ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಗ್ಯಾರಂಟಿ ಯೋಜನೆ ಸಮೀಕ್ಷೆ: ಅಂಗನವಾಡಿ ನೌಕರರಿಗೆ ಹೊಣೆ

ಸೂಚಿಸಿದ ಆದೇಶವನ್ನೇ ಉಲ್ಲಂಘಿಸಿದ ರಾಜ್ಯ ಸರ್ಕಾರ; ದಿನಪೂರ್ತಿ ಕೆಲಸ
ಹರಿಶಂಕರ್‌ ಆರ್‌.
Published 5 ಮಾರ್ಚ್ 2024, 5:47 IST
Last Updated 5 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಬಳ್ಳಾರಿ: ಅಂಗನವಾಡಿ ನೌಕರರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹೊರತುಪಡಿಸಿ ಬೇರೆ ಯಾವುದೇ ಕೆಲಸಕ್ಕೆ ನಿಯೋಜಿಸದಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಐದು ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಕಾರ್ಯಕ್ಕೆ ಅಂಗನವಾಡಿ ನೌಕರರನ್ನು ನಿಯೋಜಿಸಲಾಗಿದೆ.

ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿವೆ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರ ₹12 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಸಮೀಕ್ಷೆ ನಡೆಸುತ್ತಿದೆ. ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಇತರ ಸಿಬ್ಬಂದಿ ಒಳಗೊಂಡ 1.20 ಲಕ್ಷ ಮಂದಿಯನ್ನು ‘ಗ್ಯಾರಂಟಿ ಸ್ವಯಂ ಸೇವಕ’ ರನ್ನಾಗಿ ನಿಯೋಜಿಸಲಾಗಿದೆ. ಫೆಬ್ರುವರಿ 26ರಿಂದ ಸಮೀಕ್ಷೆ ನಡೆದಿದ್ದು, 15 ದಿನಗಳಲ್ಲಿ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಮೊಬೈಲ್‌ ಅಪ್ಲಿಕೇಷನ್‌ ಆಧಾರಿತ ಸಮೀಕ್ಷೆಯಲ್ಲಿ ಅಂಗನವಾಡಿ ನೌಕರರು ತಮಗೆ ನಿಗದಿಪಡಿಸಿದ ಮನೆಗಳಿಗೆ ತೆರಳಿ 5 ಗ್ಯಾರಂಟಿಗಳ ಕುರಿತು ಪ್ರತಿಯೊಬ್ಬರ ಬಳಿ 35ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ, ಉತ್ತರ ದಾಖಲಿಸಿಕೊಳ್ಳಬೇಕು.

‘ಸಮಗ್ರ ಶಿಶು ಅಭಿವೃದ್ಧಿಯ ಯೋಜನೆಯ ಕೆಲಸಗಳ ಜೊತೆಗೆ ಈ ಸಮೀಕ್ಷೆಯನ್ನೂ ನಡೆಸುವಂತೆ ಸರ್ಕಾರ ಸೂಚಿಸಿದೆ. ಇದರಿಂದ  ನಮ್ಮ ಮೂಲ ಕೆಲಸಕ್ಕೆ ತೊಂದರೆಯಾಗುತ್ತಿದೆ’ ಎಂಬುದು ಅಂಗನವಾಡಿ ನೌಕರರ ಅಳಲು.

‘ಬೆಳಗ್ಗೆ 10ರವರೆಗೆ ಸಮೀಕ್ಷೆ ನಡೆಸಿ, ನಂತರ ಕರ್ತವ್ಯಕ್ಕೆ ಹಾಜರಾಗಬೇಕು. ಸಂಜೆ 5ರಿಂದ ಮತ್ತೆ ಸಮೀಕ್ಷೆ ನಡೆಸಬೇಕು. ಕೆಲವರಿಗೆ ಸ್ಮಾರ್ಟ್‌ ಫೋನ್ ಬಳಕೆ ಗೊತ್ತಿದ್ದರೆ, ಇನ್ನೂ ಕೆಲವರಿಗೆ ಕೀಪ್ಯಾಡ್‌ ಮೊಬೈಲ್‌ಫೋನ್ ಬಳಕೆ ಮಾತ್ರ ಗೊತ್ತು. ಇದರಿಂದ ಸಮೀಕ್ಷೆ ಕಾರ್ಯ ಕಷ್ಟ. ಗ್ಯಾರಂಟಿಗಳ ಫಲ ಸಿಗದವರು ನಮಗೆ ಬಯ್ಯುತ್ತಾರೆ. ಕಿರಿಕಿರಿ ಮಾಡುತ್ತಾರೆ. ಹಲವು ಸಮಸ್ಯೆ, ಸವಾಲು ಎದುರಿಸುವಂತಾಗಿದೆ’ ಎಂದು ಅಂಗನವಾಡಿ ನೌಕರರೊಬ್ಬರು ಬೇಸರದಿಂದ ತಿಳಿಸಿದರು.

‘ಆಶಾ ಕಾರ್ಯಕರ್ತೆಯರಿಗೂ ಹೆದರಿಸಿ, ಬೆದರಿಸಿ ಸಮೀಕ್ಷೆ ಮಾಡಿಸಲಾಗುತ್ತಿದೆ. ಸೌಲಭ್ಯಗಳಿಲ್ಲ. ಪ್ರೋತ್ಸಾಧನ ಕಡಿಮೆ. ಗ್ಯಾರಂಟಿ ಯೋಜನೆಗಳು ಸಿಗದವರು ಆಶಾ ಕಾರ್ಯಕರ್ತೆಯರನ್ನೇ ಪ್ರಶ್ನಿಸುತ್ತಾರೆ. ಮೊಬೈಲ್‌ ಆಧಾರಿತ ಸಮೀಕ್ಷೆ ಕೆಲವರಿಗೆ ಕಷ್ಟವಾಗುತ್ತಿದೆ. ಅವರ ಮೂಲ ಕರ್ತವ್ಯಕ್ಕೂ ತೊಡಗಕಾಗಿದೆ’ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗನವಾಡಿ ನೌಕರರನ್ನು ಈ ಹಿಂದೆ ಹಲವು ಸಮೀಕ್ಷೆಗಳಲ್ಲಿ ಬಳಸಿಕೊಂಡಿದ್ದಕ್ಕೆ ನಾವು ಆಕ್ಷೇಪಿಸಿದ್ದೆವು. ಅಂಗನವಾಡಿ ನೌಕರರನ್ನು ಶಿಶು ಅಭಿವೃದ್ಧಿ ಯೋಜನೆ ಹೊರತುಪಡಿಸಿ ಬೇರಾವ ಯೋಜನೆಗಳಿಗೂ ಬಳಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರವು ಹಲವು ಬಾರಿ ಸೂಚನೆ ನೀಡಿತು. ಕೇಂದ್ರ ಸರ್ಕಾರವೂ 2016ರ ಜೂನ್‌ 15ರಲ್ಲಿ ಈ ಬಗ್ಗೆ ಸೂಚನೆ ನೀಡಿದೆ. ಆದರೆ, ಇಲ್ಲಿ ಅದರ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತರ ಮಹಾಮಂಡಳಿ ಅಧ್ಯಕ್ಷ ಜಿ.ಆರ್‌ ಶಿವಶಂಕರ್‌ ದೂರಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ತಾಕೀತು ಧಾಟಿಯಲ್ಲಿ ನಮಗೆ ಉತ್ತರಿಸಿದ್ದಾರೆಅವರ ವರ್ತನೆ ಒಪ್ಪಲಾಗದು’ ಎಂದು ಸಂಯುಕ್ತ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್‌ ಯಾದಗಿರಿ ತಿಳಿಸಿದರು.

ಅಂಗನವಾಡಿ ನೌಕರರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಲ್ಲದೇ ಬೇರೆ ಉದ್ದೇಶಗಳಿಗೆ ಬಳಸದಂತೆ ಈ ಹಿಂದೆ ಆದೇಶ ಹೊರಡಿಸಿದ್ದ ಸರ್ಕಾರ  
ಅಂಗನವಾಡಿ ನೌಕರರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಲ್ಲದೇ ಬೇರೆ ಉದ್ದೇಶಗಳಿಗೆ ಬಳಸದಂತೆ ಈ ಹಿಂದೆ ಆದೇಶ ಹೊರಡಿಸಿದ್ದ ಸರ್ಕಾರ  
ಗ್ಯಾರೆಂಟಿ ಸಮೀಕ್ಷೆ ನಡೆಸಬೇಕು ಎಂದು ತಾಕೀತು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ಬರೆದಿರುವ ಪತ್ರ 
ಗ್ಯಾರೆಂಟಿ ಸಮೀಕ್ಷೆ ನಡೆಸಬೇಕು ಎಂದು ತಾಕೀತು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ಬರೆದಿರುವ ಪತ್ರ 
ಅಂಗನವಾಡಿ ನೌಕರರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಲ್ಲದೇ ಬೇರೆ ಯಾವ ಕೆಲಸ ಮಾಡಬಾರದು ಎಂದು ಸರ್ಕಾರವೇ ಹೇಳಿದೆ. ಈಗ ಸಮೀಕ್ಷೆಯಲ್ಲಿ ತೊಡಗಿಸಿದೆ. ಇದರಲ್ಲಿ ಬೇಜವಾಬ್ದಾರಿ ಯಾರದ್ದು?
– ಜಿ.ಆರ್‌ ಶಿವಶಂಕರ್‌ ಅಧ್ಯಕ್ಷ ಅಂಗನವಾಡಿ ಕಾರ್ಯಕರ್ತರ ಮಹಾಮಂಡಳಿ
ಯೋಜನೇತರ ಉದ್ದೇಶಗಳಿಗೆ ಅಂಗನವಾಡಿ ನೌಕರರನ್ನು ಬಳಸಿಕೊಳ್ಳದಂತೆ ಸರ್ಕಾರದ ಆದೇಶವಿದೆ. ಆದರೆ ಅವರಿಗೆ ಸ್ಥಳೀಯ ವಿಷಯಗಳು ಚೆನ್ನಾಗಿ ಗೊತ್ತಿರುವ ಕಾರಣಕ್ಕೆ ಅವರನ್ನು ನಿಯೋಜಿಸಿರಬಹುದು. ಇದು ಸರ್ಕಾರದ ನಿರ್ಧಾರ.
– ವಿಜಯ್‌ ಕುಮಾರ್‌ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳ್ಳಾರಿ
‘ಬೇಜವಾಬ್ದಾರಿ ತೋರದೇ ನಿಷ್ಠೆಯಿಂದ ಕೆಲಸ ಮಾಡಿ’
ಸಮೀಕ್ಷೆಯಿಂದ ಎದುರಾದ ಸಮಸ್ಯೆ ಮತ್ತು ಪ್ರೋತ್ಸಾಹ ಧನ ಕಡಿಮೆ ಎಂಬುದರ ಬಗ್ಗೆ ಅಂಗನವಾಡಿ ನೌಕರರ ಆರು ಸಂಘಟನೆಗಳ ಪ್ರಮುಖರು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಪ್ರಧಾನ ಕಾರ್ಯದರ್ಶಿ ನಿರ್ದೇಶಕರಿಗೆ ಫೆಬ್ರುವರಿ 28ರಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರು ‘ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿತನ‘ ತೋರದೇ ನಿಷ್ಠೆಯಿಂದ ತಮಗೆ ವಹಿಸಿರುವ ಕೆಲಸವನ್ನು ಮಾಡಬೇಕಾಗಿ ಕೋರಿಕೆ’ ಎಂದು ಪತ್ರ ಬರೆದಿದ್ದಾರೆ. ಇದಕ್ಕೆ ಸಂಘಟನೆಗಳ ಪ್ರಮುಖರು ‘ಇದು ಅಧಿಕಾರಿಗಳ ಅತ್ಯಂತ ಉದ್ಧಟತನದ ಪ್ರತಿಕ್ರಿಯೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT