ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಳಾಂತರ

Last Updated 3 ಡಿಸೆಂಬರ್ 2012, 7:59 IST
ಅಕ್ಷರ ಗಾತ್ರ

ಬಾಗಲಕೋಟೆ: ನೊಂದ ಜನತೆಯ ಸಾವಿರಾರು ಹೋರಾಟ, ಪ್ರತಿಭಟನೆ, ಧರಣಿಯನ್ನು ಸಾಕ್ಷಿಕರಿಸುವಂತೆ ಹಳೆ ಬಾಗಲಕೋಟೆಯ ಉಪವಿಭಾಗಾಧಿಕಾರಿ ಕಚೇರಿ ಸಮೀಪದ ಉದ್ಯಾನದಲ್ಲಿ ಎರಡು ದಶಕದಿಂದ ತಲೆ ಎತ್ತಿ ನಿಂತಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಇನ್ನು ನೆನಪು ಮಾತ್ರ.
ಹೌದು, ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ವಿಸ್ತರಣೆಗೆ ಅನುಕೂಲವಾಗಿಸುವ ಉದ್ದೇಶದಿಂದ ಇಲ್ಲಿನ   ಪುತ್ಥಳಿಯನ್ನು ನವನಗರದ ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.

ಮುಳುಗಡೆ ನಗರಿಯ ಅದೆಷ್ಟೋ ಪ್ರತಿಭಟನೆ, ಚಳವಳಿ, ಜಾಥಾಗಳು ಆರಂಭವಾಗುತ್ತಿದ್ದ ಸ್ಥಳವೆಂದರೆ ಹಳೆನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ. ಪ್ರತಿಭಟನಾಕಾರರು ಯಾರೇ ಇರಲಿ ಮೊದಲು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕವೇ ತಮ್ಮ ಹೋರಾಟವನ್ನು ಆರಂಭಿಸುವುದು ರೂಢಿಯಾಗಿತ್ತು. ಅಲ್ಲದೇ, ಸಾರ್ವಜನಿಕರು ಅಂಬೇಡ್ಕರ್ ಉದ್ಯಾನದ ಹಸಿರು ಹಾಸಿನ ಮೇಲೆ ಮತ್ತು ಕಲ್ಲು ಬೆಂಚಿನ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು.

ಪುತ್ಥಳಿ ಇತಿಹಾಸ: 1992ರಲ್ಲಿ ಅಂದಿನ ನಗರಸಭೆ ಅಧ್ಯಕ್ಷ  ಶ್ರೀನಿವಾಸ ಶಾಸ್ತ್ರೀ ಮತ್ತು ಸದಸ್ಯರಾದ ಎಚ್.ಡಿ. ಹುನ್ನೂರ, ವಾಸುದೇವ ಪೂಜಾರ, ಡಾ. ಪರಾಂದೆ ಹೊನ್ಯಾಳ ಮತ್ತಿತರರ ಒತ್ತಾಸೆಯ ಮೇರೆಗೆ ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯನ್ನು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ ಕಚೇರಿಗಳ ನಡುವೆ ಇರುವ ಪುಟ್ಟ ಉದ್ಯಾನದಲ್ಲಿ ಪ್ರತಿಷ್ಠಾಪಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಒಂದು ಕೈಯಲ್ಲಿ ಏಕತೆಯ ಸಂಕೇತವನ್ನು ತೋರಿಸುವ ಹಾಗೂ ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದುಕೊಂಡು ನಿಂತಿರುವ ಭಂಗಿಯಲ್ಲಿರುವ ಅಂಬೇಡ್ಕರ್ ಪುತ್ಥಳಿಯನ್ನು ಪಂಚಲೋಹದಿಂದ ತಯಾರಿಸಲಾಗಿದೆ.

ಆರು ಅಡಿ ಎತ್ತರವಿರುವ ಈ ಪ್ರತಿಮೆಯನ್ನು ಅಂದಿನ ಬಾಗಲಕೋಟೆ ನಗರಸಭೆಯು ರೂ. 1.20 ಲಕ್ಷ ಹಣವನ್ನು ನೀಡಿ ಮಹಾರಾಷ್ಟ್ರದಿಂದ ಖರೀದಿಸಿ ತಂದಿತು. ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು ಎಂಬುದನ್ನು ಜಿಲ್ಲೆಯ ದಲಿತ ಮುಖಂಡರಾದ ಮುತ್ತಣ್ಣ ಬೆಣ್ಣೂರ ನೆನಪಿಸಿಕೊಳ್ಳುತ್ತಾರೆ.

ಪ್ರಥಮ ಪುತ್ಥಳಿ: ನವನಗರದಲ್ಲಿ ಇದುವರೆಗೆ ಯಾವೊಬ್ಬ ರಾಷ್ಟ್ರ ನಾಯಕರ, ಸ್ವಾಂತಂತ್ರ್ಯ ಹೋರಾಟಗಾರರ,  ಸಮಾಜಸುಧಾರಕರ, ರಾಜಕಾರಣಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿಲ್ಲ. ಕೇವಲ ವೃತ್ತಗಳಿಗೆ ಮಾತ್ರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಇದೇ ಪ್ರಥಮ ಬಾರಿಗೆ ನವನಗರದ ಜಿಲ್ಲಾಡಳಿತ ಭವನದ ಎದುರಿನ ಸುಂದರ ಉದ್ಯಾನದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಲಾಗುತ್ತಿದೆ.

ಪುತ್ಥಳಿಯನ್ನು ನಿಲ್ಲಿಸುವ ಉದ್ದೇಶಕ್ಕಾಗಿ ನಗರಸಭೆ ಸುಂದರವಾದ ಸ್ಥಂಭವೊಂದನ್ನು ನಿರ್ಮಿಸಲು ಮುಂದಾಗಿದೆ. ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರ ಆಸೆಯದಂತೆ ಜಿಲ್ಲಾಡಳಿತ ಭವನದ ಎದುರೇ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸುತ್ತಿರುವುದು ಭವಿಷ್ಯದಲ್ಲಿ ನೊಂದ ಜನರ ನಾನಾ ಹೋರಾಟಕ್ಕೆ ವೇದಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT