ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ನೇ ನುಡಿಹಬ್ಬಕ್ಕೆ ‘ನವರಂಗ’ ಸಜ್ಜು

Last Updated 21 ಏಪ್ರಿಲ್ 2017, 9:24 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ 25ನೇ ನುಡಿಹಬ್ಬಕ್ಕೆ (ಘಟಿಕೋತ್ಸವಕ್ಕೆ) ಇಲ್ಲಿನ ನವರಂಗ ಬಯಲು ರಂಗಮಂದಿರ ಮದುವೆ ಮನೆಯಂತೆ ಸಿಂಗಾರಗೊಂಡಿದೆ.ಅಳ್ಳಿಕೆರೆಯ ತಟದಲ್ಲಿ ಕಲ್ಲಿನಿಂದ ನಿರ್ಮಿಸಿರುವ ಸುಂದರ ಮಂಟಪದ ಎದುರು ನುಡಿಹಬ್ಬದ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಇಡೀ ಮಂಟಪವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಮಂಟಪದ ಮುಂದಿನ ಕಟ್ಟೆಯ ಮೇಲೆ ಹಸಿರು ಹೊದಿಕೆ ಹಾಕಲಾಗಿದೆ.

ಪದವಿ ಪ್ರಮಾಣ ಪತ್ರ ಸ್ವೀಕರಿಸುವವರು ಹಾಗೂ ಅವರ ಪೋಷಕರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಗ್ಯಾಲರಿ ನಿರ್ಮಿಸಲಾಗಿದೆ. ಮಂಟಪಕ್ಕೆ ಸಂಪರ್ಕ ಕಲ್ಪಿಸುವ ಕಿರುದಾರಿಯಲ್ಲಿ ಬರುವ ಗಿಡ, ಮರಗಳಿಗೆ ಸುಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಅವುಗಳಿಗೆ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿದೆ. ವಿ.ವಿ ಪ್ರವೇಶ ದ್ವಾರದಲ್ಲಿ ಹೊಸ ನಾಮಫಲಕಗಳನ್ನು ಹಾಕಲಾಗಿದೆ. ನವರಂಗ, ಅಕ್ಷರ ಗ್ರಂಥಾಲಯ, ಕ್ರಿಯಾಶಕ್ತಿ ಹಾಗೂ ಭುವನವಿಜಯ ಸಭಾಂಗಣಕ್ಕೆ ಸುಣ್ಣ, ಬಣ್ಣ ಬಳಿದು ಹೊಸ ರೂಪ ಕೊಡಲಾಗಿದೆ.

ಪ್ರಖರ ಬಿಸಿಲು ಇರುವ ಕಾರಣ ಈ ಬಾರಿ ಕಾರ್ಯಕ್ರಮವು ಸಂಜೆ 4.30ರ ಬದಲಾಗಿ ಸಂಜೆ 6.30ಕ್ಕೆ ಆರಂಭವಾಗಲಿದೆ. ಡಿ.ಲಿಟ್‌, ಪಿ.ಎಚ್‌.ಡಿ, ಎಂ.ಫಿಲ್‌, ಎಂ.ಎ.ಪಿ.ಎಚ್‌.ಡಿ, ಎಂ.ವಿ.ಎ, ಎಂ. ಮ್ಯೂಸಿಕ್‌, ಬಿ. ಮ್ಯೂಸಿಕ್‌ ಸೇರಿದಂತೆ ಸ್ನಾತಕೋತ್ತರ ಪದವಿ ಪೂರೈಸಿರುವ 589, ಡಿಪ್ಲೋಮಾ ಕೋರ್ಸ್‌ ಮುಗಿಸಿರುವ 139, ಬಿ.ವಿ.ಎ. ಪೂರೈಸಿರುವ 339, ವಿಶೇಷ ಪರಿಣತಿ ಡಿಪ್ಲೋಮಾ ಮಾಡಿರುವ 155 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಪದವಿ ಪ್ರಮಾಣ ಪತ್ರ ನೀಡುವರು. ಇದೇ ವೇಳೆ ಹೋಮಿಯೋಪತಿ ವೈದ್ಯ ಬಿ.ಟಿ. ರುದ್ರೇಶ್‌ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಗುವುದು. ಬಳಿಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌ ಘಟಿಕೋತ್ಸವ ಭಾಷಣ ಮಾಡುವರು. ಘಟಿಕೋತ್ಸವ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

103 ಪುಸ್ತಕಗಳ ಬಿಡುಗಡೆ: ಬೆಳಿಗ್ಗೆ 10.30ಕ್ಕೆ ವಿ.ವಿ. ಆವರಣದಲ್ಲಿನ ನವೀಕರಣಗೊಂಡಿರುವ ಭುವನ ವಿಜಯ ಸಭಾಂಗಣದಲ್ಲಿ ‘ನಾಳಿನ ಕರ್ನಾಟಕ’ ವಿಚಾರ ಸಂಕಿರಣಕ್ಕೆ ಸಚಿವ ಬಸವರಾಜ ರಾಯರೆಡ್ಡಿ ಚಾಲನೆ ನೀಡುವರು. ಬಳಿಕ 50 ಹೊಸ ಹಾಗೂ 53 ಮರು ಮುದ್ರಣಗೊಂಡಿರುವ ಪುಸ್ತಕಗಳನ್ನು ಬಿಡುಗಡೆ ಮಾಡುವರು.

ಎನ್‌. ಚಿನ್ನಸ್ವಾಮಿ ಸೋಸಲೆ ಅವರು ಬರೆದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು’, ಕರೀಗೌಡ ಬೀಚನಹಳ್ಳಿ ಅವರ ‘ಬಿ.ಎಂ. ಶ್ರೀಕಂಠಯ್ಯ’, ರಹಮತ್‌ ತರೀಕೆರೆ ಅವರ ‘ಸಂಶೋಧನಾ ಮೀಮಾಂಸೆ’, ಪಿ. ಮಹಾದೇವಯ್ಯ ಅವರ ‘ಸರ್ವಜ್ಞ ತೌಲನಿಕ ಅಧ್ಯಯನಗಳು’, ಅಮರೇಶ ನುಡಗೋಣಿ ಅವರ ‘ತತ್ವಪದ ಸಾಹಿತ್ಯ ಅಧ್ಯಯನ’, ಎಚ್‌.ಡಿ. ಪ್ರಶಾಂತ್‌ ಅವರ ‘ಶಿಕ್ಷಣ ಹಕ್ಕು ಕಾಯ್ದೆ 2009–ಹಕ್ಕಲ್ಲ ಹಕ್ಕಿನ ಪ್ರತೀಕ’, ಎಂ. ಚಂದ್ರ ಪೂಜಾರಿ ಅವರ ‘ಸಂಶೋಧನಾ ಪರಿಭಾಷೆ’,  ಮೋಹನ್‌ ಕುಂಟಾರ್‌ ಅವರ ‘ಕನ್ನಡ ಮಲಯಾಳಂ ಭಾಷಾಂತರ ಪ್ರಕ್ರಿಯೆ’, ಮೊಗಳ್ಳಿ ಗಣೇಶ್‌ ಅವರ ‘ದಲಿತ ಪದ ಕಥನ’, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ ‘ಹೆಜ್ಜೆ ಮೂಡಿಸಿದ ಹಾದಿ’, ಪ್ರೊ. ಅಶೋಕಕುಮಾರ ರಂಜೇರೆ ಅವರ ‘ತಾಂತ್ರಿಕ ಕನ್ನಡ’ ಬಿಡುಗಡೆಗೊಳ್ಳಲಿರುವ ಪ್ರಮುಖ ಪುಸ್ತಕಗಳಲ್ಲಿ ಸೇರಿವೆ.

‘ರಾಜಕೀಯ’ ವಿಷಯದ ಕುರಿತು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌, ‘ಸಾಮಾಜಿಕ ಮತ್ತು ಶೈಕ್ಷಣಿಕ’ ಬಗ್ಗೆ ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್‌, ‘ಅಭಿವೃದ್ಧಿ’ ಬಗ್ಗೆ ಆರ್ಥಿಕ ತಜ್ಞ ಪ್ರೊ.ಟಿ.ಆರ್‌. ಚಂದ್ರಶೇಖರ್‌ ಮತ್ತು ‘ಸಾಂಸ್ಕೃತಿಕ’ ವಿಷಯದ ಮೇಲೆ ಹಿರಿಯ ಪತ್ರಕರ್ತೆ ಆರ್‌. ಪೂರ್ಣಿಮಾ ಉಪನ್ಯಾಸ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಆನಂದ ಸಿಂಗ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT