ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಲಾವುದ್ದೀನ್‌ ಅದ್ಭುತ ದ್ವೀಪ’ ನಿರ್ಮಾಣ ಕನಸು!

‘ಬಾಗಲಕೋಟೆ ಡೆವಲಪಿಂಗ್‌ ಮಾಸ್ಟರ್‌ ಪ್ಲಾನ್‌ 2020’
Last Updated 14 ಸೆಪ್ಟೆಂಬರ್ 2013, 10:41 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಮಾನ ನಿಲ್ದಾಣ, ಪ್ರವಾಸಿ ಕಾರಿಡಾರ್‌, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ, ಐಟಿ ಡಾಟಾ ಸೆಂಟರ್‌, ಕಲಾ ಮತ್ತು ಸಂಗೀತ ಥೇಟರ್‌, ಅಂತರರಾಷ್ಟ್ರೀಯ ಮಟ್ಟದ ಕನ್ವೆನ್ಷನ್‌ ಹಾಲ್‌,  ಐಎಎಸ್‌, ಐಪಿಎಸ್‌ ಮತ್ತು ಡಿಫೆನ್ಸ್‌ ಕೋಚಿಂಗ್‌ ಸೆಂಟರ್‌, ಇಂಗ್ಲಿಷ್‌ ಸ್ಪೀಕಿಂಗ್‌ ಟ್ರೈನಿಂಗ್‌ ಸೆಂಟರ್‌, ಸಿಟಿ ಕ್ಲಬ್‌, ಬಿಜನೆಸ್‌ ಇನೋವೇಶನ್‌ ಸೆಂಟರ್‌,  ಬಾಗಲಕೋಟೆ ವೆಬ್‌ಸೈಟ್‌, ಅಡ್ಚೆಂಚರ್‌ ಟೂರಿಸಂ, ವಾಟರ್‌ ರಾಫ್ಟಿಂಗ್‌, ರಾಕ್‌ ಕ್ಲೈಂಬಿಂಗ್‌, ಕೃಷಿ ಮತ್ತು ತೋಟಗಾರಿಕೆಗೆ ಪೂರಕ ಕೈಗಾರಿಕೆಗಳ ನಿರ್ಮಾಣ...

ಹೀಗೆ ಹತ್ತಾರು ಕ್ಷೇತ್ರದಲ್ಲಿ ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂದಾಜು ₨ 2 ಸಾವಿರ ಕೋಟಿ ಬಂಡವಾಳವನ್ನು ಜಿಲ್ಲೆಗೆ ಹರಿಸುವ ಮೂಲಕ  ಬಾಗಲಕೋಟೆಯನ್ನು ರಾಷ್ಟ್ರದಲ್ಲೇ ಮಾದರಿ ಜಿಲ್ಲೆಯನ್ನಾಗಿಸುವ ಕನಸುಕಂಡವರು ಭಾರತೀಯ ಸೇನೆಯ ನಿವೃತ್ತ ಉಪ ಮಹಾದಂಡನಾಯಕ ಮೇಜರ್‌ ಜನರಲ್‌ ರಮೇಶ ಹಲಗಲಿ.

ಹಲಗಲಿ ಅವರು ಕಂಡಿರುವ ಕನಸು ನನಸಾದರೇ 2020ರ ಹೊತ್ತಿಗೆ ಬಾಗಲಕೋಟೆ ಸಿಂಗಾಪುರ ಇಲ್ಲವೇ, ಹಾಂಕಾಂಗ್‌ ಸರಿಗಟ್ಟುವಲ್ಲಿ ಸಂಶಯವಿಲ್ಲ.

ನವನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನ­ದಲ್ಲಿ ಕೆಟಲಿಟಿಕ್‌ ಸಂಸ್ಥೆ ಆಯೋಜಿಸಿದ್ದ ‘ಬಾಗಲಕೋಟೆ ಡೆವಲಪಿಂಗ್‌ ಮಾಸ್ಟರ್‌ ಪ್ಲಾನ್‌–2020’ ಕಾರ್ಯಾಗಾರದಲ್ಲಿ  ರಮೇಶ ಹಲಗಲಿ ಅವರು ಬಾಗಲಕೋಟೆಯನ್ನು ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ತಾವು ಕಟ್ಟಿಕೊಂಡಿರುವ ಅಭಿವೃದ್ಧಿ ಎಂಬ ವೈವಿಧ್ಯಮಯ ಕನಸುಗಳ ಮೂಟೆಯನ್ನು ಜಿಲ್ಲೆಯ ಜನತೆಯ ಮುಂದೆ ಬಿಚ್ಚಿಟ್ಟರು.

‘ಬಾಗಲಕೋಟೆ ಅಭಿವೃದ್ಧಿ ಕೇವಲ ಕೃಷಿಯಿಂದ ಆಗದು, ಕೈಗಾರಿಕೆಗೂ ಒತ್ತು ನೀಡಬೇಕು, ಒಂದು ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಜಿಲ್ಲೆಗೆ ಅಗತ್ಯವಾಗುತ್ತದೆ,  ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲೆಯ ಜನತೆ ಅಗತ್ಯ ಸಹಕಾರ ನೀಡಬೇಕು’ ಎಂದರು.
‘ಕೆಟಲಿಟಿಕ್‌ ಸಂಸ್ಥೆಯು ಲಾಭ ರಹಿತ ಮತ್ತು ಉಚಿತ ಸೇವೆ ಸಲ್ಲುಸುವ ಉದ್ದೇಶದೊಂದಿಗೆ ಸ್ಥಾಪನೆಯಾಗಿದೆ. ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ತಂತ್ರಜ್ಞಾನ, ಮಾನವ ಸಂಪನ್ಮೂಲ ಅಭಿವೃದ್ಧಿ, ಬಂಡವಾಳ ಹೂಡಿಕೆ, ನಗರ ಅಭಿವೃದ್ದಿ ಯೋಜನೆಯನ್ನು ವೈಜ್ಞಾನಿಕವಾಗಿ ರೂಪಿಸುವ ಉದ್ದೇಶ ಹೊಂದಿದೆ’ ಎಂದು ತಿಳಿಸಿದರು.

‘ಬಾಗಲಕೋಟೆ ಜಿಲ್ಲೆಯಲ್ಲಿ ಕೈಗೊಳ್ಳಬಹು­ದಾದ ಅಭಿವೃದ್ಧಿ ಕಾರ್ಯಗಳ ಕುರಿತು ಅಧ್ಯಯನಕ್ಕಾಗಿ ಶೀಘ್ರದಲ್ಲೇ ಇಸ್ರೇಲ್, ಶ್ರೀಲಂಕಾ, ಫ್ರಾನ್ಸ್‌, ಥಾಯ್ಲೆಂಡ್‌ ಮತ್ತಿತರ ದೇಶಗಳ ಪ್ರತಿನಿಧಿಗಳು ಆಗಮಿಸಲಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ ಕಾರ್ಯಾಗಾರ ಉದ್ಘಾಟಿಸಿದರು. ಶಾಸಕರಾದ ಎಚ್‌.ವೈ. ಮೇಟಿ, ಜೆ.ಟಿ. ಪಾಟೀಲ, ಮಾಜಿ ಶಾಸಕರಾದ ಎಸ್‌.ಜಿ. ನಂಜಯ್ಯನಮಠ, ಪಿ.ಎಚ್‌. ಪೂಜಾರ, ಮಲ್ಲಿಕಾರ್ಜುನ ಬನ್ನಿ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿ.ಪಂ. ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಜಿ.ಪಂ. ಸಿಇಒ ಎಸ್‌.ಜಿ. ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಡಾ. ಆರ್‌.ಟಿ. ಪಾಟೀಲ ಸೇರಿದಂತೆ ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರು, ತಜ್ಞರು, ರೈತ ಮುಖಂಡರು, ಅಧಿಕಾರಿಗಳು ಮತ್ತಿತರರು  ಪಾಲ್ಗೊಂಡಿದ್ದರು.


‘ಜನಾಂದೋಲನವಾಗಲಿ’
‘ರಮೇಶ ಹಲಗಲಿ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಪ್ರಸ್ತಾಪಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಎಲ್ಲ ಸಹಾಯ–ಸಹಕಾರ ನೀಡಲಿದೆ. ಜಿಲ್ಲೆಯ ಅಭಿವೃದ್ಧಿ ಮುನ್ನೋಟಕ್ಕೆ ಹಲಗಲಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಬಾಗಲಕೋಟೆ ಮಾದರಿ ಜಿಲ್ಲೆಯಾಗಬೇಕಾದರೆ ಕೇವಲ ಸರ್ಕಾರ, ಸಂಘ ಸಂಸ್ಥೆಗಳಿಂದ ಅಸಾಧ್ಯ, ಅದೇನಿದ್ದರೂ ಜನಾಂದೋಲನವಾದಾಗ ಮಾತ್ರ ಸಾಧ್ಯ. ಹಲಗಲಿ ಅವರು ಕಂಡಿರುವ ಕನಸುಗಳು ನನಸಾಗಲು ಎಲ್ಲರ ಸಹಕಾರ ಅಗತ್ಯ, ಜಿಲ್ಲೆಯ ಜನತೆಯ ಕಲ್ಯಾಣಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಕಣಬದ್ಧರಾಗಬೇಕು’
– ಎಸ್‌.ಆರ್‌. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ, ಬಾಗಲಕೋಟೆ.

‘ರೈತರ ಸಂಘಟನೆಯಾಗಬೇಕಿದೆ’

‘ನಾಣ್ಯ ಹಾಕಿ ನೋಟು ತೆಗೆಯುವಂತೆ ಕೃಷಿ ಕ್ಷೇತ್ರ ಲಾಭದಾಯಕವಾಗಬೇಕಾದರೆ ಜಿಲ್ಲೆಯಲ್ಲಿ ದ್ರಾಕ್ಷಿ, ಚಿಕ್ಕು, ದಾಳಿಂಬೆ, ಕಬ್ಬು ಮತ್ತಿತರರ ಬೆಳೆ ಬೆಳೆಯುವ ರೈತರ ಸಂಘಟನೆಯಾಗಬೇಕಿದೆ, ರಫ್ತಿಗೆ ಆದ್ಯತೆ ನೀಡಬೇಕಿದೆ, ಕೊಯ್ಲೋತ್ತರ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿದೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆಗಾಗಿ ಯಂತ್ರೋಪಕರಣಗಳ ಬಳಕೆ ಹೆಚ್ಚಳವಾಗಬೇಕಿದೆ, ಬಯೋ ಎನರ್ಜಿ ತಯಾರಿಕೆ ಆಗಬೇಕಿದೆ’
–ಡಾ.ಎಸ್‌.ಬಿ.ದಂಡಿನ್‌, ಕುಲಪತಿ, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ.

ಚರ್ಮೋದ್ಯಮ
 
‘ಜಿಲ್ಲೆಯಲ್ಲಿ ಲೆದರ್‌ ಫುಟ್‌ವೇರ್‌ ಇಂಡಸ್ಟ್ರಿ ಮತ್ತು ಫುಡ್‌ ಟೇಸ್ಟಿಂಗ್‌ ಲ್ಯಾಬೊರೇಟರಿ ಸ್ಥಾಪಿಸಲು ಉತ್ಸುಕರಾಗಿದ್ದೇವೆ’
–ಎಂ.ಆರ್‌.ಶ್ರೀವಾಸ್ತವ, ಅಥರ್ವ ಇಂಡಸ್ಟ್ರಿ, ನವದೆಹಲಿ.

ಸಾಹಸ ಪ್ರವಾಸ
 
‘ಬಾಗಲಕೋಟೆ ಜಿಲ್ಲೆಯಲ್ಲಿ ಸಾಹಸ ತರಬೇತಿ ಕೇಂದ್ರವೊಂದನ್ನು ಆರಂಭಿಸುವ ಮೂಲಕ ಪ್ಯಾರ ಗ್ಲೈಡಿಂಗ್‌, ಸ್ಕೈ ಡೈವಿಂಗ್‌, ವಾಟರ್‌ ರ್ಯಾಪ್ಟಿಂಗ್‌, ರಾಕ್‌ ಕ್ಲೈಂಬಿಂಗ್‌, ಹಾಟ್‌ ಏರ್‌ ಬಲೂನ್‌, ಪ್ಯಾರ ಬೋಟಿಂಗ್‌ ಕಲಿಸುವ ಅಡ್ಚೆಂಚರ್‌ ಟೂರಿಸಂ ಆರಂಭಿಸಲು ಉತ್ಸುಕನಾಗಿದ್ದೇನೆ’
–ಲೆಫ್ಟಿನೆಂಟ್‌ ಕರ್ನಲ್‌ ಸತ್ಯೇಂದ್ರ ವರ್ಮಾ, ಭಾರತೀಯ ಸೇನೆ, ನವದೆಹಲಿ

ಸುಸ್ಥಿರ ಪ್ರಗತಿಗೆ ಆದ್ಯತೆ

‘ಬಾಗಲಕೋಟೆ ಜಿಲ್ಲೆಯಲ್ಲಿ ಸುಸ್ಥಿರ ಪ್ರಗತಿಗೆ ಆದ್ಯತೆ ನೀಡಬೇಕು, ಇಲ್ಲಿಯ ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಿಗೆ ಬರುವ ದೇಶ–ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಆಹಾರ ಉತ್ಸವ, ವೈನ್‌ ಉತ್ಸವ, ಸಾಂಸ್ಕೃತಿಕ ಮತ್ತು ಸಂಗೀತ ಉತ್ಸವ ನಡೆಸಬೇಕು, ಯೋಗಾ ತರಬೇತಿ ಕೇಂದ್ರ, ಹೆರಿಟೇಜ್‌ ಹೋಟೆಲ್‌ಗಳು ಆರಂಭವಾಗಬೇಕು’
–ಸುರೇಶ ಹೆಬ್ಳೀಕರ, ಪರಿಸರವಾದಿ, ಚಲನಚಿತ್ರ ನಿರ್ದೇಶಕ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT