ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಚರ್ಚೆಯಾದ ಹೊಸಪೇಟೆ ನಗರಸಭೆ ಸಾಮಾನ್ಯ ಸಭೆ

ಎಲ್ಲ ವಾರ್ಡ್‌ಗಳಿಗೆ ಸಮಾನ ಅನುದಾನ
Last Updated 2 ಆಗಸ್ಟ್ 2018, 10:40 IST
ಅಕ್ಷರ ಗಾತ್ರ

ಹೊಸಪೇಟೆ: ಗುರುವಾರ ಇಲ್ಲಿ ಕರೆದಿದ್ದ ನಗರಸಭೆ ವಿಶೇಷ ಸಾಮಾನ್ಯ ಸಭೆ ಗುಂಪು ಚರ್ಚೆಗೆ ವೇದಿಕೆಯಾಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಮುಕ್ತವಾಗಿ ವಿಷಯಗಳನ್ನು ಚರ್ಚಿಸುವುದರ ಬದಲು ಹಂಗಾಮಿ ಅಧ್ಯಕ್ಷೆ ಸುಮಂಗಳಮ್ಮ ಹಾಗೂ ಪೌರಾಯುಕ್ತ ವಿ. ರಮೇಶ್‌ ಅವರು ಕುಳಿತಿದ್ದ ಮೇಜಿನ ಎದುರು ಗುಂಪು ಗುಂಪಾಗಿ ಸೇರಿ ಚರ್ಚೆ ನಡೆಸಿದರು. ಮತ್ತೆ ಕೆಲ ಸದಸ್ಯರು ಪತ್ರಿಕೆ ಓದುವುದರಲ್ಲಿ ಮಗ್ನರಾದರೆ, ಕೆಲವರು ಮೊಬೈಲ್‌ ನೋಡುವುದರಲ್ಲಿ ಮಗ್ನರಾಗಿದ್ದರು. ಮತ್ತೊಂದೆಡೆ ವಿವಿಧ ವಿಭಾಗದ ಅಧಿಕಾರಿಗಳು ಸುಸ್ತು ಹೊಡೆದು, ಹಣೆಯ ಮೇಲೆ ಕೈಗಳನ್ನು ಇಟ್ಟುಕೊಂಡು ಕುಳಿತಿದ್ದರು. ಗಂಭೀರವಾಗಿ ನಡೆಯಬೇಕಿದ್ದ ಸಭೆ ಘನತೆ ಕಳೆದುಕೊಂಡಿತ್ತು.

ಬೆಳಿಗ್ಗೆ 11ಕ್ಕೆ ಆರಂಭಗೊಂಡಿದ್ದ ಸಭೆ ಮಧ್ಯಾಹ್ನ ಎರಡು ಗಂಟೆಯ ವರೆಗೆ ಹೀಗೆಯೇ ನಡೆಯಿತು. ಊಟದ ನಂತರ ಮಧ್ಯಾಹ್ನ 3ಕ್ಕೆ ಮತ್ತೆ ಸೇರಿದ ಸಭೆಯಲ್ಲಿ 2018–19ನೇ ಸಾಲಿನ 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ಪರಿಷ್ಕೃತ ಕ್ರಿಯಾ ಯೋಜನೆ ತಯಾರಿಸುವ ಕುರಿತು ಚರ್ಚೆ ನಡೆಯಿತು. 14ನೇ ಹಣಕಾಸು ಯೋಜನೆ, ಎಸ್‌.ಎಫ್‌.ಸಿ. ಯೋಜನೆಯ ಅಡಿಯಲ್ಲಿ ಎಲ್ಲ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಮಾನವಾಗಿ ಹಣ ಹಂಚಿಕೆ ಮಾಡುವ ಕುರಿತು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು.

ಬೆಳಿಗ್ಗೆ ಇದೇ ವಿಷಯದ ಕುರಿತಾಗಿ ಚರ್ಚೆ ಆರಂಭಗೊಂಡಿತು. ಸಭೆ ಉದ್ದೇಶಿಸಿ ಮಾತನಾಡಿದ ಸದಸ್ಯ ಕೆ. ಮಲ್ಲಪ್ಪ, ‘14ನೇ ಹಣಕಾಸು ಯೋಜನೆ ಹಾಗೂ ಎಸ್‌.ಎಫ್‌.ಸಿ. ಅಡಿ 12 ವಾರ್ಡ್‌ಗಳಿಗೆ ₹17 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ಇನ್ನುಳಿದ ವಾರ್ಡ್‌ಗಳಿಗೆ ₹8 ಲಕ್ಷ ಮೀಸಲಿಡಲಾಗಿದೆ. ಇದು ತಾರತಮ್ಯ. ಎಲ್ಲ ವಾರ್ಡುಗಳಿಗೆ ಸಮಾನವಾಗಿ ಅನುದಾನ ಹಂಚಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಸದಸ್ಯರಾದ ಗುಡಿಗಂಟಿ ಮಲ್ಲಿಕಾರ್ಜುನ, ಚಿದಾನಂದಪ್ಪ, ಬಡಾವಲಿ, ಗುಜ್ಜಲ್‌ ನಿಂಗಪ್ಪ, ನೂರ್‌ ಜಹಾನ್‌, ಚಂದ್ರಕಾಂತ ಕಾಮತ್‌ ಸೇರಿದಂತೆ ಇತರೆ ದನಿಗೂಡಿಸಿ ಬೆಂಬಲ ಸೂಚಿಸಿದರು. ‘ಸರ್ಕಾರದ ನಿರ್ದೇಶನದ ಪ್ರಕಾರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಾರ್ಡ್‌ಗಳಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ’ ಎಂದು ಪೌರಾಯುಕ್ತ ವಿ. ರಮೇಶ್‌ ಹೇಳಿದರು. ‘ಇಲ್ಲ ಸರ್ಕಾರಕ್ಕಿಂತ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಮುಖ್ಯವಾದುದು. ಅದನ್ನು ಪರಿಷ್ಕರಿಸಿ ಹೊಸದಾಗಿ ಅನುದಾನ ಹಂಚಿಕೆ ಮಾಡಬೇಕು’ ಎಂದು ಸದಸ್ಯರು ಪಟ್ಟು ಹಿಡಿದರು. ಪೌರಯುಕ್ತರು, ಸರ್ಕಾರದ ಆದೇಶ ಪ್ರತಿ ಹಾಗೂ ಕಡತಗಳನ್ನು ಸಭೆಗೆ ತರಿಸಿದರು. ಈ ವೇಳೆ ಸದಸ್ಯರು ಗುಂಪು ಗುಂಪಾಗಿ ಹೋಗಿ ಅವರೊಂದಿಗೆ ಚರ್ಚೆ ನಡೆಸಿದರು. ಇದರಿಂದಾಗಿ ಸಭೆ ನಡೆಯಲಿಲ್ಲ.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ರಸ್ತೆ ಸುಧಾರಣೆಗೆ ಮೀಸಲಿಟ್ಟಿದ್ದ ₹2.6 ಕೋಟಿ ಹಣ ನಗರಸಭೆಗೆ ಕೊಡಲಾಗಿದೆ. ಈ ಹಣ ಹಾಗೂ ಬೇರೆ ಅನುದಾನವನ್ನು ಸರಿದೂಗಿಸಿಕೊಂಡು ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಿಕೆ ಮಾಡುವ ಕುರಿತು ಸಭೆ ತೀರ್ಮಾನಕ್ಕೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT