ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗುಂಟ ವಿಸ್ತರಿಸಿಕೊಂಡಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ರಾಜಕೀಯ ಆಶ್ರಯ ಕೋರಿ ಬಂದ ರಾಜ್ಯದ ಘಟಾನುಘಟಿ ರಾಜಕಾರಣಿಗಳಿಗೆ ಜಾತಿಯ ‘ಅಂತರ್ಗಾಮಿ ಅಲೆ’ಗಳು ಕೈಹಿಡಿದಿರುವ ಇತಿಹಾಸವೂ ಇದೆ.

ಹಾಗೆಯೇ, ದಿಢೀರ್ ಎದ್ದ ಅನುಕಂಪದ ಅಲೆಯಲ್ಲಿ ಹಲವರು ಕೊಚ್ಚಿಹೋದ ನೆನಪುಗಳು ಅಚ್ಚಳಿಯದೇ ಉಳಿದಿವೆ.
ಆಲಮಟ್ಟಿ ಜಲಾಶಯದಿಂದ ಮುಳುಗಡೆಯಾಗಲಿದ್ದ ಬಾಗಲಕೋಟೆಯನ್ನು ‘ಚಂಡೀಗಡ’ ಮಾದರಿಯಲ್ಲಿ ಅತ್ಯಾಧುನಿಕ ನಗರವನ್ನಾಗಿಸುವ ಬೃಹತ್ ಯೋಜನೆಗೆ ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ನೀಡುವ ಮೂಲಕ ಕೃಷ್ಣೆಯ ನಾಡಲ್ಲಿ ದಿ. ರಾಮಕೃಷ್ಣ ಹೆಗಡೆ ಮನೆಮಾತಾಗಿದ್ದರು.

ಅಲ್ಲದೇ ಉತ್ತರ ಕರ್ನಾಟಕದಲ್ಲಿ ಹೆಗಡೆಯವರ ಬಗ್ಗೆ ಜನರಲ್ಲಿ ವಿಶೇಷ ಪ್ರೀತಿ ಇತ್ತು. ಅದನ್ನು ಮತವಾಗಿ ಪರಿವರ್ತಿಸಿಕೊಂಡು ಲೋಕಸಭೆ ಪ್ರವೇಶಿಸಲು ಅವರು ಈ ಕ್ಷೇತ್ರದಿಂದ 1991ರಲ್ಲಿ ಜನತಾದಳದಿಂದ ಕಣಕ್ಕಿಳಿದಿದ್ದರು.ಈ ಸಂದರ್ಭದಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಜನತಾದಳ ಅತ್ಯಂತ ಬಲಿಷ್ಠವಾಗಿತ್ತು. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಆ ಪಕ್ಷದ ಶಾಸಕರಿದ್ದರು. ಅಲ್ಲದೇ, ಇಬ್ಬರು ವಿಧಾನಪರಿಷತ್ ಸದಸ್ಯರಿದ್ದರು. ಜತೆಗೆ ಜಿಲ್ಲಾ ಪಂಚಾಯ್ತಿಯೂ ಆ ಪಕ್ಷದ ಕೈಯಲ್ಲಿಯೇ ಇತ್ತು. ಇದೆಲ್ಲವೂ ತಮ್ಮ ಗೆಲುವಿಗೆ ನೆರವಾಗಬಹುದೆಂದು ಲೆಕ್ಕ ಹಾಕಿಯೇ ‘ಚತುರ ರಾಜಕಾರಣಿ’ ಹೆಗಡೆ ಇಲ್ಲಿಂದ ಕಣಕ್ಕಿಳಿದಿದ್ದರು.

ಹೆಗಡೆಯವರ ವ್ಯಕ್ತಿತ್ವ, ಜನಪ್ರಿಯತೆ ಮುಂದೆ ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೌಣವಾಗಿದ್ದರು. ಚುನಾವಣೆ ಪೂರ್ವದಲ್ಲೇ ಹೆಗಡೆ ಜಯ ಖಚಿತ ಎನಿಸಿದ್ದರೂ ಗೆಲುವಿನ ಅಂತರ ತಿಳಿಯುವುದಕ್ಕಾಗಿ ಮಾತ್ರ ಸಾಂಕೇತಿಕವಾಗಿ ಚುನಾವಣೆ ನಡೆಯಲಿದೆ ಎಂಬ ರಾಜಕೀಯ ವಿಶ್ಲೇಷಣೆಯೂ ನಡೆದಿತ್ತು.

ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು ಜಮಖಂಡಿ ತಾಲ್ಲೂಕಿನ ಕೃಷ್ಣಾ ತೀರದ ರೈತರನ್ನು ಸಂಘಟಿಸಿ, ರೈತರಿಂದಲೇ ₨ 1 ಕೋಟಿ ಸಂಗ್ರಹಿಸಿ ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ಬ್ಯಾರೇಜ್ ನಿರ್ಮಿಸಿ ಪ್ರಖ್ಯಾತರಾಗಿದ್ದ ಸಿದ್ದು ನ್ಯಾಮಗೌಡ. ಅವರಿಗೆ ಇದು ಪ್ರಥಮ ಚುನಾವಣೆ.

ಅದಾಗಲೇ ದೇಶದ ಹಲವು ರಾಜ್ಯಗಳಲ್ಲಿ ಮೊದಲ ಹಂತದ ಮತದಾನವೂ ಮುಗಿದಿತ್ತು. ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಮತದಾನಕ್ಕೆ ಎರಡು ವಾರ ಮಾತ್ರ ಉಳಿದಿತ್ತು. ಈ ಸಂದರ್ಭದಲ್ಲಿ ಎಲ್ಟಿಟಿಇ ‘ಮಾನವ ಬಾಂಬ್’ಗೆ ಮಾಜಿ ಪ್ರಧಾನಿ ರಾಜೀವ್ಗಾಂಧಿ ಬಲಿಯಾದರು. ಬಾಗಲಕೋಟೆ ಸೇರಿದಂತೆ ಎಲ್ಲೆಲ್ಲೂ ಕಾಂಗ್ರೆಸ್ ಪರ ಅನುಕಂಪದ ಅಲೆ ಎದ್ದಿತು.

ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಸ್.ಬಂಗಾರಪ್ಪ. ಈ ಹಿಂದೆ ತಮಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ರಾಮಕೃಷ್ಣ ಹೆಗಡೆ ಎಂಬುದು ಬಂಗಾರಪ್ಪನವರ ಮನಸ್ಸಿನಲ್ಲಿತ್ತು. ಆ ಸೇಡು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದರಿತ ಅವರು, ಹೆಗಡೆ ವಿರುದ್ಧ ರಣತಂತ್ರ ರೂಪಿಸಿದರು. ರಾಜೀವ್ಗಾಂಧಿ ಭಾವಚಿತ್ರದೊಂದಿಗೆ ಬಾಗಲಕೋಟೆ ಕ್ಷೇತ್ರದ ಹಳ್ಳಿ ಹಳ್ಳಿಗಳನ್ನೂ ಬಿಡದೇ ಸುತ್ತಾಡಿ, ಕಾಂಗ್ರೆಸ್ ಅಭ್ಯರ್ಥಿ ಪರ ಐದಾರು ದಿನಗಳ ಕಾಲ ಅಬ್ಬರದ ಪ್ರಚಾರ ನಡೆಸಿದರು.

ಬಂಗಾರಪ್ಪ ತಂತ್ರಗಾರಿಕೆ ಎದುರು ಹೆಗಡೆ ಲೆಕ್ಕಾಚಾರ ತಲೆಕೆಳಗಾಯಿತು. ರಾಜಕೀಯವಾಗಿ ಹೆಗಡೆ ಜತೆ ಯಾವ ವಿಧದಲ್ಲೂ ಸಮರ್ಥ ಎದುರಾಳಿಯಾಗಿರದ ‘ಚಿಕ್ಕಪಡಸಲಗಿ ಬ್ಯಾರೇಜ್ ಹಿರೋ’ ಸಿದ್ದು ನ್ಯಾಮಗೌಡ 21,204 ಮತಗಳ ಅಂತರದಿಂದ ಗೆದ್ದರು. ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ ಅವರಿಗೆ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗುವ ಅವಕಾಶವೂ ಲಭಿಸಿತು.

1980ರಲ್ಲಿ ಇಂದಿರಾ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಜನತಾ ಪಕ್ಷದ ಟಿ.ಎಂ. ಹುಂಡೇಕರ ವಿರುದ್ಧ 1,53,973 ಭಾರಿ ಮತಗಳ ಅಂತರದಲ್ಲಿ ಜಯಗಳಿಸಿ ಪೆಟ್ರೋಲಿಯಂ ಸಚಿವರಾಗಿದ್ದರು. ‘ಪಕ್ಷಾಂತರಿ’ ಎಂಬ ಕಾರಣಕ್ಕೆ ವೀರೇಂದ್ರ ಪಾಟೀಲರಿಗೆ ಕ್ಷೇತ್ರದ ಎಲ್ಲೆಡೆ ಅಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಸೋಲುವ ಭೀತಿಯೂ ದಟ್ಟವಾಗಿತ್ತು. ಆದರೆ ಜಾತಿ (ಲಿಂಗಾಯತ) ಲೆಕ್ಕಾಚಾರ ಗುಪ್ತಗಾಮಿನಿಯಾಗಿ ಕೆಲಸ ಮಾಡಿದ್ದರಿಂದ ಅವರು ಅಭೂತಪೂರ್ವ ಜಯ ಸಾಧಿಸುವಂತಾಯಿತು.

1962ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಲ್ಲಿ ಸೋಲುಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಜಾತಿ ಲೆಕ್ಕಾಚಾರದ ಮೇಲೆ ವಿಶ್ವಾಸವಿಟ್ಟು ಅಂದು ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ.ಟಿ.ಮುರನಾಳ ಅವರಿಂದ ರಾಜೀನಾಮೆ ಕೊಡಿಸಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಪುನಃ ಮುಖ್ಯಮಂತ್ರಿಯಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಗಿನಿಂದಲೂ ಜಾತಿ ಲೆಕ್ಕಾಚಾರ ಬಾಗಲಕೋಟೆ ಕ್ಷೇತ್ರದಲ್ಲಿ ಆಳವಾಗಿ ಬೇರೂರಿರುವುದನ್ನೂ ಗುರುತಿಸಬಹುದಾಗಿದೆ.

ಕಾಂಗ್ರೆಸ್ನ ರಾಮಣ್ಣ ಬಿದರಿ ಕ್ಷೇತ್ರದ ಮೊದಲೆರಡು ಅವಧಿಗೆ ಸಂಸದರಾಗಿದ್ದರು. 1962, 1967, 1971 ಮತ್ತು 1977ರಲ್ಲಿ ಸತತ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಹಿರಿಯ ಗಾಂಧಿವಾದಿ ಎಸ್.ಬಿ. ಪಾಟೀಲ ನಿರ್ಮಿಸಿರುವ ದಾಖಲೆಯನ್ನು ಇದುವರೆಗೂ ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ.

1996ರಲ್ಲಿ ನಡೆದ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಎಚ್.ವೈ.ಮೇಟಿ ಗೆಲ್ಲುವ ಮೂಲಕ ಕ್ಷೇತ್ರದ ಮೊದಲ ಕಾಂಗ್ರೆಸ್ಸೇತರ ಸಂಸದ ಎನಿಸಿಕೊಂಡರು. 1998ರಲ್ಲಿ ನಡೆದ ಚುನಾವಣೆಯಲ್ಲಿ ಅಜಯಕುಮಾರ ಸರನಾಯಕ ‘ಲೋಕಶಕ್ತಿ’ಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೇವಲ 13 ತಿಂಗಳ ಬಳಿಕ 1999ರಲ್ಲಿ ನಡೆದ ಚುನಾವಣೆಯಲ್ಲಿ ಸರನಾಯಕ ಅವರು ಕಾಂಗ್ರೆಸ್ನ ಆರ್.ಎಸ್.ಪಾಟೀಲರ ಎದುರು ಸೋಲು ಕಂಡರು.

2004 ಮತ್ತು 2009ರಲ್ಲಿ ನಡೆದ ಎರಡೂ ಚುನಾವಣೆಯಲ್ಲಿ ಮೂಲತಃ ಜನತಾ ಪರಿವಾರದವರಾದ ಬಿಜೆಪಿಯ ಪಿ.ಸಿ.ಗದ್ದಿಗೌಡರ ಆಯ್ಕೆಯಾಗಿದ್ದರು. 1952 ರಿಂದ 2009ರ ವರೆಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ನಡೆದಿರುವ ಒಟ್ಟು 15 ಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 2, ಜನತಾದಳ ಮತ್ತು ಲೋಕಶಕ್ತಿ ತಲಾ ಒಮ್ಮೆ ಜಯ ಗಳಿಸಿವೆ.

ಆರಂಭದಿಂದ ‘ವಿಜಾಪುರ ದಕ್ಷಿಣ ಕ್ಷೇತ್ರ’ ಎಂದು ಗುರುತಿಸಿಕೊಂಡಿದ್ದ ಈ ಕ್ಷೇತ್ರ 1980ರ ಬಳಿಕ ಸ್ವತಂತ್ರ ಕ್ಷೇತ್ರವಾಗಿ ರೂಪುಗೊಂಡಿತು.
ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದ್ದ ಬಾಗಲಕೋಟೆ ಕ್ಷೇತ್ರಕ್ಕೆ 2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ರೋಣ ಬದಲು ನರಗುಂದ ವಿಧಾನಸಭಾ ಕ್ಷೇತ್ರ ಸೇರ್ಪಡೆಗೊಂಡಿತು.

ಹಾಲಿ ಸಂಸದ ಗದ್ದಿಗೌಡರ ಅವರನ್ನೇ ಪುನಃ ಬಿಜೆಪಿ ಕಣಕ್ಕಿಳಿಸಿದೆ. ಹಿಂದೊಮ್ಮೆ ಜನತಾ ಪರಿವಾರದಲ್ಲಿ ಗದ್ದಿಗೌಡರ ಜತೆಗಿದ್ದ ಅಜಯಕುಮಾರ ಸರನಾಯಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ‘ಸರ್ವ ಜನಶಕ್ತಿ ಪಕ್ಷ’ದ ಅಧ್ಯಕ್ಷ ಶಂಕರ ಬಿದರಿ ಕಣದಲ್ಲಿರುವ ಇನ್ನೊಬ್ಬ ಪ್ರಮುಖ ಅಭ್ಯರ್ಥಿ.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ‘ತವರು’ ಕ್ಷೇತ್ರ ಬಾಗಲಕೋಟೆಯಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ದಿಗ್ಗಜರ ಪೈಪೋಟಿಗೆ ವೇದಿಕೆ ಸಿದ್ಧವಾಗಿದ್ದು, ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.