ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಾತಿ ಶಿಫಾರಸ್ಸು ತಿರಸ್ಕರಿಸಲು ಆಗ್ರಹ

Last Updated 11 ಏಪ್ರಿಲ್ 2023, 16:03 IST
ಅಕ್ಷರ ಗಾತ್ರ

ಬಳ್ಳಾರಿ: ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸಿ, ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸುವಂತೆ ‘ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ’ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಸಂವಿಧಾನದಲ್ಲಿ ಅವಕಾಶವಿಲ್ಲದ, ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾದ ಶಿಫಾರಸ್ಸನ್ನು ರಾಜ್ಯ ಸರ್ಕಾರ ಕಳಿಸಿದೆ. ಒಳ ಮೀಸಲಾತಿಯೇ ಅವೈಜ್ಞಾನಿಕವಾಗಿರುವಾಗ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೆ ಶೇ 4.5ರಷ್ಟು ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ಒಕ್ಕೂಟದ ಅಧ್ಯಕ್ಷ ರವಿ ಎಚ್‌. ಮಾಕಳಿ ಹಾಗೂ ಪ್ರಧಾನ ಕಾರ್ಯದರ್ಶಿ ಅನಂತ ನಾಯ್ಕ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಮುದಾಯಗಳ ಜನಸಂಖ್ಯೆ ಹಾಗೂ ಹಿಂದುಳಿದಿರುವಿಕೆಯನ್ನು ಸರಿಯಾಗಿ ಗುರುತಿಸದೆ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಮಿತಿ ಪರಿಶಿಷ್ಟ ಜಾತಿಗಳ ಕುರಿತು ಸರಿಯಾದ ಅಧ್ಯಯನ ಮಾಡಿಲ್ಲ. ವರ್ಗೀಕರಣಕ್ಕೆ ಬಳಸಿರುವ ಮಾನದಂಡ ಸರಿಯಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವರದಿ ಒಪ್ಪುವುದಿಲ್ಲವೆಂದು ಭರವಸೆ ನೀಡಿದ್ದರು. ಅವರು ಕೊಟ್ಟ ಭರವಸೆ ಮರೆತಿದ್ದಾರೆ ಎಂದು ಅವರು ಟೀಕಿಸಿದರು.

ಯಾವುದೇ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವುದು ಅಥವಾ ಕೈ ಬಿಡುವುದು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ, ಮುಂದಿನ ತಿಂಗಳ ವಿಧಾನಸಭೆ ಚುನಾವಣೆಯ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ತರಾತುರಿಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ತೀರ್ಮಾನ ಕೈಗೊಂಡಿದೆ ಎಂದು ದೂರಿದರು.

‘ರಾಜ್ಯ ಸರ್ಕಾರದ ಶಿಫಾರಸ್ಸನ್ನು ತಕ್ಷಣ ತಿರಸ್ಕರಿಸಬೇಕು. ಈ ಬೇಡಿಕೆ ಈಡೇರುವವರೆಗೂ ನಾವು ಹೋರಾಟ ಮಾಡುತ್ತೇವೆ. ನಮ್ಮದು ಶಾಂತಿಯುತ ಹೋರಾಟ’ ಎಂದು ರವಿ ಮಾಕಳಿ ಹಾಗೂ ಅನಂತನಾಯ್ಕ ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಈಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರ ಮೇಲೆ ಹೂಡಿರುವ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯಕ್‌, ಕಾರ್ಯದರ್ಶಿ ಆದರ್ಶ ಯಲ್ಲಪ‍್ಪ, ವಕ್ತಾರ ರಾಜ ನಾಯ್ಕ, ಶ್ರೀನಿವಾಸ ಮೂರ್ತಿ, ಬಂಜಾರ ಸಮಾಜದ ರಾಷ್ಟ್ರೀಯ ಕಾರ್ಯದರ್ಶಿ ರಾಮು ನಾಯ್ಕ, ಭೋವಿ ವಡ್ಡರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ. ಮಹೇಶ್‌, ಮಹಾನಗರಪಾಲಿಕೆ ಕಾಂಗ್ರೆಸ್‌ ಸದಸ್ಯ ಕುಬೇರ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT