ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ನೀರು ಕುಡಿದು ಸಾವು | ಯಾರಾದರೂ ಸತ್ತರಷ್ಟೇ ಸಭೆ ನಡೆಸುತ್ತೀರಾ?: ಸರವಣನ್‌

ಕಲುಷಿತ ನೀರು ಪೂರೈಕೆ; ವಿಶೇಷ ಸಭೆಯಲ್ಲಿ ನಗರಸಭೆ ಸದಸ್ಯರ ಅಸಮಾಧಾನ
Last Updated 18 ಜನವರಿ 2023, 13:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಯಾರಾದರೂ ಸಮಸ್ಯೆಯಿಂದ ಸತ್ತರಷ್ಟೇ ಸಭೆ ನಡೆಸುತ್ತೀರಾ? ಯಾರಾದರೂ ಸಾಯಬೇಕಾ?’

ನಗರಸಭೆಯಲ್ಲಿ ಬಿಜೆಪಿ ಸದಸ್ಯರಾದ ಮಂಜುನಾಥ್‌, ಸರವಣನ್‌ ಮೇಲಿನಂತೆ ಪ್ರಶ್ನಿಸಿದರು. ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಜ. 11ರಂದು ಮಹಿಳೆ ಮೃತಪಟ್ಟಿದ್ದರು. 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ವಿವಿಧ ವಾರ್ಡುಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚಿಸಲು ಬುಧವಾರ ನಗರಸಭೆ ವಿಶೇಷ ಸಭೆ ಕರೆಯಲಾಗಿತ್ತು.

‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಆದರೆ, ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್‌ ಸದಸ್ಯರಾದ ಗೌಸ್‌, ರಾಘವೇಂದ್ರ ವಿಷಯ ಪ್ರಸ್ತಾಪಿಸಿದರು. ಅದಕ್ಕೆ ದನಿಗೂಡಿಸಿ ಮಾತನಾಡಿದ ಸದಸ್ಯ ಮಂಜುನಾಥ, ಡ್ಯಾಂ ಇರುವ ನನ್ನ ವಾರ್ಡ್‌ನಲ್ಲೆ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಬೇರೆ ವಾರ್ಡ್‌ಗಳಲ್ಲೂ ಇದೇ ಸಮಸ್ಯೆ ಇದೆ. ಈ ಕುರಿತು ಸದಸ್ಯರು ಹಲವು ಸಲ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಒಬ್ಬರು ಸತ್ತ ನಂತರ ಸಭೆ ಕರೆಯಬೇಕಾ? ಈಗ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳನ್ನು ನೇಮಿಸುತ್ತೀರಾ? ಎಂದು ಪ್ರಶ್ನಿಸಿದರು.

ಇನ್ನೊಬ್ಬ ಸದಸ್ಯ ಸರವಣನ್‌, ನಮ್ಮ ವಾರ್ಡಿನಲ್ಲಿ ಚರಂಡಿ ಮಧ್ಯೆ ಹಾದು ಹೋಗಿರುವ ಪೈಪ್‌ಲೈನ್‌ನಿಂದ ಜನ ನೀರು ಕೊಂಡೊಯ್ಯುತ್ತಿದ್ದಾರೆ. ಯಾರಿಗಾದರೂ ಏನಾದರೂ ಸಮಸ್ಯೆಯಾದರೆ ನೀವೇ ಜವಾಬ್ದಾರರು ಎಂದು ಚಿತ್ರಗಳನ್ನು ಸಭೆಗೆ ತೋರಿಸಿದರು.

ಪಕ್ಷೇತರ ಸದಸ್ಯ ಎಚ್‌.ಎಲ್‌. ಸಂತೋಷ್‌ ಮಾತನಾಡಿ, ನನ್ನ ವಾರ್ಡ್‌ನಲ್ಲೇ ಮೊದಲ ಕೋವಿಡ್‌ ಪ್ರಕರಣ ಬಂದಿತ್ತು. ಕಲುಷಿತ ನೀರಿಗೆ ಜನ ಅನಾರೋಗ್ಯಕ್ಕೆ ಒಳಗಾಗಿದ್ದು ಕೂಡ ನನ್ನ ವಾರ್ಡ್‌ನಲ್ಲೆ ಮೊದಲು. ಈ ಕುರಿತು ಹಲವು ಸಲ ತಿಳಿಸಿದರೂ ಸಮಸ್ಯೆ ಬಗೆಹರಿಸಿಲ್ಲ. ಜನರಿಗೆ ಉತ್ತರ ಹೇಳಿ, ಹೇಳಿ ಸಾಕಾಗಿದೆ. ನನ್ನಮ್ಮ ಆಫೀಸರ್‌ ಆಗುವಂತೆ ನನಗೆ ಹೇಳಿದ್ದರು. ನಾನು ಈ ಕ್ಷೇತ್ರಕ್ಕೆ ಬಂದಿರುವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೌರಾಯುಕ್ತ ಮನೋಹರ್‌ ನಾಗರಾಜ ಮಾತನಾಡಿ, ಕಲುಷಿತ ನೀರು ಸೇವನೆಯಿಂದಲೇ ಮಹಿಳೆ ಮೃತಪಟ್ಟಿದ್ದಾರೆ ಎನ್ನುವುದು ದೃಢಪಟ್ಟಿಲ್ಲ. ವೈದ್ಯಕೀಯ ವರದಿ ಬಂದಿಲ್ಲ. ಕಲುಷಿತ ನೀರಿನಿಂದ ಅಸ್ವಸ್ಥಗೊಂಡಿದ್ದಾರೆ ಎಂದರು.

ಅದಕ್ಕೆ ಸಿಟ್ಟಿಗಾದ ರಾಘವೇಂದ್ರ, ಗೌಸ್‌, ಮಂಜುನಾಥ, ಸರವಣನ್‌, ಮುಮ್ತಾಜ್‌, ನೀರಿನ ಸಮಸ್ಯೆ ತಿಳಿಸಿದರೆ ಯಾರೂ ಸ್ಪಂದಿಸಿಲ್ಲ. ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆ. ಹೇಗೆ ಸತ್ತಾರೆ ಎನ್ನುವುದಕ್ಕೆ ಸಾಕ್ಷಿ ತರಬೇಕಾ? ಎಂದು ಕೇಳಿದರು. ‘ಸ್ವತಃ ನನ್ನ ಮಗನೇ ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ’ ಎಂದು ಗೌಸ್‌ ಚಿತ್ರಗಳ ಸಮೇತ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ನಗರದಲ್ಲಿ ಮಂಗಳವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನೀರಿನ ವಿಷಯ ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ಇಂದು ತುರ್ತಾಗಿ ಸಭೆ ಕರೆದಿದ್ದೀರಿ’ ಎಂದು ರಾಘವೇಂದ್ರ ಹೇಳಿದರು. ‘ಅದಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌ ಸ್ಪಷ್ಟಪಡಿಸಿದರು.

‘ನಮ್ಮ ವಾರ್ಡುಗಳಲ್ಲಿ ಒಂದು ವರ್ಷದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಯಾವಾಗ ಸಮಸ್ಯೆ ಬಗೆಹರಿಸುತ್ತೀರಿ’ ಎಂದು ಬಿಜೆಪಿ ಸದಸ್ಯರಾದ ರಮೇಶ ಗುಪ್ತಾ, ಜೀವರತ್ನಂ ಪ್ರಶ್ನಿಸಿದರು. ‘ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್‌ ಅಧಿಕಾರಿ ನೇಮಿಸಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಪೌರಾಯುಕ್ತರು ಭರವಸೆ ನೀಡಿದರು.

ಕಾಂಗ್ರೆಸ್‌ ಸದಸ್ಯರಾದ ಹುಲುಗಪ್ಪ, ಮುನ್ನಿ ಮಾತನಾಡಿ, ಜೆಸ್ಕಾಂ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ಸಮಸ್ಯೆ ಆಲಿಸುವುದಿಲ್ಲ. ವರ್ಷದ ಹಿಂದೆ ಸಮಸ್ಯೆ ತಿಳಿಸಿದರೂ ಬಗೆಹರಿಸಿಲ್ಲ. ಇವರ ಧೋರಣೆ ಸರಿಯಲ್ಲ ಎಂದು ಸಿಟ್ಟಿನಿಂದ ಹೇಳಿದರು. ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕ ನಂತರ ಸುಮ್ಮನಾದರು.

ರೂಪೇಶಕುಮಾರ ಗೈರು:

ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವನೆಗೆ ಮಹಿಳೆಯೊಬ್ಬರು ಮೃತಪಟ್ಟು, 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಗಂಭೀರ ವಿಷಯದ ಕುರಿತು ಚರ್ಚಿಸಲು ಬುಧವಾರ ನಗರಸಭೆ ವಿಶೇಷ ಸಭೆ ಕರೆಯಲಾಗಿತ್ತು. ಆದರೆ, ರಾಣಿಪೇಟೆ ವಾರ್ಡ್‌ ಪ್ರತಿನಿಧಿಸುವ ಸದಸ್ಯ ರೂಪೇಶಕುಮಾರ ಅವರೇ ಸಭೆಗೆ ಗೈರಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

‘ಗುತ್ತಿಗೆ ರದ್ದು, ₹5 ಕೋಟಿ ಮುಟ್ಟುಗೋಲು’:

‘ನಗರದಲ್ಲಿ 24X7 ಕುಡಿಯುವ ನೀರಿನ ಕಾಮಗಾರಿ ಹೊಣೆ ಹೊತ್ತಿದ್ದ ಎಸ್‌ಪಿಎಂಎಲ್‌ ಏಜೆನ್ಸಿ ಶೇ 80ರಷ್ಟು ಕೆಲಸ ಮುಗಿಸಿದೆ. ಮಿಕ್ಕುಳಿದ ಕೆಲಸ ಪೂರ್ಣಗೊಳಿಸದ ಕಾರಣ ಕುಡಿವ ನೀರು ಕಲುಷಿತಗೊಳ್ಳಲು ಕಾರಣವಾಗಿದೆ. ಅವರ ಗುತ್ತಿಗೆ ರದ್ದುಪಡಿಸಲಾಗಿದೆ. ₹5 ಕೋಟಿ ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇಷ್ಟೇ ಅಲ್ಲ, ಅವರ ವಿರುದ್ಧ ವಂಚನೆ ಪ್ರಕರಣವೂ ದಾಖಲಿಸಲಾಗಿದೆ. ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಸಾವಿಗೆ ಏಜೆನ್ಸಿ ಹೊಣೆ. ನಮ್ಮ ಎಂಜಿನಿಯರ್‌ಗಳು ಅದರ ಮೇಲೆ ನಿಗಾ ವಹಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಸಾವಿಗೀಡಾದ ಮಹಿಳೆಗೆ ಚಿಕಿತ್ಸೆ ನೀಡಿದ ಆರ್‌ಎಂಪಿ ವೈದ್ಯರಿಗೆ ನೋಟಿಸ್‌ ನೀಡಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ತಿಳಿಸಿದರು.

ಎಲ್ಲಾ ವಾರ್ಡ್‌ಗಳಲ್ಲಿ ನೀರಿನ ಮಾದರಿ ಸಂಗ್ರಹಿಸಲಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ನಂತರ ಹೊಸ ಸರ್ವೇ ನಡೆಸಿ, ಎಲ್ಲೆಲ್ಲಿ ಪೈಪ್‌ಗಳಲ್ಲಿ ಲಿಕೇಜ್‌ ಇದೆ ಎನ್ನುವುದನ್ನು ಗುರುತಿಸಿ ಸಮಸ್ಯೆಯನ್ನು ಸಮರೋಪಾದಿಯಲ್ಲಿ ಬಗೆಹರಿಸಲಾಗುವುದು. ಇದರ ಮೇಲುಸ್ತುವಾರಿಗಾಗಿಯೇ ಸರ್ಕಾರ ಎಂಜಿನಿಯರ್‌ ಒಬ್ಬರನ್ನು ನೇಮಿಸಿದೆ ಎಂದರು.

ನೀರಿನ ಘಟಕಗಳಿಗೆ ನೋಟಿಸ್‌:

‘ನಗರದ ಎಲ್ಲಾ ಆರ್‌.ಒ ಪ್ಲಾಂಟ್‌ಗಳವರಿಗೆ ನೋಟಿಸ್‌ ನೀಡಲಾಗಿದೆ. ಅವರ ನೀರಿನ ಮಾದರಿ ಕೇಳಲಾಗಿದೆ. ಹಿಂದಿಗಿಂತ ಕಡಿಮೆ ದರದಲ್ಲಿ ನೀರು ಮಾರಾಟ ಮಾಡಬೇಕು. ಯಾರೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ’ ಎಂದು ಪೌರಾಯುಕ್ತ ಮನೋಹರ್‌ ನಾಗರಾಜ ಹೇಳಿದರು.

‘ಕಲುಷಿತ ನೀರಿನ ಸಮಸ್ಯೆ ಉಲ್ಬಣಿಸಿದ ನಂತರ ಜನ ಭಯಭೀತರಾಗಿದ್ದಾರೆ. ಎಲ್ಲಾ ಆರ್‌.ಒ. ಪ್ಲಾಂಟ್‌ನವರು ಇದೇ ಸಂದರ್ಭವೆಂದು ದರ ಹೆಚ್ಚಿಸಿದ್ದಾರೆ’ ಎಂದು ಪಕ್ಷೇತರ ಸದಸ್ಯ ಅಬ್ದುಲ್‌ ಖದೀರ್‌ ಸಭೆಯ ಗಮನಕ್ಕೆ ತಂದಾಗ ಪೌರಾಯುಕ್ತರು ಮೇಲಿನಂತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT