ಸೊತ್ತಾಗಿದೆ. ಇಚ್ಛಾಶಕ್ತಿ ಇದ್ದವರು ಕಾಷ್ಠಕಲೆಯನ್ನು ಬೆಳೆಸಿದರು. ಹೊಳೆ ಆಲೂರಿನ ಸುತ್ತಲಿನ ಪ್ರದೇಶದಲ್ಲಿ ನೂರಾರು ಕಾಷ್ಠ ಕಲಾವಿದರು ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಯಲ್ಲಿ ಬಾಗಿಲು ಚೌಕಟ್ಟುಗಳನ್ನು ಅರಳಿಸುತ್ತಿದ್ದಾರೆ ’ ಎಂದು ಬನಶಂಕರಿ ಕನ್ನಡ ಹಂಪಿ ವಿಶ್ವ ವಿದ್ಯಾಲಯದ ಕೇಂದ್ರದ ನಿವೃತ್ತ ಮುಖ್ಯಸ್ಥ ಕೃಷ್ಣ ಕಟ್ಟಿ ಕಲೆಯ ವಿವರ ನೀಡಿದರು.

ಹೊಳೆಆಲೂರಿನ ಕಾಷ್ಠ ಕಲಾವಿದ ಬಷೀರಅಹ್ಮದ್ ರೂಪಿಸಿದ ಕಲಾತ್ಮಕ ಬಾಗಿಲು ಚೌಕಟ್ಟು
ಹೊಳೆಆಲೂರಿನ ಕಾಷ್ಠ ಕಲಾವಿದ ಬಷೀರಅಹ್ಮದ್ ರೂಪಿಸಿದ ಕಲಾತ್ಮಕ ಬಾಗಿಲು ಚೌಕಟ್ಟು

Highlights - ಮಳೆ ಇಲ್ಲದ್ದರಿಂದ ಕಡಿಮೆ ವ್ಯಾಪಾರ ಆಧುನಿಕ ಕಲಾ ಸ್ಪರ್ಶದ ಬಾಗಿಲು ಚೌಕಟ್ಟು ಕಾಷ್ಠ ಕಲೆ ಸರ್ವಜನಾಂಗದ ಸೊತ್ತಾಗಿದೆ

Quote - ಸಾಂಪ್ರದಾಯಿಕ ಕಾಷ್ಟ ಕಲೆಯಲ್ಲಿ ತೊಡಗಿಸಿಕೊಂಡಿದ್ದ ವಿಶ್ವಕರ್ಮ ಜನಾಂಗದ ಬಡಿಗೇರರು ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಿದ್ದರು. ಈಗ ಆಸಕ್ತಿಯಿಂದ ಕಲಿಯುವ ಎಲ್ಲರಿಗೂ ಈ ಕಲೆ ಒಲಿದಿದ್ದರಿಂದ ಬಡಿಗೇರರು ನೇಪಥ್ಯಕ್ಕೆ ಸರಿದಿದ್ದಾರೆ ಕೃಷ್ಣ ಕಟ್ಟಿ ನಿವೃತ್ತ ಮುಖ್ಯಸ್ಥ ಹಂಪಿ ಕನ್ನಡ ವಿವಿ ಬಾದಾಮಿ ಸ್ನಾತಕೋತ್ತರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT