ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ: ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಪರಿಸರ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮೇಯರ್‌ ಸಭೆ
Published 10 ಜುಲೈ 2024, 16:19 IST
Last Updated 10 ಜುಲೈ 2024, 16:19 IST
ಅಕ್ಷರ ಗಾತ್ರ

ಬಳ್ಳಾರಿ: ‌‘ಡೆಂಗಿ ಜ್ವರ ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ನಾಗರಿಕರ ಆರೋಗ್ಯದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ತಮ್ಮ ಮನೆ ಒಳಗೆ, ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಬೇಕು’ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆಯ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ ನಡೆಯುತ್ತಿದ್ದು, ತಂಡವು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕು. ಪಾಲಿಕೆ ವತಿಯಿಂದ ಧೂಮೀಕರಣ ಮಾಡಲು ಕ್ರಮ ವಹಿಸಲಾಗುವುದು’ ಎಂದರು.

‘ಡೆಂಗಿ ಜ್ವರ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಬೆಳೆಯುವುದರಿಂದ ಸಾರ್ವಜನಿಕರು ತಮ್ಮ ಮನೆಯಲ್ಲಿ ಯಾವುದೇ ರೀತಿಯ ನೀರು ಸಂಗ್ರಹಣೆ ಇದ್ದಲ್ಲಿ ಸರಿಯಾಗಿ ಮುಚ್ಚಬೇಕು. ನೀರಿನಲ್ಲಿ ಸೊಳ್ಳೆ ಮರಿಗಳು ಇರುವುದು ಕಂಡುಬಂದಲ್ಲಿ ತಕ್ಷಣವೇ ಸ್ವಚ್ಛಗೊಳಿಸಲು ತಿಳಿಸಬೇಕು’ ಎಂದರು.

‘ಕಟ್ಟಡ ನಿರ್ಮಾಣ, ಅಂಗಡಿ , ಟೈರ್, ಎಳೆನೀರು ಚಿಪ್ಪುಗಳಲ್ಲಿ ನಿಂತ ನೀರು ಇದ್ದರೆತೆರುವುಗೊಳಿಸಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಎಚ್ಚರವಹಿಸಬೇಕು' ಎಂದು ತಿಳಿಸಿದರು.

‘ಈಡಿಸ್‌ ಎಂಬುದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಗಳಾಗಿದ್ದು, ಸಾಧ್ಯವಾದಷ್ಟು  ಮನೆಯ ಒಳಗೆ ಸೊಳ್ಳೆಗಳನ್ನು ನಿಯಂತ್ರಿಸುವ ಧೂಪ ಹಾಗೂ ಇತ್ಯಾದಿಗಳನ್ನು ಬಳಸಲು ಸೂಚಿಸಬೇಕು’ ಎಂದರು.

‘ಜ್ವರ, ಮೈ–ಕೈ ನೋವು, ಸುಸ್ತಿನ ಲಕ್ಷಣಗಳು ಕಂಡು ಬಂದಲ್ಲಿ, ಇಲ್ಲವೇ ಯಾವುದೇ ರೀತಿಯ ರೋಗಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಡೆಂಗಿ ಕುರಿತು ಸಾರ್ವಜನಿಕರು ಭಯಪಡದೆ ಜಾಗೃತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. 

ಉಪಮೇಯರ್ ಡಿ.ಸುಕುಂ, ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್,  ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪಾಲಿಕೆಯ ಆರೋಗ್ಯ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಗೌರಿ ಗಣೇಶ ಹಬ್ಬಕ್ಕೆ ನಗರದಲ್ಲಿ ಈ ಬಾರಿ ಪಿಒಪಿ ಮೂರ್ತಿಗಳ ತಯಾರಿಕೆ ಪ್ರದರ್ಶನ ಹಾಗೂ ಮಾರಾಟ ನಿಷೇಧಿಸಿಲಾಗಿದೆ. ನಿಷೇಧ ಉಲ್ಲಂಘಿಸಿದರೆ ಜಪ್ತಿ ಮಾಡಿ ದಂಡ ವಿಧಿಸಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
ನಂದೀಶ್‌ ಬಳ್ಳಾರಿ ಮೇಯರ್‌

‘ಪ್ಲಾಸ್ಟಿಕ್ ಬಳಕೆ ನಿಷೇಧ’‘

ನಗರದೆಲ್ಲೆಡೆ ಅಂಗಡಿ ಮಾಲೀಕರು ಬೀದಿಬಿದಿ ವ್ಯಾಪಾರಸ್ಥರು ಕಡ್ಡಾಯವಾಗಿ ತಮ್ಮ ಅಂಗಡಿಗಳ ಮುಂದೆ ಅವಶ್ಯಕತೆಗೆ ತಕ್ಕಂತೆ ಕನಿಷ್ಟ 50 ಲೀಟರ್ ಸಾಮರ್ಥ್ಯದ ಕಸದ ಬುಟ್ಟಿ ಇಡಬೇಕು. ಅಂಗಡಿಗಳ ಮುಂದೆ ಕಸ ಚೆಲ್ಲುವಂತಿಲ್ಲ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವಂತಿಲ್ಲ. ಉಲ್ಲಂಘನೆಯಾದರೆ ₹500 ರಿಂದ ₹10000ದವರೆಗೆ ದಂಡ ವಿಧಿಸಿ ಜಲ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಬೇಕು’ ಎಂದು ಮೇಯರ್‌ ನಂದಿಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT