ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಮಳೆ ನಿರೀಕ್ಷೆ: ಅಧಿಕೃತ ಮಾರಾಟಗಾರರಿಂದಲೇ ಬಿತ್ತನೆ ಬೀಜ ಖರೀದಿಗೆ ಸಲಹೆ

Published 19 ಮೇ 2024, 5:04 IST
Last Updated 19 ಮೇ 2024, 5:04 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಜ.1ರಿಂದ ಈವರೆಗೆ 4.9 ಸೆ.ಮೀ ಮಳೆಯಾಗಬೇಕಿತ್ತು. ಆದರೆ 3.9 ಸೆ.ಮೀ ಆಗಿದೆ. ಭಾರೀ ಮಳೆಯಾಗದಿದ್ದರೂ,  ಸಾಧಾರಣ ಮಳೆಯಂತೂ ಆಗಿದೆ.  ನೈರುತ್ಯ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇಟ್ಟುಕೊಂಡಿರುವ ರೈತರು ಭೂಮಿ ಹದ ಮಾಡು ಕಾರ್ಯ ಆರಂಭಿಸಿದ್ದಾರೆ. ಅಲ್ಲದೆ, ಕೃಷಿ ಇಲಾಖೆ ಕೂಡ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪ್ರಸಕ್ತ ಮುಂಗಾರಿನಲ್ಲಿ 1,73,897 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಕಳೆದ ವರ್ಷವೂ ಇದೇ ಗುರಿ ಹೊಂದಿತ್ತು. ಆದರೆ, ಮುಂಗಾರು ವಿಳಂಬವಾದ ಹಿನ್ನೆಲೆ 1,08,898 ಹೆಕ್ಟೇರ್ (ಶೇ.62.62) ಗುರಿ ಸಾಧನೆಯಾಗಿತ್ತು. 

ಜಿಲ್ಲೆಯಲ್ಲಿ ಬಳ್ಳಾರಿ, ಕಂಪ್ಲಿ, ಕುರುಗೋಡು ಮತ್ತು ಸಿರುಗುಪ್ಪ ತಾಲ್ಲೂಕುಗಳು ಶೇ 60ರಿಂದ 80ರಷ್ಟು ಭಾಗ ನೀರಾವರಿಯಾದರೆ, ಸಂಡೂರು ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಇಡೀ ಜಿಲ್ಲೆಯಲ್ಲಿ ಸಿರುಗುಪ್ಪದಲ್ಲಿ ಹೆಚ್ಚಿನ ಬಿತ್ತನೆ ಗುರಿ ಹೊಂದಲಾಗಿದೆ. ಇಲ್ಲಿ 60,735 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬಹುದು ಎಂದು ಅಂದಾಜಿಸಲಾಗಿದೆ.  ಕುರುಗೋಡು ತಾಲೂಕಿನಲ್ಲಿ ಅತೀ ಕಡಿಮೆ, ಅಂದರೆ, 18,440 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ. 

ಬಳ್ಳಾರಿಯಲ್ಲಿ ಪ್ರಮುಖವಾಗಿ ಭತ್ತ,  ಜೋಳ, ಮೆಕ್ಕೆಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಹೀಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಪೂರೈಕೆಗೂ ಕೃಷಿ ಇಲಾಖೆ ಸನ್ನದ್ಧುಗೊಂಡಿದೆ. ಜಿಲ್ಲೆಯಲ್ಲಿ 3,498 ಕ್ವಿಂಟಾಲ್‌ ಭತ್ತ, ಸಜ್ಜೆ 1,173 , ತೊಗರಿ–717, ಮೆಕ್ಕೆಜೋಳ–659, ಜೋಳ–370, ನೆಲಗಡಲೆ 176 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ರಿಯಾಯ್ತಿ ದರದಲ್ಲಿ ರೈತರಿಗೆ ಪೂರೈಸಲು ಇಲಾಖೆ ಕ್ರಮ ಕೈಗೊಂಡಿದೆ.

ರಸಗೊಬ್ಬರ ದಾಸ್ತಾನು: ‘ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಪೂರೈಸಲೆಂದು ಕೃಷಿ ಇಲಾಖೆಯು 40,207 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಮಾಡಿಟ್ಟಿದೆ. ಯೂರಿಯಾ 18,530 ಮೆ.ಟನ್‌, ಡಿಎಪಿ 5,120, ಎಂಒಪಿ 374, ಎನ್‌ಪಿಕೆ 15,750, ಎಸ್‌ಎಸ್‌ಪಿ 4,33 ಮೆ.ಟನ್‌ ಲಭ್ಯವಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈಗಾಗಲೇ ಜಿಲ್ಲೆಯಲ್ಲಿ 2,233 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರ ವಿತರಣೆ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿತ್ತು. 2021 ಮತ್ತು 2022ರಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಬಿತ್ತನೆ ಆಗಿತ್ತು. ಆದರೆ ಕಳೆದ ವರ್ಷ ಮಳೆ ಇಲ್ಲದ ಕಾರಣ ಬಿತ್ತನೆಯೂ ಕುಂಠಿತವಾಗಿತ್ತು. ಜತೆಗೆ ಬಿತ್ತನೆಯಾದ ಪ್ರದೇಶದಲ್ಲಿ ಬೆಳೆಯೂ ಬಂದಿರಲಿಲ್ಲ.

‘ರೈತರ ನೆರವಿಗಿದ್ದೇವೆ’

‘ಮುಂಗಾರು ಆಶಾದಾಯಕವಾಗಿದೆ. ಬಳ್ಳಾರಿಯಲ್ಲಿ ವಾಡಿಕೆ ಮಳೆಯಾಗದಿದ್ದರೂ ಮಳೆಯಂತೂ ಆಗಿದೆ. ಕೃಷಿ ಇಲಾಖೆಯು ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಬಿತ್ತನೆ ಬೀಜ ಪೂರೈಕೆ ಮಾಡಲಿವೆ. ಸಂಡೂರು ತೋರಣಗಲ್‌ನಲ್ಲಿ ಜೂನ್‌ನಲ್ಲಿ ಜೋಳ ಬಿತ್ತಬಹುದು. ಉಳಿದವರು ಭೂಮಿ ಹದ ಮಾಡಿಕೊಟ್ಟುಕೊಂಡು ಉತ್ತಮ ಮಳೆ ನಂತರ ಬಿತ್ತನೆ ಮಾಡಬಹುದು. ಇಲಾಖೆಯಿಂದ ಎಲ್ಲ ಸಹಕಾರ ನೀಡಲು ನಾವು ಸಿದ್ಧವಾಗಿದ್ದೇವೆ. ಹತ್ತಿಯ ಬಿತ್ತನೆ ಬೀಜವನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿ ಮಾಡಬೇಕು. ಮನೆ ಬಾಗಿಲಿಗೆ ಬರುವ ಡೀಲರ್‌ಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಅಂಥವರ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಒಳಿತು. ಯಾವುದೇ ಸಮಸ್ಯೆ ಗೊಂದಲಗಳಿದ್ದರೆ ರೈತರ ಸಂಪರ್ಕ ಕೇಂದ್ರಗಳಿಗೆ ರೈತರು ಭೇಟಿ ನೀಡಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT