ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಪರಾಗಸ್ಪರ್ಶದಿಂದ ಬೆಳೆದ ಸೀತಾಫಲ ತೋಟ

Published 17 ನವೆಂಬರ್ 2023, 4:31 IST
Last Updated 17 ನವೆಂಬರ್ 2023, 4:31 IST
ಅಕ್ಷರ ಗಾತ್ರ

ಕುರುಗೋಡು: ಪಟ್ಟಣದ ಬೈಲೂರು ರಸ್ತೆಯಲ್ಲಿ 8 ಎಕರೆ ಭೂಮಿಯಲ್ಲಿ ವಿವಿಧ ಬಗೆಯ ಹಣ್ಣುಗಳ ತೋಟ ಅಭಿವೃದ್ಧಿ ಪಡಿಸಿರುವ ಟೆಕ್ಸ್‌ಟೈಲ್ಸ್ ಎಂಜಿನಿಯರ್ ಮಧುಸೂಧನ ರೆಡ್ಡಿ ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಲಾಭದತ್ತ ನಡೆದಿದ್ದಾರೆ.

ಹೈಬ್ರಿಡ್ ತಳಿಯ ಸೀತಾಫಲದ ಜತೆಗೆ ದಾಳಿಂಬೆ ಬೆಳೆಸಿ ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಹವಾಮಾನಕ್ಕೆ ಹೊಂದಾಣಿಕೆಯಾಗುವಂತೆ ಸ್ವಯಂ ಸಂಶೋಧನೆಯಿಂದ ಅಕಾಲಿಕ ಹವಾಮಾನಕ್ಕೆ ಅನುಗುಣವಾಗಿ ಫಸಲು ಪಡೆದಿದ್ದಕ್ಕೆ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರಿನ ಹೇಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ 20 ವರ್ಷಗಳ ಸುದೀರ್ಘ ಸಂಶೋಧನೆಯ ಫಲವಾಗಿ ಅಭಿವೃದ್ಧಿ ಪಡಿಸಿರುವ ‘ಅರ್ಕಸಹನಾ’ ತಳಿಯ ಸೀತಾಫಲದ ಸಸಿಗಳನ್ನು ಐದು ವರ್ಷಗಳ ಹಿಂದೆ ₹ 60ಕ್ಕೆ 1ರಂತೆ ಖರೀದಿಸಿ ಎಕರೆಗೆ 180 ರಂತೆ ಎರಡು ಎಕರೆಗಳಲ್ಲಿ 15-15 ಅಡಿಗಳ ಅಂತರದಲ್ಲಿ ಒಟ್ಟು 360 ಸಸಿ ನಾಟಿ ಮಾಡಿದ್ದಾರೆ.

ನಾಟಿ ಮಾಡಿ ಮೂರು ವರ್ಷಗಳ ನಂತರ ಇಳುವರಿ ಆರಂಭಗೊಂಡಿತು. ಒಂದು ಬಾರಿ ನಾಟಿ ಮಾಡಿದರೆ ಕನಿಷ್ಠ 20 ರಿಂದ 25 ವರ್ಷಗಳವರೆಗೆ ಬೆಳೆ ಬರುವುದು ಸೀತಾಫಲದ ವಿಶೇಷ.

ಸಸಿ ನಾಟಿ ಮಾಡಿ ಮೂರು ವರ್ಷಗಳವರೆಗೆ ಬೆಳೆಯ ಮಧ್ಯದಲ್ಲಿ ಹೆಸರು, ಅಲಸಂದಿ, ಶೇಂಗಾ ಬೆಳೆದು ಆದಾಯ ಪಡೆದು ನಿರ್ವಹಣಾ ವೆಚ್ಚವನ್ನು ಭರಿಸಬಹುದು. ವರ್ಷದಲ್ಲಿ ಒಂದು ಬೆಳೆ ಬಂದರೂ ಬೇರೆ ಬೆಳೆಗಳಿಗೆ ಹೋಲಿಸಿದರೆ ಸೀತಾಫಲಕ್ಕೆ ಕೀಟ ಮತ್ತು ರೋಗ ಬಾಧೆ ಕಡಿಮೆ.

ಕ್ರಿಮಿನಾಶಕ ರಸಗೊಬ್ಬರ ಹೆಚ್ಚು ಬಳಕೆ ಮಾಡದೇ ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಪರಿಣಾಮವಾಗಿ ಪ್ರತಿ ಗಿಡದಲ್ಲಿ 80 ರಿಂದ 120 ಹಣ್ಣು ಬಿಡುತ್ತಿವೆ.

ಸೀತಾಫಲದಲ್ಲಿ ಕಡಿಮೆ ಬೀಜ, ಹೆಚ್ಚಿನ ಪ್ರಮಾಣದ ತಿರುಳು ಮತ್ತು ರುಚಿ ಇರುವುದರಿಂದ ಮಾರುಕಟ್ಟೆಯಲ್ಲಿ ಗರಿಷ್ಠ 1 ಕೆ.ಜಿಗೆ ₹ 140 ಬೆಲೆ ದೊರೆಯುತ್ತದೆ.

ಮೊದಲ ವರ್ಷ ಪ್ರತಿ ಎಕರೆಗೆ ಎರಡರಿಂದ ಮೂರು ಟನ್ ಇಳುವರಿ ದೊರೆತಿತ್ತು. ಈ ವರ್ಷ ಬೆಳೆ ಉತ್ತಮವಾಗಿದ್ದು, ಹೆಚ್ಚು ಇಳಿವರಿ ನಿರೀಕ್ಷೆಯಲ್ಲಿದ್ದೇನೆ ಎಂದು ರೈತ ಮಧುಸೂಧನ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಚ್ಛಂದವಾಗಿ ಬೆಳೆದು ನಿಂತಿರುವ ತೋಟ ನೋಡುಗರನ್ನು ಆಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ವಿಶೇಷ ಕೃಷಿಕರಲ್ಲಿ ಒಬ್ಬರಾದ ಮಧುಸೂಧನ ರೆಡ್ಡಿ ಅವರ ಸಮಗ್ರ ಕೃಷಿ ಪದ್ಧತಿ ಅನುಕರಣೀಯವಾದುದು. ಮೂಲವೃತ್ತಿಯಲ್ಲಿ ಟೆಕ್ಸ್‌ಟೈಲ್‌ ಎಂಜಿನಿಯರ್ ಆಗಿದ್ದರೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಇತರ ಯುವಕರಿಗೆ ಮಾದರಿಯಾಗಿದ್ದಾರೆ ಎಂಬುದು ತೋಟಗಾರಿಕೆ ಹಿರಿಯ ಉಪ ನಿರ್ದೇಶಕ ಸಂತೋಷ ಸಪ್ಪಂಡಿ ಅಭಿಪ್ರಾಯಪಟ್ಟಿದ್ದಾರೆ.

ಸ್ವಚ್ಛಂದವಾಗಿ ಬೆಳೆದಿರುವ ಅರ್ಕಸಹನಾ ತಳಿ ಸೀತಾಫಲ ಬೆಳೆ
ಸ್ವಚ್ಛಂದವಾಗಿ ಬೆಳೆದಿರುವ ಅರ್ಕಸಹನಾ ತಳಿ ಸೀತಾಫಲ ಬೆಳೆ
ಬದಲಿ ಋತುಮಾನದಲ್ಲಿ ಸೀತಾಫಲ ಹಣ್ಣು ಕಟಾವಿಗೆ ಬಂದರೆ ಉತ್ತಮ ಬೆಲೆ ದೊರೆತು ಅಧಿಕ ಲಾಭಗಳಿಸಬಹುದು
-ಮಧುಸೂಧನ ರೆಡ್ಡಿ ಕೃಷಿಕ

ಜನರಿಯಲ್ಲಿ ಬರುವ ಹಣ್ಣಿಗೆ ಬೆಲೆ ಹೆಚ್ಚು

ನೈಸರ್ಗಿಕ ಮತ್ತು ತೋಟದಲ್ಲಿ ಬೆಳೆದ ಸೀತಾಫಲ ಹಣ್ಣು ಸಾಮಾನ್ಯವಾಗಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಈ ಸಂದರ್ಭದಲ್ಲಿ ಬೆಲೆ ಕಡಿಮೆ ಇರುತ್ತದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಅರ್ಕಸಹನಾ ತಳಿಯ ಸೀತಾಫಲವನ್ನು ಬೆಳೆಯಲಾಗಿದೆ. ಜನವರಿ ತಿಂಗಳಲ್ಲಿ ಹಣ್ಣಿನ ಆವಕ ಕಡಿಮೆ ಇರುವುದರಿಂದ ಹೆಚ್ಚು ಬೆಲೆ ದೊರೆಯುತ್ತದೆ. ಜನವರಿಯಲ್ಲಿ ಹಣ್ಣು ದೊರೆಯುವಂತೆ ಕೃತಕ ಪರಾಗಸ್ಪರ್ಶ ಮಾಡಲು ಪ್ರತಿ 100 ಗಿಡಕ್ಕೆ 20 ಬಾಲನಾಗರಿ ಗಿಡ ಬೆಳೆಸಲಾಗಿದೆ. ಹಣ್ಣು 5 ದಿನಗಳವರೆಗೆ ಸಂಗ್ರಹ ಸಾಮರ್ಥ್ಯ ಹೊಂದಿದೆ. ದೂರದ ಬೆಂಗಳೂರು ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಬೆಳೆ ನಿರ್ವಹಣೆಗೆ ಮೊದಲ ವರ್ಷ ಪ್ರತಿ ಎಕರೆಗೆ ₹ 50 ಸಾವಿರ ವೆಚ್ಚ ಭರಿಸಬೇಕು. ನಂತರದ ವರ್ಷಗಳಲ್ಲಿ ₹30 ಸಾವಿರ ವೆಚ್ಚ ಬರುತ್ತದೆ. ವಾರ್ಷಿಕ ₹2.50 ಲಕ್ಷದವರೆಗೆ ಲಾಭ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT