ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರುವ ಕೊಲೆ ಆರೋಪಿ, ನಟ ದರ್ಶನ್‌ಗೆ ಗುರುವಾರ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಮತ್ತು ಸುಶಾಂತ್ ನಾಯ್ಡು ಭೇಟಿಯಾಗಿ, ಚರ್ಚಿಸಿದರು.
ಮಧ್ಯಾಹ್ನ 4ಕ್ಕೆ ಬಂದ ವಿಜಯಲಕ್ಷ್ಮಿ, ದಿನಕರ್ ಮತ್ತು ಸುಶಾಂತ್ ನಾಯ್ಡು ಅವರನ್ನು ತಪಾಸಣೆ ಮಾಡಿದ ಬಳಿಕ ಪೊಲೀಸರು 4.30ಕ್ಕೆ ಸಂದರ್ಶಕರ ಕೊಠಡಿಗೆ ಕಳುಹಿಸಿದರು.ದರ್ಶನ್‌ಗೂ ಕೂಡ ಅಲ್ಲಿಗೆ ಕರೆತರಲಾಯಿತು. ಅರ್ಧ ಗಂಟೆ ಚರ್ಚೆ ಬಳಿಕ ಸಂಜೆ 5ಕ್ಕೆ ದರ್ಶನ್ ಮತ್ತೆ ಜೈಲಿಗೆ ಮರಳುವಾಗ ಅವರ ಕೈಯಲ್ಲಿ ಬಟ್ಟೆ, ಆಹಾರ ಪದಾರ್ಥಗಳ ಚೀಲವಿತ್ತು.
5.30ರ ಸಮಾರಿಗೆ, ಕೆಲ ದಾಖಲೆ ಪತ್ರಗಳನ್ನು ಹಿಡಿದ ವಿಜಯಲಕ್ಷ್ಮೀ ಜೈಲಿನಿಂದ ಹೊರ ಬಂದರು. ಜೈಲಿಂದ ಹೊರ ಬಂದವರೇ ಕಾರಿನಲ್ಲಿ ಕೂತು ಹೊರಟರು. ಸುದ್ದಿಗಾರರ ಜೊತೆ ಮಾತನಾಡಲು ನಿರಾಕರಿಸಿದರು. ದರ್ಶನ್ ಕುಟುಂಬಸ್ಥರು ಭೇಟಿ ವಿಚಾರ ಮೊದಲೇ ತಿಳಿದಿದ್ದ ಅಭಿಮಾನಿಗಳು, ಜೈಲಿನ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
‘ಈ ಮಧ್ಯೆ ನೋಟರಿಯೊಬ್ಬರು ಜೈಲಿಗೆ ತೆರಳಿದರು. ದರ್ಶನ್ ತಮ್ಮ ಜಾಮೀನು ಅರ್ಜಿಯ ವಕಾಲತಿಗೆ ನೋಟರಿ ಸಮ್ಮುಖದಲ್ಲಿ ಸಹಿ ಹಾಕಿದರು’ ಎಂದು ಮೂಲಗಳು ಹೇಳಿವೆ. ದರ್ಶನ್‌ಗೆ ಇನ್ನೂ ಟಿವಿ ಒದಗಿಸಲಾಗಿಲ್ಲ.
ನಾನು ಮದುವೆಯಾಗಲು ಸಿದ್ಧ
ಬೆಂಗಳೂರಿನ ಕೆಂಗೇರಿಯಿಂದ ಕಾರಾಗೃಹಕ್ಕೆ ಹಣ್ಣುಹಂಪಲು, ತಿಂಡಿ ತಿನಿಸು ಬಂದಿದ್ದ ಲಕ್ಷ್ಮಿ ಎಂಬುವರು ದರ್ಶನ್‌ಗೆ ನೋಡಲೇಬೇಕು ಎಂದು ಪಟ್ಟು ಹಿಡಿದರು. ಆದರೆ, ಇದಕ್ಕೆ ನಿರಾಕರಿಸಿದ ಪೊಲೀಸರು, ‘ಪತ್ನಿ ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಭೇಟಿಗೆ ಅವಕಾಶವಿದೆ’ ಎಂದರು.
‘ಪತ್ನಿಗೆ ಮಾತ್ರ ಅವಕಾಶ ನೀಡುವುದಿದ್ದರೆ, ದರ್ಶನ್‌ಗೆ ಮದುವೆಯಾಗಲು ಸಿದ್ಧ. ನನಗೆ ಅವಕಾಶ ಕೊಡಿ. ಪರಪ್ಪನ ಅಗ್ರಹಾರಕ್ಕೆ ಹೋಗಿದ್ದೆ. ಅಲ್ಲಿಯೂ ಭೇಟಿ ನಿರಾಕರಿಸಿದರು. ಇಲ್ಲಿಯೂ ತಡೆಯುತ್ತಿದ್ದೀರಿ. ಹಣ್ಣು, ತಿನಿಸು ಕೊಟ್ಟು ಹೋಗುತ್ತೇನೆ’ ಎಂದು ಅಂಗಲಾಚಿದರು. ಆದರೆ, ಕೊನೆಗೂ ಅವಕಾಶ ಕೊಡದೇ ಪೊಲೀಸರು ವಾಪಸ್ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.