ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಡಾ. ರಾಜಶೇಖರ ನೀರಮಾನ್ವಿ ನೆರೆಯ ಜಿಲ್ಲೆ ರಾಯಚೂರಿನ ನೀರಮಾನ್ವಿಯವರು. ಅವರ ಪ್ರಥಮ ಕತೆ ‘ವೃತ್ತ’ 1966ರಲ್ಲಿ ಪ್ರಕಟವಾಗಿ, 1973ರ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದರು. ಅವರು ಬರೆದ ‘ಹಂಗಿನ ಅರಮನೆ ಹೊರಗೆ’ ಕೃತಿಯನ್ನು ‘ನ್ಯಾಷನಲ್ ಬುಕ್ ಟ್ರಸ್ಟ್’ನವರ ‘ಅಂತರ್ ಭಾರತಿ’ ಪುಸ್ತಕ ಮಾಲೆಯಲ್ಲಿ ಪ್ರಕಟವಾಯಿತು. ನಂತರ ದೇಶದ ಎಲ್ಲ ಭಾಷೆಗಳಿಗೆ ಅನುವಾದವಾಯಿತು.
ಚಿತ್ರನಿರ್ದೇಶಕ ಬಸು ಚಟರ್ಜಿಯವರು ದೇಶದ 27 ಭಾಷೆಗಳ ತಲಾ ಒಂದೊಂದು ಕಥೆಗಳನ್ನು ದೂರದರ್ಶನಕ್ಕೆ ಹಿಂದಿ ಭಾಷೆಯಲ್ಲಿ ಕಥಾ ಮಾಲಿಕೆಯಾಗಿ ನಿರ್ಮಿಸಿಕೊಟ್ಟರು. ಅದರಲ್ಲಿ ನೀರಮಾನ್ವಿಯವರ ‘ಹಂಗಿನ ಅರಮೆನೆ ಹೊರಗೆ’ ಕಥೆಯು ‘ಮೆಹರ್ ಬಾನೋಂಕೆ ಘರ್‌ಕೆ ಬಾಹರ್’ ಎಂಬ ಹೆಸರಿನಲ್ಲಿ ಪ್ರಸಾರವಾಯಿತು.
ಆರಂಭಿಕ ಶಿಕ್ಷಣ ಉರ್ದು ಭಾಷೆಯಲ್ಲಿ ಪಡೆದ ಅವರು, ನಂತರ ಕನ್ನಡ ಕಲಿಯಲು ಪ್ರಾರಂಭಿಸಿದರು. 30–40 ದಶಕದ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಸಿದ್ಧಯ್ಯ ಪುರಾಣಿಕ, ದೇವೇಂದ್ರ ಕುಮಾರ್ ಹಕಾರಿ, ಶಂತರಸ, ಚನ್ನಬಸಪ್ಪ ಬೆಟದೂರು ಮುಂತಾದ ಹಿರಿಯ ಬರಹಗಾರರ ಪ್ರಾರಂಭಿಕ ಶಿಕ್ಷಣ ಉರ್ದು ಭಾಷೆಯಲ್ಲೇ ನಡೆದಿತ್ತು. ಅವರೆಲ್ಲರೂ ಸ್ವತಃ ಹೋರಾಡಿ ತಮ್ಮ ಸ್ವಂತ ಭಾಷೆ ಕನ್ನಡ ಅಭ್ಯಾಸ ಮಾಡಿದ್ದರು.
1973ರ ಸುಮಾರಿಗೆ ನೀರಮಾನ್ವಿಯವರು ಬಳ್ಳಾರಿಯ ವೀರಶೈವ ಕಾಲೇಜಿಗೆ ಭೂವಿಜ್ಞಾನ ಉಪನ್ಯಾಸಕರಾಗಿ ಬಂದರು. ಬಳ್ಳಾರಿಯ ಮೈಸೂರು ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ನಾನು ನೀರಮಾನ್ವಿಯವರನ್ನು ಭೇಟಿಯಾಗಲು ಹುಡುಕಿಕೊಂಡು ಹೋದೆ. ಅವರನ್ನು ಮುಖತಃ ನೋಡಿಲ್ಲದಿದ್ದರೂ, ಅವರ ಒಂದರೆರಡು ಕತೆ ‘ಪ್ರಜಾವಾಣಿ’, ‘ಸಂಕ್ರಮಣ’ಗಳಲ್ಲಿ ಓದಿ ಮೆಚ್ಚಿದ್ದೆ. ಅಡಿಗರ ’ಸಾಕ್ಷಿ’ಯಲ್ಲಿ ಆಗಷ್ಟೇ ಅವರ ಹಂಗಿನ ಅರಮನೆ ಪ್ರಕಟವಾಗಿತ್ತು. ಅವರನ್ನು ನೋಡಿದ ಕೂಡಲೇ ಭೂ ಗರ್ಭದಿಂದ ಹೊರಬಂದ ಅಪ್ಪಟ ಕಪ್ಪುಶಿಲೆಯಂತಿರುವ ದಪ್ಪ ಚಾಳೀಸು ಹಾಕಿಕೊಂಡ, ಅತ್ಯಂತ ನೀರಸವಾಗಿ ಕಂಡ ಇವರೇನಾ ಇಂಥ ಉತ್ತಮ ಕತೆಗಳನ್ನು ಬರೆದವರು ಎಂದು ಆಶ್ಚರ್ಯವಾಯಿತು. ಕೆಲವೇ ದಿನಗಳಲ್ಲಿ ಸ್ನೇಹ ಆತ್ಮೀಯತೆಯಾಗಿ ಮಾರ್ಪಟ್ಟಿತ್ತು. ಸಮಾನ ವಿಚಾರಧಾರೆ ನಮ್ಮನ್ನು ಹತ್ತಿರ ತಂದಿತ್ತು. ನಂತರ ನಾಲ್ಕು ದಶಕಗಳ ಕಾಲ ಜೋಡಿ ಜೀವಗಳಂತೆ ನಾಡಿನ ಸಾಂಸ್ಕೃತಿ ಚಳವಳಿ, ಸಮ್ಮೇಳನ, ವಿಚಾರ ಸಂಕಿರಣ, ಹೋರಾಟಗಳಲ್ಲಿ ಜೊತೆಯಾಗಿ ಪಾಲ್ಗೊಂಡೆವು. ಮುಖ್ಯವಾಗಿ ಬರಹಗಾರ , ಕಲಾವಿಧರ ಒಕ್ಕೂಟ, ನವ ನಿರ್ಮಾಣ ಚಳವಳಿ, ಗೋಕಾಕ ಚಳವಳಿ, ಬಂಡಾಯ ಸಾಹಿತ್ಯ ಸಂಘಟನೆ, ಮುಂತಾದವು.
1978 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಹಂಗಿನ ಅರಮನೆ ಹೊರಗೆ’ ನಂತರ ನೀರಮಾನ್ವಿಯವರು ಯಾವುದೇ ಕತೆಗಳನ್ನು ಬರೆಯಲಿಲ್ಲ. ಅಂಥ ಶ್ರೇಷ್ಠ ಕತೆಗಾರನಿಂದ ಯಾಕೆ ಕತೆಗಳು ಬರುತ್ತಿಲ್ಲ ಎಂದು ಬಹಳಷ್ಟು ಜನ ನನ್ನನ್ನು ಕೇಳಲಾರಂಭಿಸಿದ್ದರು. ಅದೇ ರೀತಿ ನಾನು ಅವರನ್ನು ಕಥಾ ಸಂಕಲ ಬರೆಯಿರಿ ಎಂದು ಒತ್ತಾಯಿಸಲಾರಂಭಿಸಿದೆ. ಒಂದು ಬಾರಿ ಹೀಗೆ ಬಳ್ಳಾರಿಯ ನಟರಾಜ ಕಂಪ್ಲೆಕ್ಸ್‌ನಲ್ಲಿ ಚಹಾ ಕುಡಿಯುತ್ತಾ ಕುಳಿತಾಗ ‘ವರ್ಷಾನುಗಟ್ಟಲೆ ಇಡೀ ನಾಡು ಸುತ್ತಿದರು ಯಾವ ಪ್ರಕಾಶಕರು ಈ ಕೃತಿ ಪ್ರಕಟಿಸಲು ಒಪ್ಪಲಿಲ್ಲ’ ಸುಮಾರು 12 ವರ್ಷಗಳ ನಂತರ ನೀವೆಲ್ಲರೂ ಒತ್ತಾಯಿಸಿದೆರೆಂಬ ಕಾಣಕ್ಕೆ ಇದನ್ನು ಕೊಡುತ್ತಿದ್ದೇನೆ ಎಂದು ಕಥೆಗಳನ್ನು ನಮ್ಮ ಮುಂದೆ ರಪ್ಪನೆ ಹಾಕಿದರು. ಅದಕ್ಕೆ ನಾನು ಗಂಭೀರವಾಗಿ ಯೋಚನೆ ಮಾಡಿ ನಾವೇ ಯಾಕೆ ಪ್ರಕಟಿಸಬಾರದು ಎಂದು ಅವರನ್ನು ಪ್ರಶ್ನಿಸಿದೆ. ನಮಗ್ಯಾರಿಗೂ ಅನುಭವ ಇಲ್ಲವಲ್ಲ ಎಂದರು. ಯಾವ ಪ್ರಕಾಶನ ಎಂದು ಪ್ರಶ್ನಿಸಿದರು. ನಾವೆಲ್ಲರೂ ಲೋಹಿಯಾರಿಂದ ಪ್ರೇರಿತರಾದ್ದರಿಂದ ಲೋಹಿಯಾ ಪ್ರಕಾಶನ ಎಂದೇ ಹೆಸರು ಇಟ್ಟೆವು. ಹೀಗೆ ಹೊಗೆಯಾಡುವ ಚಹಾದ ಬಟ್ಟಲೊಂದು ಪ್ರಕಾಶನ ಹುಟ್ಟಿಗೆ ತೊಟ್ಟಿಲಾಗುತ್ತೆಂದು ನಾವ್ಯಾರೂ ಅಂದುಕೊಂಡಿರಲಿಲ್ಲ. ಹೀಗೆ ನೀರಮಾನ್ವಿಯವರ ‘ಕರ್ಪೂರದ ಕಾಯದಲ್ಲಿ’ ಕಥಾ ಸಂಕಲನ ಲೋಹಿಯಾ ಪ್ರಕಾಶನದ ಮೊದಲ ಕೃತಿಯಾಗಿ ಹೊರಬಂದಿತು.
ನೀರಮಾನ್ವಿಯವರು ಪ್ರಚಾರ, ಪ್ರಶಸ್ತಿ, ಪ್ರಸಿದ್ಧಿಯ ಹಿಂದೆ ಯಾವತ್ತೂ ಬೆನ್ನುಹತ್ತಿ ಹೋದವರಲ್ಲ. ಚಾಲ್ತಿಯಲ್ಲಿರಲು ಬಯಸುತ್ತಿರಲಿಲ್ಲ. ಅವರು ಹೆಚ್ಚು ಬರೆಯುತ್ತಿರಲಿಲ್ಲ. ರಾಜಶೇಖರ ಬರೆದಿರುವುದು ಹನ್ನೆರಡು ಕಥೆಗಳು ಮಾತ್ರ ತಮ್ಮದೇ ಕಥಾ ಮಾದರಿಯನ್ನು ಆರಂಭಿಸುವಷ್ಟು ಸಶಕ್ತ-ಸಫಲ ಕಥೆಗಳನ್ನು ಬರೆದ ನೀರಮಾನ್ವಿಯವರು ಏಕೆ ಇಷ್ಟು ಕಡಿಮೆ ಬರೆದಿದ್ದಾರೆಂದು ವಿಷಾದವೆನಿಸುತ್ತದೆ. ಇವರು ಹುಟ್ಟುಹಾಕಿದ ಜಾಡಿನಲ್ಲಿ ಅಮರೇಶ ನುಗಡೋಣಿ, ಚಿದಾನಂದ ಸಾಲಿ, ಕಲಿಗಣನಾಥ ಗುಡದೂರು, ಮಹಂತೇಶ್ ನವಲಕಲ್, ಅಮರೇಶ ಗಿಣಿವಾರ, ನಾಗರಾಜ ಕೋರಿ ಮುಂತಾದವರು ನಡೆದು, ತಮ್ಮದೇ ಮಾರ್ಗವನ್ನು ಸೃಷ್ಟಿಸಿಕೊಂಡು ಸಾಗುತ್ತಿದ್ದಾರೆಂಬುದೇ ಸಮಾಧಾನದ ವಿಷಯ.
ಲೇಖಕರು: ಮುಖ್ಯಸ್ಥರು, ಲೋಹಿಯಾ ಪ್ರಕಾಶನ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.