ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರಿಯಮ್ಮನಹಳ್ಳಿ: ಇತಿಹಾಸ ಸಾರುವ ಉಭಯ ದೇಗುಲ

ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ: ಮೂಲಸೌಕರ್ಯ ಕೊರತೆ
Published : 6 ಆಗಸ್ಟ್ 2023, 5:48 IST
Last Updated : 6 ಆಗಸ್ಟ್ 2023, 5:48 IST
ಫಾಲೋ ಮಾಡಿ
Comments

ಮರಿಯಮ್ಮನಹಳ್ಳಿ: ಪಟ್ಟಣದಿಂದ 15 ಕಿ.ಮೀ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ-50ಕ್ಕೆ ಹೊಂದಿಕೊಂಡಿರುವ ತಿಮ್ಮಲಾಪುರ ಗ್ರಾಮದಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ವೇಣುಗೋಪಾಲಕೃಷ್ಣ ಹಾಗೂ ತ್ರಿಕೂಟೇಶ್ವರ ದೇವಸ್ಥಾನಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ವಿಜಯನಗರ ಸಾಮ್ರಾಜ್ಯದ ದೊರೆ ಸದಾಶಿವರಾಯನ ಕಾಲದಲ್ಲಿ ಬಯಕಾರ ರಾಮಪ್ಪ ತಿಮ್ಮಲಾಪುರದಲ್ಲಿ ಆಗ್ರಹಾರ ಸ್ಥಾಪಿಸಿ, ಒಂದು ಸೈನ್ಯದ ತುಕಡಿಗೆ ಮುಖ್ಯಸ್ಥನಾಗಿದ್ದನು. 1461ರಲ್ಲಿ ಇವರು ತನ್ನ ಚಿಕ್ಕಪ್ಪ ಬಾಚರಸಯ್ಯ ಮತ್ತು ಚಿಕ್ಕಮ್ಮ ಅಂಮಾಜಂಮ್ಮರ ಸ್ಮರಣಾರ್ಥ ಇಲ್ಲಿ ತ್ರಿಕೂಟೇಶ್ವರ ಮತ್ತು ವೇಣುಗೋಪಾಲಕೃಷ್ಣ ದೇವಸ್ಥಾನ ನಿರ್ಮಿಸಿದನು ಎಂದು ಶಿಲಾಶಾಸನದಿಂದ ತಿಳಿದುಬರುತ್ತದೆ.

ಅದ್ಭುತ ಶಿಲ್ಪಕಲೆಯಿಂದ ತುಂಬಿರುವ ಎರಡೂ ದೇವಸ್ಥಾನಗಳ ಆವರಣ ಹಸಿರಿನಿಂದ ಕಂಗೊಳಿಸುತ್ತದೆ. ದೇವಸ್ಥಾನಗಳು ಸಂಪೂರ್ಣ ಕಲ್ಲುಗಳಿಂದ ನಿರ್ಮಾಣವಾಗಿದ್ದರೂ, ರಾಜಗೋಪುರವನ್ನು ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ.

ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಳು ಹೆಡೆಯ ಸರ್ಪದ ಕೆಳಗೆ ಕೊಳಲನೂದುವ ಭಂಗಿಯಲ್ಲಿರುವ ಕಪ್ಪು ಶಿಲೆಯ ದೇವರ ಮೂರ್ತಿ ಕಣ್ಮನ ಸೆಳೆಯುತ್ತದೆ. ಕೃಷ್ಣಜನ್ಮಾಷ್ಠಮಿಯಂದು ರಥೋತ್ಸವ ಜರುಗುತ್ತದೆ. ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಮೂರು ಶಿವಲಿಂಗಳ ಪೈಕಿ ಈಗ ಒಂದು ಶಿವಲಿಂಗ ಮಾತ್ರ ಇದೆ.

ದೇವಸ್ಥಾನಗಳು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಗೆ ಒಳಪಟ್ಟಿದ್ದರೂ ಮೂಲಸೌಕರ್ಯವಿಲ್ಲದೆ ಹಲವಾರು ಪ್ರವಾಸಿಗರಿಂದ ದೂರವೇ ಉಳಿದಿವೆ. ಕೆಲ ವರ್ಷಗಳ ಹಿಂದೆ ನಿಧಿ ಆಸೆಗೆ ದುಷ್ಕರ್ಮಿಗಳು ತ್ರಿಕೂಟೇಶ್ವರ ದೇವಸ್ಥಾನದಲ್ಲಿನ ಶಿವಲಿಂಗವೊಂದನ್ನು ಭಗ್ನಗೊಳಿಸಿದ್ದರು. ಈ ದೇವಸ್ಥಾನಗಳ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡುವ ಫಲಕವಾಗಲೀ, ಮಾಹಿತಿ ಕೇಂದ್ರವಾಗಲೀ ಇಲ್ಲ. ಸರಿಯಾದ ರಸ್ತೆ ಇಲ್ಲದ ಕಾರಣ ಹೆಚ್ಚು ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಈ ಹಿಂದೆ ಗಾಲಿ ಜನಾರ್ಧನರೆಡ್ಡಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ತಿಮ್ಮಲಾಪುರ ಉತ್ಸವ ಮಾಡುವುದಾಗಿ ಹೇಳಿದ್ದರು. ಅದು ಈವರೆಗೆ ಈಡೇರಿಲ್ಲ ಎಂಬುದು ಸ್ಥಳೀಯ ಕಲಾವಿದರ ಬೇಸರದ ನುಡಿ.

ಮರಿಯಮ್ಮನಹಳ್ಳಿ ಸಮೀಪದ ತಿಮ್ಮಲಾಪುರ ಗ್ರಾಮದ ಐತಿಹಾಸಿಕ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿರುವ ದೇವರ ಮೂರ್ತಿ
ಮರಿಯಮ್ಮನಹಳ್ಳಿ ಸಮೀಪದ ತಿಮ್ಮಲಾಪುರ ಗ್ರಾಮದ ಐತಿಹಾಸಿಕ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿರುವ ದೇವರ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT