ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರುಗುಪ್ಪ: ನೇರಳೆ ಹಣ್ಣಿಗೆ ಭಾರಿ ಬೇಡಿಕೆ

ಕೆ.ಜಿ.ಗೆ ₹100ರಿಂದ ₹150ರ ದರದಲ್ಲಿ ಮಾರಾಟ
ಡಿ.ಮಾರೆಪ್ಪ ನಾಯಕ
Published 29 ಜೂನ್ 2024, 5:20 IST
Last Updated 29 ಜೂನ್ 2024, 5:20 IST
ಅಕ್ಷರ ಗಾತ್ರ

ಸಿರುಗುಪ್ಪ: ಹಣ್ಣುಗಳ ರಾಜ ಮಾವಿನ ಬಳಿಕ ಇದೀಗ ನೇರಳೆ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ. ಇದು ಸೀಸನ್ ಹಣ್ಣು ಆಗಿರುವುದರಿಂದ ಸದ್ಯ ಭಾರಿ ಬೇಡಿಕೆ ಪಡೆದಿದೆ.

ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹100ರಿಂದ ₹150ಕ್ಕೆ ಹಾಗೂ ಚಿಲ್ಲರೆ ವ್ಯಾಪಾರಿಗಳ ಬಳಿ 100 ಗ್ರಾಂ. ಗೆ ₹20ರಂತೆ ಮಾರಾಟವಾಗುತ್ತಿದೆ. ಈ ಹಣ್ಣು ರುಚಿಕರ ಆಗಿದ್ದು, ಆರೋಗ್ಯಕ್ಕೂ ಉತ್ತಮವಾಗಿದೆ. ಹೀಗಾಗಿ ಬೆಲೆ ದುಬಾರಿಯಾದರೂ ಜನರು ಸಂತಸದಿಂದಲೇ ಖರೀದಿಸುತ್ತಿದ್ದಾರೆ.

ಈ ವರ್ಷ ನೇರಳೆ ಹಣ್ಣಿಗೆ ಬೇಡಿಕೆ ಇರುವುದನ್ನು ಅರಿತ ಕೆಲ ವರ್ತಕರು, ನೇರಳೆ ಮರದಲ್ಲಿ ಹೂ, ಮೊಗ್ಗು ಇರುವಾಗಲೇ ಮರಗಳ ಗುತ್ತಿಗೆ ಪಡೆಯುತ್ತಿದ್ದಾರೆ.

ಈ ಹಣ್ಣು ಎಲ್ಲ ಕಾಲಕ್ಕೂ ಸಿಗುವುದಿಲ್ಲ. ಅಲ್ಲದೆ, ಎಲ್ಲ ರೈತರೂ ಬೆಳೆಯುವುದಿಲ್ಲ. ಸಾಮಾನ್ಯವಾಗಿ ಜೂನ್ ಹಾಗೂ ಜುಲೈನಲ್ಲಿ ಮಾತ್ರ ಫಸಲು ಬರುತ್ತದೆ. ಅಲ್ಲದೆ, ನೇರಳೆ ಗಿಡವನ್ನು ಕೆಲವೇ ಕೆಲವು ರೈತರು ಬದು ಅಥವಾ ರಸ್ತೆ ಬದಿಯಲ್ಲಿ ಬೆಳೆಯುತ್ತಾರೆ. ಹೀಗಾಗಿ ಇದರ ಬೆಲೆ ದುಬಾರಿ ಎಂಬುದು ವ್ಯಾಪಾರಿಗಳ ಮಾತು.

ಔಷಧೀಯ ಗುಣ: ನೇರಳೆ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಈ ಹಣ್ಣು ರಾಮಬಾಣವಾಗಿದೆ. ಇದರಿಂದ ಕಬ್ಬಿಣಾಂಶ ಹೇರಳವಾಗಿದ್ದು, ಮಧುಮೇಹಿಗಳಿಗೆ ಉಪಯುಕ್ತವಾಗಿದೆ. ಇದು ರಕ್ತ ಶುದ್ಧೀಕರಿಸುವ ಶಕ್ತಿಯನ್ನೂ ಹೊಂದಿದೆ’ ಎನ್ನುತ್ತಾರೆ ಆಯುರ್ವೇದಿಕ ವೈದ್ಯರಾದ ಡಾ. ಎಂ. ಪ್ರಮೋದ ಅವರು.

‘ನೇರಳೆ ಹಣ್ಣನ್ನು ಜ್ಯೂಸ್ ಮಾಡಿಯೂ ಸೇವಿಸಬಹುದು. ನೇರಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ ಪೋಟ್ಯಾಷಿಯಂ ಐರನ್ ಹಾಗೂ ವಿಟಮಿನ್ ಸಿ ಹೆಚ್ಚಿರುತ್ತದೆ. ದೇಹದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ’ ಎನ್ನುತ್ತಾರೆ ಆರೋಗ್ಯ ತಜ್ಞರು.

ನೇರಳೆ ಹಣ್ಣಿನ ತಿರಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೂ ಬಳಸಲಾಗುತ್ತದೆ. ಇದರ ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುವುದರಿಂದ ಆಯುರ್ವೇದ, ಯುನಾನಿ ಔಷಧ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇದು ದೇಹವನ್ನು ಯಾವಾಗಲೂ ತೇವಾಂಶದಿಂದ ಇಡುತ್ತದೆ.

ಈ ಬೆಳೆಯನ್ನು ಒಂದು ಬೆಳೆಯಾಗಿ ಬೆಳೆದರೆ ಉತ್ತಮ ಲಾಭ ಗಳಿಸಬಹುದು. ಆಯುರ್ವೇದದಲ್ಲಿ ನೇರಳೆ ರಸಕ್ಕೆ ಉತ್ತಮ ಬೆಲೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT