ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಕೋಟಿ, ಕೋಟಿ ನುಂಗುತ್ತಿದೆ ಮಟ್ಕಾ ದಂಧೆ!

ಬಳ್ಳಾರಿಯ ಬೀದಿ, ಬೀದಿಗಳಲ್ಲೂ ಇದ್ದಾರೆ ಮಟ್ಕಾ ಬುಕ್ಕಿಗಳು
Last Updated 17 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲೆಗೆ ಪೊಲೀಸ್‌ ವರಿಷ್ಠಾಧಿಕಾರಿ ಆಗಿ ಬಂದಿರುವ ರಂಜಿತ್‌ ಕುಮಾರ್‌ ಬಂಡಾರು ಅ. 4ರಂದು ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿದರು. ಬಂಡಾರು ಅಧಿಕಾರ ವಹಿಸಿಕೊಂಡಿದ್ದು ಅ.3ಕ್ಕೆ. ಮರು ದಿನವೇ ಈ ದಾಳಿ ನಡೆಯಿತು.

’ಬ್ರೂಸ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ನಡೆಯುತಿತ್ತು. ನಾನೇ ಖುದ್ದು ದಾಳಿ ಮಾಡಿದ್ದೇನೆ. ಆಮೇಲೆ ಮಾಹಿತಿ ಹಂಚಿಕೊಳ್ಳುತ್ತೇನೆ‘ ಎಂದು ’ಪ್ರಜಾವಾಣಿ‘ಗೆ ತಿಳಿಸಿದ್ದರು. ಅವರು ಮಾಹಿತಿ ಕೊಡಲಿಲ್ಲ. ಅದು ಬೇರೆ ಮಾತು.

ಯಾವುದೇ ಪೊಲೀಸ್‌ ಅಧಿಕಾರಿ ಹೊಸದಾಗಿ ಅಧಿಕಾರ ವಹಿಸಿಕೊಂಡಾಗ ಅವರ ಕಾರ್ಯಶೈಲಿ ಕುರಿತು ಸ್ಪಷ್ಟ ಸಂದೇಶ ರವಾನೆಯಾಗುತ್ತದೆ. ಹೊಂದಾಣಿಕೆ ಮನೋಭಾವದವರೋ ಇಲ್ಲವೆ ನಿಷ್ಠುರ ಅಧಿಕಾರಿಯೋ ಎಂಬ ಸುಳಿವು ಪತ್ರಿಕಾಗೋಷ್ಠಿ ಮೂಲಕ ಅಥವಾ ಅಧೀನ ಅಧಿಕಾರಿಗಳ ಮುಖಾಂತರ ರವಾನಿಸುತ್ತಾರೆ.

ಬೆಂಗಳೂರು ನಗರದ ಪೊಲೀಸ್‌ ಕಮಿಷನರ್‌ ಆಗಿ ಅಥವಾ ರಾಜ್ಯದ ಪೊಲೀಸ್‌ ಮಹಾ ನಿರೀಕ್ಷಕ ಮತ್ತು ಮಹಾ ನಿರ್ದೇಶಕರಾಗಿ (ಐಜಿ & ಡಿಜಿ) ಹೊಸದಾಗಿ ಅಧಿಕಾರ ತೆಗೆದುಕೊಳ್ಳುವ ಅಧಿಕಾರಿಗಳು ಪತ್ರಿಕಾಗೋಷ್ಠಿ ಕರೆದು, ತಾವು ಹೇಗೆಂದು ಹೇಳಿಕೊಳ್ಳುವ ಸಂಪ್ರದಾಯವಿದೆ. ಎಲ್ಲ ಜಿಲ್ಲೆಗಳಲ್ಲೂ ಇದ್ದಂತಿಲ್ಲ.

ಪೊಲೀಸ್‌ ಅಧಿಕಾರಿಗಳ ಹೇಳಿಕೆಗಳ ಮೇಲೆ ಡ್ಯಾನ್ಸ್‌ ಬಾರ್‌, ಕ್ಲಬ್‌, ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌, ರೌಡಿಸಂ ಮತ್ತಿತರ ಅಕ್ರಮ ಚಟುವಟಿಕೆಗಳ ಭವಿಷ್ಯ ನಿಂತಿರುತ್ತದೆ. ನನಗಿನ್ನು ಚೆನ್ನಾಗಿ ನೆನಪಿದೆ. 90ರ ದಶಕದಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಆಗಿದ್ದ ಪಿ. ಕೋದಂಡ ರಾಮಯ್ಯ ಅಧಿಕಾರ ತೆಗೆದುಕೊಂಡ ಮೊದಲ ದಿನ ಒಂದು ಹೇಳಿಕೆ ಕೊಟ್ಟಿದ್ದರು. ’ಒಂದು ಏರಿಯಾದಲ್ಲಿ ಇನ್‌ಸ್ಪೆಕ್ಟರ್‌ ಇರಬೇಕು ಇಲ್ಲವೇ ರೌಡಿಗಳಿರಬೇಕು. ಏಕಕಾಲಕ್ಕೆ ಇಬ್ಬರೂ ಇದ್ದಾರೆಂದರೆ ಇನ್‌ಸ್ಪೆಕ್ಟರ್‌ ಬಳಿ ಏನೋ ಲೋಪವಿದೆ ಎಂದರ್ಥ‘ ಎಂದಿದ್ದರು. ಈ ಮಾತು ಅಕ್ಷರಶಃ ನಿಜ. ಪ್ರತಿಯೊಬ್ಬ ಇನ್‌ಸ್ಪೆಕ್ಟರ್‌ಗೆ ತನ್ನ ಏರಿಯಾದಲ್ಲಿ ನಡೆಯುವ ಎಲ್ಲ ದಂಧೆಗಳ ಬಗ್ಗೆ ಮಾಹಿತಿ ಇರುತ್ತದೆ. ಅವರದೇ ಮಾಹಿತಿದಾರರನ್ನು ಇಟ್ಟುಕೊಂಡಿರುತ್ತಾರೆ.

ಬಳ್ಳಾರಿಯ ಮಟ್ಕಾ ದಂಧೆ ಬಗ್ಗೆ ಬರೆಯಲು ಇಷ್ಟು ಪೀಠಿಕೆ ಹಾಕಬೇಕಾಯಿತು. ಬಳ್ಳಾರಿಯಲ್ಲಿ ಏನಿಲ್ಲಾ, ಏನುಂಟು ಎಂದು ಕಣ್ಣು ಹಾಯಿಸಿದರೆ ಸಾಕು ಅಕ್ರಮ ದಂಧೆಗಳ ಸಾಗರವೇ ಅನಾವರಣವಾಗುತ್ತೆ. ಮಟ್ಕಾ ಇದೆ. ಕ್ರಿಕೆಟ್‌ ಬೆಟ್ಟಿಂಗ್‌ ಇದೆ. ಕ್ಲಬ್‌ಗಳು ಇಲ್ಲದಿದ್ದರೂ, ಊರ ಹೊರಗಿನ ತೋಟಗಳಲ್ಲಿ ಲಕ್ಷ ಲಕ್ಷ ಹಣ ಕಟ್ಟಿಕೊಂಡು ಜೂಜಾಡಿಸುವ ಅಡ್ಡೆಗಳಿವೆ. ಭೂಮಾಫಿಯಾ ಇದೆ. ಪಡಿತರ ಅಕ್ಕಿ ಕಾಳಸಂತೆಗೆ ಸಾಗಿಸುವ ಖದೀಮರ ದಂಡಿದೆ...

ಪ್ರತಿದಿನ ಲಕ್ಷ ಲಕ್ಷ ಹಣವನ್ನು ಮಟ್ಕಾಕ್ಕೆ ಸುರಿಯಲಾಗುತ್ತಿದೆ. ಚಟಕ್ಕೆ ಬಿದ್ದವರು ಮನೆ, ಮಠ ಮಾರಿಕೊಂಡು ಬೀದಿ ಪಾಲಾಗಿದ್ದಾರೆ. ಆಗುತ್ತಿದ್ದಾರೆ. ಆಟ ನಿಯಂತ್ರಿಸುವ ಬುಕ್ಕಿಗಳು ಪ್ರತಿಯೊಂದು ಊರಲ್ಲೂ ಇದ್ದಾರೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ, ರೂಪನಗುಡಿ, ಮೋಕ ಹೀಗೆ ಎಲ್ಲಿಲ್ಲ. ಪೊಲೀಸರು, ರಾಜಕಾರಣಿಗಳ ಕೃಪಾಕಟಾಕ್ಷ ಇಲ್ಲದೆ ನಡೆಯುವುದೇ? ಇದನ್ನು ಜನರ ಊಹೆಗೇ ಬಿಡುವುದು ಸೂಕ್ತ.

2021–22ರಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಮಾಡಿ ಜಪ್ತು ಮಾಡಿದ ಹಣ ಹತ್ತಿರತ್ತಿರ ಸುಮಾರು ₹ 5ಕೋಟಿ. ವಶಪಡಿಸಿಕೊಂಡಿದ್ದೇ ₹ 5ಕೋಟಿ. ಇನ್ನು ಕಣ್ಣಿಗೆ ಕಾಣದಂತೆ ಎಷ್ಟು ಹಣ ಹೋಗಿರಬಹುದು? ನಿರ್ದಿಷ್ಟ ಸ್ಥಳದಲ್ಲಿ ಕೂತು ಮಟ್ಕಾ ಬರೆಯುವವರು ವಿರಳ. ಇದೂ ಈಗ ಹೈಟೆಕ್‌ ದಂಧೆ. ಎಲ್ಲವೂ ಆನ್‌ಲೈನ್‌ ವ್ಯವಹಾರ. ವಾಟ್ಸ್‌ಆ್ಯಪ್‌, ಮೆಸೇಜ್‌ಗಳಲ್ಲಿ ನಂಬರ್‌ ಬರೆಯಲಾಗುತ್ತೆ. ಪೇಮೆಂಟ್‌ ಕೂಡಾ ಆನ್‌ಲೈನ್‌! ದೊಡ್ಡ ಮೊತ್ತವಾದರೆ ಹವಾಲಾ ಮಾರ್ಗ!!

₹1ಕ್ಕೆ ₹90; ಹೆಚ್ಚಿನ ಹಣವೇ ಮಟ್ಕಾ ಆಕರ್ಷಣೆ
ಹೊಸಪೇಟೆ (ವಿಜಯನಗರ)
: ₹1ಕ್ಕೆ ₹90 ಗೆಲ್ಲಬಹುದು. ಈ ರೀತಿ ಹಲವು ವರ್ಗಗಳನ್ನು ಮಾಡಲಾಗಿರುತ್ತದೆ. ಕೆಲವೊಮ್ಮೆ ಮೂರ್ನಾಲ್ಕು ಪಟ್ಟು ಹೆಚ್ಚಾಗಬಹುದು. ಹೀಗೆ ಭಾರಿ ಹಣದ ವ್ಯವಹಾರ ನಡೆಯುವುದರಿಂದ ಮಟ್ಕಾದತ್ತ ಹೆಚ್ಚಿನವರು ಆಕರ್ಷಣೆಗೊಂಡು ಅದರ ದಾಸರಾಗುತ್ತಿದ್ದಾರೆ.

ಅದರಲ್ಲೂ ಇದರಲ್ಲಿ ದುಡಿಯುವ ವರ್ಗದವರೇ ಹೆಚ್ಚಾಗಿ ಸಿಲುಕಿಕೊಂಡಿರುತ್ತಾರೆ. ನಿತ್ಯ ಕೂಲಿ ಮಾಡಿದರಷ್ಟೇ ಅವರ ಮನೆ ಮಂದಿಯ ಹೊಟ್ಟೆ ತುಂಬುತ್ತದೆ. ಆದರೆ, ಮಟ್ಕಾ ಆಡಿ ಹೆಚ್ಚಿನ ಹಣ ಗಳಿಸಿ ಮನೆಯ ಬಡತನ ನೀಗಿಸಬಹುದು ಎಂಬ ಭ್ರಮೆಯಲ್ಲಿ ಅದರ ದಾಸರಾಗುತ್ತಿದ್ದಾರೆ. ಅದರಿಂದ ಅವರ ಇರುವ ಸಣ್ಣಪುಟ್ಟ ಆಸ್ತಿಯೂ ಮಾರಾಟ ಮಾಡಿ ಅವರ ಕುಟುಂಬಗಳೇ ನಾಶವಾದ ಉದಾಹರಣೆಗಳಿವೆ. ಕೆಲವರು ಅದರಿಂದಲೇ ಐಷಾರಾಮಿ ಜೀವನ ನಡೆಸುವವರೂ ಇದ್ದಾರೆ. ಆದರೆ, ಈ ಸಂಖ್ಯೆ ತೀರ ಕಡಿಮೆ.

ಈ ಹಿಂದೆ ನಗರದ ಹಲವು ಕಡೆಗಳಲ್ಲಿ ಬಹಿರಂಗವಾಗಿಯೇ ಮಟ್ಕಾ ಚೀಟಿ ಬರೆಯಲಾಗುತ್ತಿತ್ತು. ಅನಂತರ ಅದರ ವಿರುದ್ಧ ಕೆಲ ಸಂಘ ಸಂಸ್ಥೆಗಳು ಧ್ವನಿ ಎತ್ತಿದ್ದರಿಂದ ಅದನ್ನು ನಿಯಂತ್ರಿಸಲಾಯಿತು. ಈಗ ಅದರ ಕೆಲಸಗಳೆಲ್ಲ ಮೊಬೈಲ್‌ನಲ್ಲೇ ನಡೆಯುತ್ತಿವೆ. ಮಟ್ಕಾ ಆಡುವವರಿಗೆ ಅವರ ನೇರ ಮೊಬೈಲ್‌ ಸಂಖ್ಯೆಗೆ ಅಥವಾ ಖುದ್ದು ಅವರ ಮನೆಗೆ ಹೋಗಿ ಹಣ ತಲುಪಿಸಲಾಗುತ್ತದೆ. ಎರಡೂ ಕಡೆಯವರು ಗೌಪ್ಯವಾಗಿ ವ್ಯವಹರಿಸುವುದರಿಂದ ಮತ್ತೊಬ್ಬರಿಗೆ ತಿಳಿಯುವುದಿಲ್ಲ. ನಗರದ ಎಸ್‌.ಆರ್‌. ನಗರ, ಚಲುವಾದಿ ಕೇರಿ ಸೇರಿದಂತೆ ಇತರೆ ಕಡೆಗಳಲ್ಲಿ ಈಗಲೂ ಎಗ್ಗಿಲ್ಲದೆ ಮಟ್ಕಾ, ಬೆಟ್ಟಿಂಗ್‌ ದಂಧೆ ಜೋರಾಗಿ ನಡೆಯುತ್ತಿದೆ ಎಂಬ ಆರೋಪಗಳಿವೆ.

ಈ ಹಿಂದೆ ನೇರವಾಗಿ ಪೊಲೀಸರೇ ಮಟ್ಕಾ ಆಡುವವರ ಬೆನ್ನಿಗಿದ್ದರು. ಆದರೆ, ಡಾ. ಅರುಣ್‌ ಕೆ. ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದ ನಂತರ ಅದರಲ್ಲಿದ್ದವರೆಲ್ಲ ಈಗ ದೂರ ಸರಿದಿದ್ದಾರೆ. ಆದರೆ, ಅಪರೋಕ್ಷವಾಗಿ ಅದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

‘ಮೊಬೈಲ್‌ ಬಂದ ನಂತರ ಮಟ್ಕಾ ವ್ಯವಹಾರ ಕದ್ದು ಮುಚ್ಚಿ ನಡೆಯುತ್ತಿದೆ. ಯಾರೂ ಕೂಡ ಅದರ ಬಗ್ಗೆ ಬಾಯಿ ಬಿಡುವುದಿಲ್ಲ. ಆದರೆ, ಬಡವರು ಹಣದಾಸೆಗೆ ಅದನ್ನು ಆಡುತ್ತಾರೆ. ದುಡಿದದ್ದೆಲ್ಲ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕುವ ಅಗತ್ಯವಿದೆ’ ಎನ್ನುತ್ತಾರೆ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ.

ಲೈನ್‌ ಬಜಾರ್, ಟೈಮ್‌ ಬಜಾರ್‌...
ಬಳ್ಳಾರಿಯ ಮಟ್ಕಾ ಬುಕ್ಕಿಗಳು ಟೈಮ್‌ ಬಜಾರ್, ಡಿ ಮಿಲನ್‌, ಡಿ ಕಲ್ಯಾಣಿ, ನೈಟ್‌ ಮಿಲನ್‌, ನೈಟ್‌ ಕಲ್ಯಾಣಿ, ಮೈನ್‌ ಬಜಾರ್‌ ಆಟಗಳನ್ನು ಪ್ರಮುಖವಾಗಿ ಆಡಿಸುತ್ತಾರೆ. ನಂಬರ್‌ ಬರೆಯುವ ಬುಕ್ಕಿಗಳಿಗೆ ಸಾವಿರಕ್ಕೆ ನೂರು ರೂಪಾಯಿ ಕಮಿಷನ್‌ ಉಂಟು. ಈ ದಂಧೆಗಳನ್ನು ನಿಯಂತ್ರಿಸುವವರು ಪುಣೆ, ಗೋವಾ ಮತ್ತು ಮುಂಬೈನಲ್ಲಿರುತ್ತಾರೆ.

ಈ ದಂಧೆ ನಡೆಯುವುದು ವಿಶ್ವಾಸದ ಮೇಲೆ. ಹಣ ಗೆದ್ದವರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುತ್ತಾರಂತೆ. ಕೆಲವು ತಿಂಗಳ ಹಿಂದೆ ದಂಧೆಗೆ ಕಡಿವಾಣ ಹಾಕಲು ಕೆಲವರನ್ನು ಗಡಿಪಾರು ಮಾಡಲಾಯಿತು. ಆದರೆ, ಅವರೆಲ್ಲರೂ ಅಮಾಯಕರು ಎಂಬ ಮಾತು ಪೊಲೀಸ್‌ ವಲಯದಲ್ಲೇ ಕೇಳಿಬರುತ್ತಿದೆ. ನಿಜವಾದ ಬುಕ್ಕಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.

ಹೊಸದಾಗಿ ಬಂದಿರುವ ರಂಜಿತ್‌ ಕುಮಾರ್‌ ಬಂಡಾರು ಅಕ್ರಮ ದಂಧೆಗಳನ್ನು ನಿಲ್ಲಿಸುವಂತೆ ತಮ್ಮ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರಂತೆ. 2018 ನೇ ಐಪಿಎಸ್‌ ಬ್ಯಾಚ್ ಅಧಿಕಾರಿ ಆಗಿರುವ ಬಂಡಾರುಗೆ ಇದು ಮೊದಲ ಸ್ವತಂತ್ರ ಹುದ್ದೆ. ಅವರ ಖಡಕ್‌ ಸಂದೇಶ ಜಾರಿಯಾಗುವುದೇ ಅಥವಾ ಪಟ್ಟಭದ್ರರ ಹಿಡಿತಕ್ಕೆ ಅವರೂ ಸಿಲುಕುವರೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT