ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣವಾಗದ ಅಂತರರಾಜ್ಯ ಗಡಿ ಸರ್ವೆ: ಇತ್ಯರ್ಥವಾಗದ ನಕ್ಷೆ

ತಜ್ಞರ ಸಮಿತಿ ರಚಿಸುವುದಾಗಿ ಸದನದಲ್ಲಿ ಭರವಸೆ ನೀಡಿದ್ದ ಕಂದಾಯ ಸಚಿವ
Published 15 ಮಾರ್ಚ್ 2024, 0:06 IST
Last Updated 15 ಮಾರ್ಚ್ 2024, 0:06 IST
ಅಕ್ಷರ ಗಾತ್ರ

ಬಳ್ಳಾರಿ: ಕರ್ನಾಟಕ–ಆಂಧ್ರ ಪ್ರದೇಶದ ನಡುವಿನ ಅಂತರರಾಜ್ಯ ಗಡಿ ಗುರುತಿಸಲು ನಡೆಸಲಾಗಿರುವ ಸಮೀಕ್ಷೆಯನ್ನು ಪರಾಮರ್ಶಿಸಲು ತಜ್ಞರ ಸಮಿತಿ ನೇಮಿಸುವುದಾಗಿ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ (2023ರ ಡಿಸೆಂಬರ್‌ನಲ್ಲಿ) ಹೇಳಿದ್ದ ರಾಜ್ಯ ಸರ್ಕಾರ ಈ ವರೆಗೆ ಸಮಿತಿ ರಚನೆಗೆ ಮುಂದಾಗಿಲ್ಲ.

ಇದರ ಪರಿಣಾಮವಾಗಿ ಅಂತರರಾಜ್ಯ ಗಡಿಯ ನಿಖರ–ಅಧಿಕೃತ ನಕ್ಷೆ ಸಿದ್ಧಪಡಿಸುವ ಕಾರ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಗೋಚರಿಸಿವೆ. ಮತ್ತೊಂದೆಡೆ, ಗಡಿ ಭಾಗದಲ್ಲಿರುವ ಬಿ1 ಕ್ಯಾಟಗರಿ ಗಣಿಗಳ ಜಂಟಿ ಸಮೀಕ್ಷೆ ಮತ್ತು ನಕ್ಷೆ ಸಿದ್ಧಪಡಿಸುವ ಕೆಲಸವೂ ನನೆಗುದಿಗೆ ಬಿದ್ದಂತಾಗಿದೆ.  

ಅಕ್ರಮ ಗಣಿಗಾರಿಕೆ ಪರಿಣಾಮವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಿನ ಗಡಿ ನಾಶಗೊಂಡಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಸರ್ವೇ ಆಫ್‌ ಇಂಡಿಯಾ ಎರಡೂ ರಾಜ್ಯಗಳ ನಡುವಿನ ಗಡಿ ಗುರುತಿಸುವ ಕಾರ್ಯವನ್ನು 2021ರಲ್ಲಿ ಪೂರ್ಣಗೊಳಿಸಿ ನಕ್ಷೆ ಸಿದ್ಧಪಡಿಸಿದೆ. ಆದರೆ, ಈ ಸಮೀಕ್ಷೆಯ ಬಗ್ಗೆ ಕರ್ನಾಟಕ ಆಕ್ಷೇಪವೆತ್ತಿದೆ.   

‘ಈ ಸಮೀಕ್ಷೆಯಲ್ಲಿ ತಾಂತ್ರಿಕ ದೋಷಗಳಿದ್ದು, ಕರ್ನಾಟಕದ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯವಾಗಿ ಸಿದ್ಧಪಡಿಸಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ 2022ರಲ್ಲಿ ಅಂದಿನ ಬಳ್ಳಾರಿ ಜಿಲ್ಲಾಧಿಕಾರಿ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಪತ್ರ ಬರೆದಿದ್ದರು. ಸಮೀಕ್ಷೆಗೆ ಅನುಸರಿಸಿದ ವಿಧಾನದ ಬಗ್ಗೆಯೂ ಕರ್ನಾಟಕ ಆಕ್ಷೇಪವೆತ್ತಿತ್ತು. ಇದಿಷ್ಟೇ ಅಲ್ಲದೇ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಗಡಿ ಸಮೀಕ್ಷೆ ವರದಿಗೆ ಕರ್ನಾಟಕದ ಪರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹಿಯನ್ನೂ ಹಾಕಿರಲಿಲ್ಲ. ಹೀಗಾಗಿ ಸಮೀಕ್ಷೆ ವರದಿ ಅಪೂರ್ಣವೆನಿಸಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಈ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ರಾಜ್ಯದ ಭೂಮಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಗುರುತಿಸಲು ಸರ್ವೇ ಆ‍ಫ್‌ ಇಂಡಿಯಾ ಸಮೀಕ್ಷೆ ನಡೆಸಿದೆ. ಇದರ ಕುರಿತ ಆಕ್ಷೇಪಗಳು ನನ್ನ ಗಮನಕ್ಕೆ ಬಂದಿವೆ.  ಸಮೀಕ್ಷೆಯನ್ನು ಪರಾಮರ್ಶಿಲು ತಜ್ಞರ ಸಮಿತಿ ನೇಮಿಸಲಾಗುವುದು’ ಎಂದು ಸದನದಲ್ಲೇ ಭರವಸೆ ನೀಡಿದ್ದರು. ಆದರೆ, ಸಮಿತಿ ರಚನೆ ಈವರೆಗೂ ಆಗಿಲ್ಲ.  

‘ಗಡಿ ಸಮೀಕ್ಷೆ ಪರಾಮರ್ಶೆಗೆ ಸಮಿತಿ ನೇಮಿಸಲಾಗಿದೆಯೇ?’ ಎಂದು ಶಾಸಕ ನಾರಾ ಭರತ್‌ ರೆಡ್ಡಿ ಅವರು ಇತ್ತೀಚಿನ ವಿಧಾನಮಂಡಲ ಅಧಿವೇಶನದಲ್ಲಿಯೂ (ಫೆ.19,ಚುಕ್ಕಿ ರಹಿತ ಪ್ರಶ್ನೆ) ಕೇಳಿದ್ದರು. ಇದಕ್ಕೆ ಸ್ವತಃ ಉತ್ತರ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ‘ತಜ್ಞರ ಸಮಿತಿ ಇನ್ನೂ ರಚಿಸಿಲ್ಲ’ ಎಂದು ಅಧಿಕೃತವಾಗಿ ಲಿಖಿತ ಉತ್ತರ ನೀಡಿದ್ದಾರೆ.  

1896 (ಕಾಂಟೋರ್‌) ನಕ್ಷೆಗೆ ಆಧರಿಸಿ ಸಮೀಕ್ಷೆ ನಡೆಯಬೇಕು ಎಂಬುದು ಕರ್ನಾಟಕದ ನಿಲುವು. ಮಾ. 6ರಂದು ನಡೆದ ಸಿಇಸಿ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಲಾಯಿತು. ಗಡಿ ಗುರುತಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಗಡಿಯಲ್ಲಿನ ಗಣಿಗಳ ಸಮೀಕ್ಷೆ ವ್ಯರ್ಥ.
– ಟಪಾಲ್‌ ಗಣೇಶ್‌ ಅಕ್ರಮ ಗಣಿಗಾರಿಕೆ ವಿರೋಧಿ ಹೋರಾಟಗಾರ
ಸರ್ವೇ ಆಫ್‌ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿನ ದೋಷಗಳ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತರಲಾಗಿತ್ತು. ಉನ್ನತ ಹಂತದ ತಜ್ಞರ ಸಮಿತಿ ನೇಮಿಸುವ ಭರವಸೆ ನೀಡಿದ್ದಾರೆ.
– ನಾರಾ ಭರತ್‌ ರೆಡ್ಡಿ ಶಾಸಕ ಬಳ್ಳಾರಿ ನಗರ
ಬಿ1 ಕ್ಯಾಟಗರಿ ಗಣಿ ಸಮೀಕ್ಷೆ ನನೆಗುದಿಗೆ 
ಬಳ್ಳಾರಿ ಜಿಲ್ಲೆಯ ತುಮಟಿ ವಿಠಲಾಪುರ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಎಚ್‌. ಸಿದ್ದಾಪುರ ಹಾಗೂ ಮಲಪನಗುಡಿ ಗ್ರಾಮಗಳು ಸಂಧಿಸುವ ‘ಟ್ರೈ ಜಂಕ್ಷನ್‌’ ಬಿಂದುವಿನಲ್ಲಿ ಅಂತರ ರಾಜ್ಯ ಗಡಿ ಹಾದುಹೋಗಿದೆ. ಗಡಿಗೆ ಹೊಂದಿಕೊಂಡಂತೆ ಕರ್ನಾಟಕದೊಳಗಿರುವ ಏಳು ಗಣಿಗಳ ಜಂಟಿ ಸರ್ವೆ ನಡೆಸಿ ನಕ್ಷೆಗಳನ್ನು ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್‌ 2022ರ ಸೆಪ್ಟೆಂಬರ್‌ 28ರಂದು ಆದೇಶ ಹೊರಡಿಸಿತ್ತು. ‘ಗಡಿಗುರುತು ಕಾರ್ಯ ಪೂರ್ಣಗೊಂಡ ನಂತರದ ಮೂರು ತಿಂಗಳ ಒಳಗಾಗಿ ಈ ಕಾರ್ಯವನ್ನು ಜಂಟಿ ತಂಡ ಅಂತಿಮಗೊಳಿಸಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ.  ಈ ಮಧ್ಯೆ ಮಾರ್ಚ್ 6ರಂದು ಕೇಂದ್ರದ ಉನ್ನತಾಧಿಕಾರ ಸಮಿತಿ(ಸಿಇಸಿ) ಬೆಂಗಳೂರಿನಲ್ಲಿ ಸಭೆ ನಡೆಸಿದೆ. ಜಂಟಿ ಸಮೀಕ್ಷೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಡ್ರೋನ್‌ ಸರ್ವೆ ನಡೆಸುವ ಬಗ್ಗೆ ಸರ್ವೆಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದೆ. ‘ಗಡಿ ಗುರುತು ಮಾಡುವ ಪ್ರಕ್ರಿಯೆಯೇ ಪೂರ್ಣಗೊಳ್ಳದ ಹೊರತಾಗಿ ಗಡಿಯಲ್ಲಿರುವ ಗಣಿಗಳ ಸಮೀಕ್ಷೆ ನಡೆಯುವುದು ಹೇಗೆ? ಯಾವ ಆಧಾರದಲ್ಲಿ ಸಮೀಕ್ಷೆ ನಡೆಯಲಿದೆ?’ ಎಂಬ ಪ್ರಶ್ನೆ ಉದ್ಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT