ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಗೆ 750 ಹೊಸ ಇವಿಎಂ ಕಂಟ್ರೋಲ್‌ ಯೂನಿಟ್‌

344 ಕಂಟ್ರೋಲ್‌ ಯೂನಿಟ್‌ಗಳಲ್ಲಿ ‘ಕ್ಲಾಕ್‌ ಎರರ್‌’ ಗುರುತಿಸಿದ ಅಧಿಕಾರಿಗಳು
Published 4 ಮೇ 2024, 8:13 IST
Last Updated 4 ಮೇ 2024, 8:13 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಗಾಗಿ ಚುನಾವಣಾ ಆಯೋಗ ಪೂರೈಕೆ ಮಾಡಿದ್ದ ಒಟ್ಟಾರೆ ವಿದ್ಯುನ್ಮಾನ ಮತಯಂತ್ರಗಳ ಕಂಟ್ರೋಲ್‌ ಯೂನಿಟ್‌ಗಳ ಪೈಕಿ 344ರಲ್ಲಿ ‘ಕ್ಲಾಕ್‌ ಎರರ್‌’ ಎಂಬ ದೋಷ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅವುಗಳ ಬದಲಿಗೆ ಹೊಸದಾಗಿ 750 ಹೊಸ ಕಂಟ್ರೋಲ್‌ ಯೂನಿಟ್‌ಗಳನ್ನು ಪೂರೈಕೆ ಮಾಡಿದೆ. 

ಚುನಾವಣಾ ಆಯೋಗವು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 2515 ಬ್ಯಾಲೆಟ್‌ ಯೂನಿಟ್‌ (ಅಭ್ಯರ್ಥಿಗಳ ಕ್ರಮ ಸಂಖ್ಯೆ, ಚಿಹ್ನೆ ಇರುವ ಯಂತ್ರ), 3111 ಕಂಟ್ರೋಲ್‌ ಯೂನಿಟ್‌ ಮತ್ತು 2677 ವಿವಿಪ್ಯಾಟ್‌ಗಳನ್ನು ಪೂರೈಕೆ ಮಾಡಿತ್ತು. ಇವುಗಳನ್ನು ಕ್ಷೇತ್ರದ ಚುನಾವಣಾ ಅಧಿಕಾರಿಗಳು ಏ.29ರಂದು ಪರೀಕ್ಷೆಗೆ ಒಳಪಡಿಸಿದ್ದರು. 

ಪರೀಕ್ಷೆ ವೇಳೆ 2506 ಬ್ಯಾಲೆಟ್‌ ಯೂನಿಟ್‌ಗಳು ಸುಸ್ಥಿತಿಯಲ್ಲಿದ್ದರೆ, 9ರಲ್ಲಿ ದೋಷ ಕಂಡು ಬಂದಿತ್ತು. 2767 ಕಂಟ್ರೋಲ್ ಯುನಿಟ್‌ಗಳು ಚನ್ನಾಗಿ ಕೆಲಸ ಮಾಡುತ್ತಿದ್ದರೆ, 344 ದೋಷಪೂರಿತವಾಗಿದ್ದವು. 2630 ವಿವಿ ಪ್ಯಾಟ್‌ಗಳು ಸರಿಯಾಗಿದ್ದವು. 47ರಲ್ಲಿ ದೋಷ ಕಂಡು ಬಂದಿತ್ತು. 

ಒಟ್ಟು 3111 ಕಂಟ್ರೋಲ್‌ ಯೂನಿಟ್‌ಗಳ ಪೈಕಿ 344 (ಶೇ. 11ರಷ್ಟು)ರಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯ ಚುನಾವಣಾಧಿಕಾರಿಗಳು, ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ದೋಷಪೂರಿತ 344 ಕಂಟ್ರೋಲ್‌ ಯೂನಿಟ್‌ಗಳಿಗೆ ಪ್ರತಿಯಾಗಿ 750 ಯೂನಿಟ್‌ಗಳನ್ನು ಬೆಳಗಾವಿಯಿಂದ ಪೂರೈಕೆ ಮಾಡಿದೆ.  

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1972 ಮತಗಟ್ಟೆಗಳಿವೆ. ಎಷ್ಟು ಮತಗಟ್ಟೆಗಳಿವೆಯೋ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮತಯಂತ್ರಗಳನ್ನು ಚುನಾವಣಾ ಆಯೋಗ ಕ್ಷೇತ್ರಗಳಿಗೆ ಪೂರೈಕೆ ಮಾಡುತ್ತದೆ. ನಿಯಮಗಳ ಪ್ರಕಾರ ಶೇ. 120ರಷ್ಟು ಮತಯಂತ್ರಗಳನ್ನು ಕ್ಷೇತ್ರವೊಂದಕ್ಕೆ ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸದ್ಯ ಬಳ್ಳಾರಿ ಕ್ಷೇತ್ರದಲ್ಲಿ ಶೇ. 127.08 ರಷ್ಟು ಬ್ಯಾಲೆಟ್‌ ಯೂನಿಟ್‌ಗಳು, ಶೇ 140.31ರಷ್ಟು ಕಂಟ್ರೋಲ್‌ ಯೂನಿಟ್‌ಗಳು ಮತ್ತು 133.37ರಷ್ಟು ವಿವಿಪ್ಯಾಟ್‌ಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪರೀಕ್ಷೆ ವೇಳೆ 344 ಕಂಟ್ರೋಲ್‌ ಯೂನಿಟ್‌ಗಳು ದೋಷಪೂರಿತವಾಗಿದ್ದವು. ಅವುಗಳ ಬದಲಿಗೆ ಹೊಸದಾಗಿ ಕಂಟ್ರೋಲ್‌ ಯೂನಿಟ್‌ಗಳನ್ನು ಪಡೆಯಲಾಗಿದೆ. ಬೆಳಗಾವಿಯಿಂದ 750 ಯೂನಿಟ್‌ಗಳು ಬಂದಿವೆ.

– ಮೊಹಮದ್‌ ಝುಬೇರ ಹೆಚ್ಚುವರಿ ಜಿಲ್ಲಾಧಿಕಾರಿ

ಏನಿದು ‘ಕ್ಲಾಕ್‌ ಎರರ್‌’ 

ವಿದ್ಯುನ್ಮಾನ ಮತಯಂತ್ರವು ಎರಡು ಘಟಕಗಳನ್ನು ಒಳಗೊಂಡಿರುತ್ತದೆ. ಒಂದು ಬ್ಯಾಲೆಟ್‌ ಯೂನಿಟ್‌ ಮತ್ತೊಂದು ಕಂಟ್ರೋಲ್ ಯೂನಿಟ್‌. ಬ್ಯಾಲೆಟ್‌ ಯೂನಿಟ್‌ನೊಂದಿಗೆ ಸಂಪರ್ಕಗೊಂಡಿರುವ ಕಂಟ್ರೋಲ್‌ ಯೂನಿಟ್‌ ಮತಗಟ್ಟೆ ಅಧಿಕಾರಿಯ ನಿಯಂತ್ರಣದಲ್ಲಿರುತ್ತದೆ. ಕಂಟ್ರೋಲ್‌ ಯೂನಿಟ್‌ನಿಂದ ಅನುಮತಿ ನೀಡಿದ ಬಳಿಕವೇ ಮತದಾರರು ಮತ ಚಲಾಯಿಸಲು ಸಾಧ್ಯ. ಈ ಯಂತ್ರಗಳಲ್ಲಿ ದಿನಾಂಕ ಸಮಯ ಸರಿಯಾಗಿ ಬಿತ್ತರವಾಗದೇ ಹೋದರೆ ಅದನ್ನು ‘ಕ್ಲಾಕ್‌ ಎರರ್‌‘ ಎಂದು ಕರೆಯಲಾಗುತ್ತದೆ.

ಬಳ್ಳಾರಿ ಮೈಸೂರಿನಲ್ಲಿ ದೋಷ

ರಾಜ್ಯದಲ್ಲಿ ಬಳ್ಳಾರಿ ಮತ್ತು ಮೈಸೂರು ಕ್ಷೇತ್ರಗಳಲ್ಲಿ ಮಾತ್ರ ಕಂಟ್ರೋಲ್‌ ಯೂನಿಟ್‌ಗಳಲ್ಲಿ ‘ಕ್ಲಾಕ್‌ ಎರರ್‌’ ಕಂಡು ಬಂದಿತ್ತು ಎನ್ನಲಾಗಿದೆ. ದೋಷ ಕಂಡು ಬಂದ ಕೂಡಲೇ ಮೈಸೂರಿನಲ್ಲಿಯೂ ಹೊಸ ಮತಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ಬಳ್ಳಾರಿಯಲ್ಲೂ ಸಾಮಾನ್ಯಕ್ಕಿಂತಲೂ ಹೆಚ್ಚಿನ ಕಂಟ್ರೋಲ್‌ ಯೂನಿಟ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚುನಾವಣಾ ಆಯೋಗಕ್ಕೆ ವರದಿ ನೀಡಿ ಹೊಸ ಯಂತ್ರಗಳನ್ನು ಪಡೆಯಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT