ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವಿ ನೋಡಿ ಮರುಳಾದರೆ, ಗುಜರಿ ಆಗುತ್ತೇವೆ’

ಬಸವಣ್ಣ–ಪುನರ್ಮನನ’ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪಿ.ವಿ.ನಾರಾಯಣ ಅಭಿಪ್ರಾಯ
Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವಿ ಧರಿಸಿರುವವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾವಿ ನೋಡಿ ನೀವೇನಾದರೂ ಮರುಳಾದರೆ, ಗುಜರಿಯಾಗುವುದು ಖಂಡಿತ’ ಎಂದು ವಿಮರ್ಶಕ ಪಿ.ವಿ.ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಸವಣ್ಣ–ಪುನರ್ಮನನ’ ಕುರಿತ ರಾಜ್ಯ ಮಟ್ಟದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಎಲ್ಲಾ ಮತಗಳು ಸಾಂಸ್ಥಿಕತೆಯಿಂದ ದೂರವಾಗಬೇಕು. ‘ಸಾಂಸ್ಥಿಕ ಧರ್ಮದ ಸ್ವರೂಪ’ ಮನುಷ್ಯ ನಾಗರೀಕತೆಯ ದುರಂತ. ಪೂಜಾರಿ ಹಾಗೂ ದೇವಸ್ಥಾನ ಪದ್ಧತಿಯನ್ನು ಶರಣರು ನಿರಾಕರಿಸಿದ್ದರು. ಧರ್ಮ, ದೈವಿಕತೆ ವೈಯುಕ್ತಿಕವಾದ್ದದ್ದೇ ಹೊರತು ಸಾಂಸ್ಕೃತಿಕವಾದದ್ದಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ, ಅವೆಲ್ಲ ಇಂದು ಆಚರಣೆಯಾಗುತ್ತಿವೇ ಎನ್ನುವುದು ಪ್ರಶ್ನಾರ್ಹ’ ಎಂದರು.

‘ಹಿಂದೂವಾಗಿ ಹುಟ್ಟಿದೆ, ಹಿಂದೂವಾಗಿ ಬದುಕಲಾರೆ ಎಂದು ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಸೇರಿದರು. ಈಗ ಎಲ್ಲಾ ಮತಗಳಿಗೂ ಒಂದೇ ಗತಿಯಾಗಿದೆ. ಸಾಂಸ್ಥಿಕತೆಗೆ ಅನಗತ್ಯವಾಗಿ ಬೆಲೆ ಕೊಡುತ್ತಿರುವುದರಿಂದಲೇ ಈ ರೀತಿ ಆಗುತ್ತಿದೆ’ ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ‘ಇತ್ತೀಚೆಗೆ ಬಸವಣ್ಣ, ಶರಣರು ರಾಜಕಾರಣದ ವಸ್ತುವಾಗಿದ್ದಾರೆ. ‘ನುಡಿದಂತೆ ನಡೆ’ ಎಂಬ ವಚನದ ಸಾಲುಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘23ಕ್ಕೂ ಹೆಚ್ಚು ಭಾಷೆಗಳಿಗೆ ವಚನಗಳನ್ನು ಅನುವಾದಿಸುವ ಕೆಲಸ ನಡೆಯುತ್ತಿದೆ. ಅರೆಬಿಕ್‌ ಭಾಷೆಗೆ ಅನುವಾದಿಸಲು, ಅರಬ್‌ನಿಂದ ಬಂದಿದ್ದ ಪ್ರೊಫೆಸರ್‌ಗಳು ‘ಕುರಾನ್‌ನಲ್ಲಿರುವ ಸಾಲುಗಳನ್ನು ಧ್ವನಿಸುವ ವಿಷಯಗಳೇ ವಚನಗಳಲ್ಲಿಯೂ ಇವೆ’ ಎಂದಿದ್ದರು. ವಚನಗಳು ಲೋಕಾನುಭವ ಹಾಗೂ ಶಿವಾನುಭವದ ಸಂಗಮ ಎಂದು ವಿವರಿಸಿದರು.

‘ಇಳಿಜಾರಿನಲ್ಲಿರುವ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬಸವಣ್ಣನ ಪುನರ್ಮನನ ಬಹಳ ಅನಿವಾರ್ಯವಾಗಿದೆ. ವಚನಗಳ ಸಾರವನ್ನು ಪಸರಿಸುವ ಅಂಗವಾಗಿ 12 ಲಕ್ಷ ವಿದ್ಯಾರ್ಥಿಗಳಿಗೆ ವಚನ ವ್ಯಕ್ತಿತ್ವ ವಿಕಾಸದ ಪಾಠ ಹೇಳಿದ್ದೇನೆ’ ಎಂದರು.

‘ಸ್ವಚ್ಛಭಾರತ ಅಭಿಯಾನ ಅಪೂರ್ಣ’

‘ಕೇಂದ್ರ ಸರ್ಕಾರ ನಡೆಸುತ್ತಿರುವ ಸ್ವಚ್ಛಭಾರತ ಅಭಿಯಾನ ನನ್ನ ಪ್ರಕಾರ ಅಪೂರ್ಣವಾಗಿದೆ. ಬಸವಣ್ಣ ಹೇಳಿದ ಅಂತರಂಗ ಶುದ್ಧಿ ಇಲ್ಲಿ ಕಣ್ಮರೆಯಾಗಿದೆ. ಕೇವಲ ಬಹಿರಂಗ ಶುದ್ಧಿಯಷ್ಟೇ ಕಾಣುತ್ತಿದ್ದೇವೆ’ ಎಂದು ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

‘ಪೊರಕೆ ಹಿಡಿದು ಛಾಯಾಚಿತ್ರಕ್ಕೆ ಪೋಸ್‌ ನೀಡಿದರೆ ಎಲ್ಲವೂ ಸ್ವಚ್ಛವಾಯಿತು ಎಂದು ಭಾವಿಸುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಎದುರು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಕ್ಕಿತ್ತು. ಅವರೂ ಅದಕ್ಕೆ ಸಹಮತ ಸೂಚಿಸಿದ್ದರು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT