ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾರ, ತಪಶೆಟ್ಟಿ ಸೇರ್ಪಡೆ; ಬಿಜೆಪಿಗೆ ಬಲ

13 ವರ್ಷಗಳ ನಂತರ ಮುನಿಸು ಮರೆತು ವೇದಿಕೆ ಹಂಚಿಕೊಂಡರು: ವೀರಣ್ಣ ಚರಂತಿಮಠ ಹೇಳಿಕೆ
Last Updated 28 ಏಪ್ರಿಲ್ 2018, 5:50 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಮಾಜಿ ಶಾಸಕ ಪಿ.ಎಚ್. ಪೂಜಾರ ಹಾಗೂ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ’ ಎಂದು ಇಲ್ಲಿನ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆ ಪಿ.ಎಚ್. ಪೂಜಾರ, ಪ್ರಕಾಶ ತಪಶೆಟ್ಟಿ, ಡಾ. ಶೇಖರ್ ಮಾನೆ, ಡಾ. ಬಾಬುರಾಜೇಂದ್ರ ನಾಯಕ, ಚಂದ್ರಕಾಂತ ಕೇಸನೂರ, ಶಂಭುಗೌಡ ಪಾಟೀಲ, ಸತ್ಯನಾರಾಯಣ ಹೇಮಾದ್ರಿ, ಸಂಗನಗೌಡ ಗೌಡರ ಅವರಿಗೆ ಮಾಲಾರ್ಪಣೆ ಮಾಡಿ ಪಕ್ಷಕ್ಕೆ ಬರಮಾಡಿಕೊಂಡರು.

ಪಿ.ಎಚ್.ಪೂಜಾರ ಮಾತನಾಡಿ, ‘2004ರಲ್ಲಿ ಕೆಲವು ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ತೊರೆದಿದ್ದೆನು. ಅದೊಂದು ಕೆಟ್ಟ ಘಳಿಗೆ, ನಾನು ಸಂಘ ಪರಿವಾರದ ಹಿನ್ನೆಲೆ, ಬಿಜೆಪಿ ಸಂಸ್ಕಾರಕ್ಕೆ ಒಳಪಟ್ಟದ್ದೇನೆ. ಅದೇ ನೆಲೆಯಲ್ಲಿ ಪಕ್ಷಕ್ಕೆ ಮತ್ತೆ ವಾಪಸ್ ಆಗಿದ್ದೇನೆ. ಕಾಂಗ್ರೆಸ್ ತೊರೆಯುವಾಗ ನಾನು ಪ್ರಸ್ತಾಪಿಸಿದ ವಚನಭ್ರಷ್ಟತೆ ಕೇವಲ ಟಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಆ ಪಕ್ಷದ ಮುಖಂಡರು ಎಲ್ಲ ವಿಷಯದಲ್ಲಿಯೂ ವಚನ ಭ್ರಷ್ಟರಾಗಿದ್ದಾರೆ, ಇದರಲ್ಲಿ ಎರಡು ಮಾತಿಲ್ಲ. ಈಗ ಅದು ಅಪ್ರಸ್ತುತ, ನಾನು ಬಿಜೆಪಿ ಸೇರಿದ್ದು ಸಂತಸದ ಕ್ಷಣ’ ಎಂದರು.

ಪ್ರಕಾಶ ತಪಶೆಟ್ಟಿ ಮಾತನಾಡಿ, ‘ಬಾಗಲಕೋಟೆ ಜನಪ್ರತಿನಿಧಿಗಳ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಅವರು ಜನರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ನಿರೀಕ್ಷಿಸಿದಷ್ಟು ಸ್ಪಂದಿಸಲಿಲ್ಲ, ಕೆಲಸ ಮಾಡಲಿಲ್ಲ. ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟಿದ್ದೇವೆ. ಕೇವಲ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಆರೋಪಿಸಿದರು.

ಬಾಗಲಕೋಟೆ ಕ್ಷೇತ್ರದಲ್ಲಿ ವೀರಣ್ಣ ಚರಂತಿಮಠ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುವುದು ಹಾಗೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಇಬ್ಬರೂ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ, ನಗರ ಅಧ್ಯಕ್ಷ ರಾಜು ನಾಯ್ಕರ, ಗ್ರಾಮೀಣ ಅಧ್ಯಕ್ಷ ರಾಜಶೇಖರ ಮುದೇನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಪ್ರಭು ಹಡಗಲಿ, ಕುಮಾರ ಯಳ್ಳಿಗುತ್ತಿ, ಬಸವರಾಜ ಅವರಾದಿ ಉಪಸ್ಥಿತರಿದ್ದರು.

ರೈಲು ನಿಲ್ದಾಣದಲ್ಲಿ ಭರ್ಜರಿ ಸ್ವಾಗತ

ಕಾಂಗ್ರೆಸ್ ತೊರೆದು 13 ವರ್ಷಗಳ ನಂತರ ಬಿಜೆಪಿ ಸೇರ್ಪಡೆಯಾದ ಮಾಜಿ ಶಾಸಕ ಪಿ.ಎಚ್. ಪೂಜಾರ ಅವರಿಗೆ ನಗರದ ರೈಲು ನಿಲ್ದಾಣದಲ್ಲಿ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದರು.

ಬೆಂಗಳೂರಿನಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಅವರು ನಗರಕ್ಕೆ ಬಂದಾಗ ನೂರಾರು ಕಾರ್ಯಕರ್ತರು ಹೂಗುಚ್ಚ ನೀಡಿ ಅಭಿನಂದಿಸಿದರು, ಸಿಹಿ ವಿತರಿಸಿ ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಶಂಭುಗೌಡ ಪಾಟೀಲ, ಡಾ. ಶೇಖರ ಮಾನೆ, ಚಂದ್ರಕಾಂತ ಕೇಸನೂರ, ಸತ್ಯನಾರಾಯಣ ಹೇಮಾದ್ರಿ ಅವರೊಂದಿಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT