ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌

ಪೊಲೀಸ್‌ ಇಲಾಖೆಯಲ್ಲಿ ಸೇವೆ ಆರಂಭಿಸಿ 13 ವರ್ಷ ಕಳೆದಿದೆ
Published : 12 ಫೆಬ್ರುವರಿ 2026, 4:32 IST
Last Updated : 12 ಫೆಬ್ರುವರಿ 2026, 4:32 IST
ಫಾಲೋ ಮಾಡಿ
Comments
ಬಳ್ಳಾರಿ ಜಿಲ್ಲೆ ಉದ್ವಿಗ್ನ ಸ್ಥಿತಿಯಲ್ಲಿದ್ದಾಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದವರು ಐಪಿಎಸ್‌ ಅಧಿಕಾರಿ ಸುಮನ್‌ ಡಿ. ಪೆನ್ನೇಕರ್‌. ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡು ಫೆ. 8ಕ್ಕೆ ತಿಂಗಳಾಗಿದೆ. ಈ ಒಂದು ತಿಂಗಳಲ್ಲಿ ಜಿಲ್ಲೆ ಬಗ್ಗೆ ಅವರು ತಿಳಿದುಕೊಂಡಿದ್ದೇನು, ಮಾಡಿದ್ದೇನು, ಜನರು ಇಟ್ಟುಕೊಂಡಿರುವ ನಿರೀಕ್ಷೆಗಳ ಬಗ್ಗೆ ಅವರ ನಿಲುವೇನು, ಇದರ ಜತೆಗೆ, ಅವರ ಸಂಕ್ಷಿಪ್ತ ವೈಯಕ್ತಿ ಮಾಹಿತಿ ಜತೆಗಿನ ಸಂದರ್ಶನ ಇಲ್ಲಿದೆ. 
ಪ್ರ

ಬಳ್ಳಾರಿ ಜತೆಗೆ ಯಾವುದಾದರೂ ನಂಟಿತ್ತೇ?  

ಇಲ್ಲಿನ ಐತಿಹಾಸಿಕ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು ಬಿಟ್ಟರೆ ನನಗೆ ಬಳ್ಳಾರಿಯೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ. ಬಳ್ಳಾರಿ ನಗರಕ್ಕೂ ನಾನು ಬಂದಿರಲಿಲ್ಲ. ಇಲ್ಲಿನ ಗಣಿಗಾರಿಕೆ, ಖನಿಜ ಸಂಪನ್ಮೂಲದ ಬಗ್ಗೆ ಓದಿ ಗೊತ್ತಿತ್ತು ಅಷ್ಟೆ.

ಪ್ರ

ಊರು, ಕುಟುಂಬ, ವಿದ್ಯಾಭ್ಯಾಸ ಇದರ ಬಗ್ಗೆ?

ಬೆಳಗಾವಿ ಜಿಲ್ಲೆಯ, ಖಾನಾಪುರ ತಾಲೂಕಿನ ಸಣ್ಣ ಹಳ್ಳಿ ನಮ್ಮದು. ಕಿತ್ತೂರು ಸಂಸ್ಥಾನ ಭಾಗ ನಮ್ಮೂರು. ನನ್ನ ತಂದೆ ಶಾಲಾ ಶಿಕ್ಷಕರು. ತಾಯಿ ಗೃಹಿಣಿ. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಾನು ಆಯುರ್ವೇದ ವೈದ್ಯಕೀಯ ಪದವೀಧರೆ. ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನಾನು ಓದಿದ್ದೆ. ಆದರೆ, ವೃತ್ತಿ ಆರಂಭಿಸಲಿಲ್ಲ. ಪದವಿ ಬಳಿಕ ನನಗೆ ವಿವಾಹವಾಗಿತ್ತು. ಆ ಬಳಿಕವೇ ನಾನು ಯುಪಿಎಸ್‌ಸಿಗೆ ಸಿದ್ಧತೆ ನಡೆಸಿದೆ. 

ಪ್ರ

ಎಸ್‌ಪಿಯಾಗಿ ಕೆಲಸ ಮಾಡಿದ ಜಿಲ್ಲೆಗಳಿಗೂ ಬಳ್ಳಾರಿಗೂ ಏನು ವ್ಯತ್ಯಾಸ? 

ನಾನು ಕೊಡಗು, ಕಾರವಾರದಲ್ಲಿ ಎಸ್‌ಪಿಯಾಗಿ ಕೆಲಸ ಮಾಡಿದ್ದೆ. ಮೂರು ಜಿಲ್ಲೆಗಳೂ ಎಲ್ಲ ರೀತಿಯಿಂದಲೂ ಭಿನ್ನ. ಚಿಕ್ಕ ಜಿಲ್ಲೆಯಾಗಿದ್ದರೂ, ಪ್ರವಾಹದಂಥ ಸವಾಲಿನ ಸನ್ನಿವೇಶದಲ್ಲಿ ನಾನು ಕೊಡಗಿಗೆ ಹೋಗಿದ್ದೆ. ಅದೇ ಭಾವನೆ ಬಳ್ಳಾರಿಯಲ್ಲೂ ಇದೆ. ಆದರೆ, ಸವಾಲುಗಳು ಭಿನ್ನವಾಗಿವೆ ಅಷ್ಟೆ. ಕಾರವಾರ ವಿಸ್ತಾರವಾದ ಜಿಲ್ಲೆಯಾಗಿತ್ತಾದರೂ, ಹೆಚ್ಚಿನ ಸವಾಲುಗಳೇನೂ ಇರಲಿಲ್ಲ. ಹಿಂದಿನ ಎರಡೂ ಜಿಲ್ಲೆಗಳಲ್ಲಿ ಅಪಾರವಾದ ಜನ ಬೆಂಬಲ ಸಿಕ್ಕಿತ್ತು. ಬಳ್ಳಾರಿಯಲ್ಲಿ ಜನರು ಬಹಳ ಮುಗ್ಧರಿದ್ದಾರೆ. ಯಾವ ಹಂತಕ್ಕೆ ಎಂದರೆ, ಕಾನೂನಿನಲ್ಲಿ ಏನಿದೆ ಏನಿಲ್ಲ ಎಂಬುದನ್ನು ಅರಿಯದಷ್ಟೂ ಮುಗ್ಧ ಜನ ಇಲ್ಲಿದ್ದಾರೆ. ಇದೇ ಹೊತ್ತಲ್ಲೇ, ಇಲ್ಲಿ ಅತ್ಯಂತ ಪ್ರಭಾವಿ, ಪ್ರಬಲರೂ ಇದ್ದಾರೆ. ಇಲ್ಲಿನ ಮುಗ್ಧರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಇದೂ ಕೂಡ ಅಪರಾಧಗಳಿಗೆ ಕಾರಣವಾಗುತ್ತಿದೆ. ಮುಗ್ಧರಿದ್ದಾಗ ಅವರನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇರುತ್ತಾರೆ. ಜನರು ಜಾಗೃತರಾಗಬೇಕು. ಆಗ ಸುಧಾರಣೆ ಆಗಲಿದೆ. 

ಪ್ರ

ನಿರ್ದಿಷ್ಟ ಸೂಚನೆ ಕೊಟ್ಟು ಬಳ್ಳಾರಿಗೆ ನಿಮ್ಮನ್ನು ಕಳುಹಿಸಲಾಗಿದೆ ಎಂಬ ಮಾತಿದೆ. 

ಹಾಗೆಲ್ಲ ಏನೂ ಇಲ್ಲ. ಆದರೆ, ಯಾವುದೇ ಕೆಲಸ ವಹಿಸಿದಾಗ ಮರು ಮಾತಿಲ್ಲದೇ ಮಾಡುವುದು ನನ್ನ ಜಾಯಮಾನ. ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗಬೇಕು ಎಂದು ಇಲಾಖಾ ಮಟ್ಟದಲ್ಲಿ ಸೂಚನೆ ನೀಡಿದ್ದಿದೆ. ನಾನೂ ಇದನ್ನು ಗಂಭೀರವಾಗಿಯೇ ಪರಿಗಣಿಸಿದ್ದೇನೆ. ಬಳ್ಳಾರಿ ಕಷ್ಟವಾಗಬಹುದು ಎಂದು ಇಲಾಖೆಯಲ್ಲಿನ ಕೆಲ ಮಂದಿ ಹೇಳಿದ್ದು ನಿಜ.  

ಪ್ರ

ಬಳ್ಳಾರಿಯ ದಂಧೆಗಳ ಬಗ್ಗೆ... 

ಬಳ್ಳಾರಿಯಲ್ಲಿ ದಂಧೆಗಳಿರುವುದು ನಿಜ. ಅದನ್ನು ಈ ಒಂದು ತಿಂಗಳಲ್ಲಿ ನಾನೂ ಸಂಪೂರ್ಣ ನಿಯಂತ್ರಿಸಿದ್ದೇನೆ ಎಂದು ಹೇಳಲಾಗದು. ಅದಕ್ಕೆ ಸಮಯಬೇಕು. ಅದು ವ್ಯವಸ್ಥಿತವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದನ್ನು ನಿಯಂತ್ರಿಸುವ ಎಲ್ಲ ಕೆಲಸ ಮಾಡುತ್ತಿದ್ದೇನೆ. ಎಲ್ಲ ಸಿಬ್ಬಂದಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿದ್ದೇನೆ. ದಂಧೆಗಳ ನಿಯಂತ್ರಣದಲ್ಲಿ ನನಗೆ ಆರಂಭಿಕ ಜಯ ಸಿಕ್ಕಿದೆ ಎಂದುಕೊಳ್ಳುತ್ತೇನೆ. ಆದರೆ, ಈ ಪಯಣ ಇನ್ನೂ ದೂರ ಇದೆ. ದಂಧೆಗಳನ್ನು ಮಟ್ಟ ಹಾಕುವ ವಿಚಾರದಲ್ಲಿ ನನ್ನನ್ನು ಅಷ್ಟು ಸಲುಭವಾಗಿ ಸಮಾಧಾನ ಮಾಡಲಾಗದು.  

ದಂಧೆಗಳಲ್ಲಿ ರಾಜಕಾರಣಿಗಳಿದ್ದಾರೆ ಎಂಬ ಮಾತುಗಳಿವೆ. ಆದರೆ ಅದಕ್ಕೆ ಪೂರಕವಾದ ದಾಖಲೆಗಳು ನನಗೆ ಸಿಕ್ಕಿಲ್ಲ. ಇಲಾಖೆ ಮುಂದೆ ಈಗ ನೂರಾರು ಸಮಸ್ಯೆಗಳಿವೆ. ಅವುಗಳನ್ನೆಲ್ಲ ಏಕಾಏಕಿ ಮಟ್ಟ ಹಾಕಲು ಸಾಧ್ಯವಿಲ್ಲ. ಹಂತ ಹಂತವಾಗಿ ಅವುಗಳನ್ನು ನಿಯಂತ್ರಿಸಬೇಕಾಗುತ್ತದೆ.  ದಾಳಿಗಳನ್ನು ಜಿಲ್ಲಾದ್ಯಂತ ಕೈಗೊಂಡಿದ್ದೇವೆ. ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ. ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. 

ಪ್ರ

ಬಳ್ಳಾರಿ ಘರ್ಷಣೆಯ ತನಿಖೆ ಬಗ್ಗೆ ಹೇಳುವಿರಾ?

ಬಳ್ಳಾರಿಗೆ ವರದಿ ಮಾಡಿಕೊಂಡ ಮೊದಲ ದಿನವೇ ನಾನು ಘಟನಾ ಸ್ಥಳಕ್ಕೆ ಹೋಗಿದ್ದೆ. ವಿಡಿಯೊ, ಫೋಟೊಗಳನ್ನು ಸಂಗ್ರಹಿಸಲಾಗಿತ್ತು. ಅದನ್ನು ಪರಾಮರ್ಶಿಸಲು ಸೂಚನೆಗಳನ್ನು ನೀಡಿದ್ದೆ. ಆರೋಪಿಗಳ ಪತ್ತೆ, ಹೇಳಿಕೆ ತೆಗೆದುಕೊಳ್ಳುವ ಕೆಲಸಗಳು ಆಗುತ್ತಿದ್ದವು. ಎರಡೇ ದಿನಕ್ಕೆ ಪ್ರಕರಣ ಸಿಐಡಿಗೆ ಹೋಯಿತು. ಅಷ್ಟೆ... 

ಪ್ರ

ಬಳ್ಳಾರಿ ಜನ ನಿಮ್ಮ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರಲ್ಲ. 

ನಾನು ಪೊಲೀಸ್‌ ಸೇವೆಗೆ ಬಂದು 13 ವರ್ಷ ಆಯಿತು.  ನನ್ನದು ನೇರ ದಾರಿ. ಆಚೀಚೆ ಹೋಗುವುದಿಲ್ಲ. ಹಾಗೆ ಕೆಲಸ ಮಡಿದ್ದರಿಂದಲೇ ನನಗೆ ಉತ್ತಮ ಫಲಿತಾಂಶಗಳು ಬಂದಿದ್ದು. ಕಾನೂನಾತ್ಮಕವಾಗಿದ್ದರೆ ಮಾತ್ರವೇ ಕೆಲಸ ಮಾಡುತ್ತೇನೆ ಅಷ್ಟೆ. ಜನರ ನಿರೀಕ್ಷೆ ಭರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.  ಇಲಾಖೆಯ ಕೆಲಸ ಮಾಡುತ್ತೇನೆ ಅಷ್ಟೆ.

ಪ್ರ

ಬಳ್ಳಾರಿ ಟ್ರಾಫಿಕ್‌ ಸಮಸ್ಯೆಗೆ ನಿಮ್ಮ ಬಳಿ ಪರಿಹಾರ ಇದೆಯೇ? 

ನಗರದ ಟ್ರಾಫಿಕ್‌ ಸ್ಥಿತಿಗತಿ ಅವಲೋಕನ ಮಾಡುತ್ತಿದ್ದೇನೆ. ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲು ಸಿದ್ಧತೆ ಮಾಡಿದ್ದೇವೆ. ಇದಕ್ಕೆ ಒಂದು ಕಂಟ್ರೋಲ್‌ ರೂಂ ಆರಂಭಿಸುವ ಚಿಂತನೆ ಇದೆ. ಟ್ರಾಫಿಕ್‌ಗೆ ಪೊಲೀಸರು ಮಾತ್ರವೇ ಪರಿಹಾರ ಹುಡುಕಲಾಗದು. ಬಳ್ಳಾರಿ ನಗರದಲ್ಲಿ ರಸ್ತೆಗಳ ವ್ಯವಸ್ಥೆ ಸರಿ ಇಲ್ಲದಿರುವುದು, ಗುಂಡಿಗಳು ಬಿದ್ದಿರುವುದೂ ಟ್ರಾಫಿಕ್‌ಗೆ ಮೂಲ ಕಾರಣ. ಸ್ಥಳೀಯಾಡಳಿತವೂ ನಮ್ಮೊಂದಿಗೆ ಕೈಜೋಡಿಸಬೇಕು. 

ಪ್ರ

 ಇಲಾಖೆಯಲ್ಲಿ ನಿಮಗೆ ಬೆಂಬಲ ಹೇಗಿದೆ?

ನಾನು ಸಭೆ ಮಾಡುವಾಗ ಎಲ್ಲ ಅಧಿಕಾರಿಗಳನ್ನು ಕರೆದೇ ಮಾಡಿದ್ದೇನೆ. ಎಲ್ಲರನ್ನು ಒಟ್ಟಿಗಿಟ್ಟುಕೊಂಡೇ ಸೂಚನೆಗಳನ್ನು ನೀಡಿದ್ದೇನೆ. ದಂಧೆ ಮಟ್ಟಹಾಕಿ ಎಂದು ಹೇಳಿದಾಗ ಅಲ್ಲಿ ಎಲ್ಲ ಅಧಿಕಾರಿಗಳೂ ಇದ್ದರು. ನಾನು ನೀಡಿರುವ ಸಂದೇಶಗಳು ಸ್ಪಷ್ಟವಾಗಿವೆ. ಅವರ ಕಡೆಯಿಂದಲೂ ಸ್ಪಷ್ಟ ಸಂದೇಶಗಳು ನನಗೆ ಬರಬೇಕು. ಇಲಾಖೆ ಆದೇಶಗಳನ್ನು ಮೀರಿ ಕೆಲಸ ಮಾಡುವ ವರ್ತನೆಗಳು ನನಗೆ ಇಷ್ಟ ಆಗುವುದಿಲ್ಲ.  ಹಾಗೆ ಆಗಲು ನಾನು ಬಿಡುವುದೂ ಇಲ್ಲ. ಈ ವರೆಗೆ ಕೆಳ ಹಂತದ ಸಿಬ್ಬಂದಿಯಿಂದ ಸಹಕಾರ ಸಿಕ್ಕಿದೆ. ಹಾಗೇನಾದರೂ ಇದ್ದರೆ ನಿರ್ದಿಷ್ಟ ಕ್ರಮ ಕೈಗೊಳ್ಳಲು ನನಗೆ ಎಲ್ಲ ಅವಕಾಶಗಳೂ ಮುಕ್ತವಾಗಿವೆ. 

ಪ್ರ

ನಿಮ್ಮ ಮಗಳನ್ನು ಅಂಗನವಾಡಿಗೆ ಸೇರಿಸಿದ್ದರ ಬಗ್ಗೆ?

ನಾನು ಕೊಡಗಿನಲ್ಲಿ ಎಸ್‌ಪಿಯಾಗಿದ್ದಾಗ ಮಗಳನ್ನು ಅಂಗನವಾಡಿಗೆ ಹೌಕಿದ್ದು ಹೌದು. ನನ್ನ ಕಚೇರಿಯ ನೂರು ಮೀಟರ್‌ ದೂರದಲ್ಲಿ ಅಂಗನವಾಡಿ ಇತ್ತು. ಅಲ್ಲಿಗೆ ಸೇರಿಸಿದ್ದೆ. ನಾನು ಹೊರಗೆ ಹೋದಾಗಲೆಲ್ಲ ಆಕೆ ಕಾಣುತ್ತಿದ್ದಳು. ಆಕೆಯೂ ಅಲ್ಲಿನ ಪರಿಸರವನ್ನು ಆಸ್ವಾದಿಸಿದ್ದಳು. ಈಗ ಬೆಂಗಳೂರಿನಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಗಳನ್ನು ನಾನು ಅಂಗನವಾಡಿಗೆ ಸೇರಿಸಿದ ಬಳಿಕ ಹಲವು ಸರ್ಕಾರಿ ನೌಕರರೂ ಹಾಗೇ ಮಾಡಿದ್ದರು. ವ್ಯವಸ್ಥೆ ಮೇಲೆ ನಂಬಿಕೆ ತರಿಸುವ ಪ್ರಯತ್ನ ಅದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT