ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ರವಿಕುಮಾರ್‌ ಸವಾಲು 

Published 6 ಫೆಬ್ರುವರಿ 2024, 10:16 IST
Last Updated 6 ಫೆಬ್ರುವರಿ 2024, 10:16 IST
ಅಕ್ಷರ ಗಾತ್ರ

ಬಳ್ಳಾರಿ: ತೆರಿಗೆ ಪಾಲು, ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಅವರು ಸೋಮವಾರ ಸವಾಲು ಎಸೆದಿದ್ದಾರೆ. 

ಬಳ್ಳಾರಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲೆಂದು ನಗರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. 

‘ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ, ತೆರಿಗೆ ಪಾಲು ಸಿಗುತ್ತಿಲ್ಲ ಎಂದು ಸುಳ್ಳು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ. ಅದು ಬಳ್ಳಾರಿಯಲ್ಲಾಗಲಿ, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಾದರೂ ಸರಿ.  ಯುಪಿಎ ಸರ್ಕಾರದ ಅವಧಿಯಲ್ಲಿ ₹82 ಸಾವಿರ ಕೋಟಿ ಮಾತ್ರ ರಾಜ್ಯಕ್ಕೆ ಸಿಕ್ಕಿತ್ತು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ₹2.13 ಲಕ್ಷ ಕೋಟಿ ಹಣ ರಾಜ್ಯಕ್ಕೆ ಬಂದಿದೆ’ ಎಂದು ಅವರು ಹೇಳಿದರು. 

‘ಕೇಂದ್ರದಿಂದ ತಾರತಮ್ಯವಾಗದಿರುವಾಗ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ರಾಜಕೀಯ ಹಗೆತನ. ಚುನಾವಣೆಗಾಗಿ ನಡೆಯುತ್ತಿರುವ ಪ್ರಹಸನ’ ಎಂದು ಅವರು ಆರೋಪಿಸಿದರು. 

‘ಇಡೀ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಬೆಂಗಳೂರಿನದ್ದೇ ಸಿಂಹ ಪಾಲು. ಈ ತೆರಿಗೆ ಹಣದಲ್ಲಿ ಮುಖ್ಯಮಂತ್ರಿಗಳ ವರುಣಾ ಕ್ಷೇತ್ರಕ್ಕೆ ದುಡ್ಡು ಹೋಗುತ್ತಿಲ್ಲವೇ? ಡಿ.ಕೆ ಶಿವಕುಮಾರ್‌ ಅವರ ಕನಕಪುರಕ್ಕೆ ದುಡ್ಡು ಹೋಗುತ್ತಿಲ್ಲವೇ? ಹೆಚ್ಚು ತೆರಿಗೆ ನೀಡುತ್ತಿದ್ದೇವೆ ಎಂದು ಬೆಂಗಳೂರಿಗರು ಪ್ರತ್ಯೇಕ ರಾಜ್ಯ ಕೇಳಲು ಸಾಧ್ಯವೇ? ಎಂದು ರವಿಕುಮಾರ್‌ ಪ್ರಶ್ನೆ ಮಾಡಿದರು. 

‘ಕೇಂದ್ರದ ಬರ ಪರಿಹಾರ ತಂಡ ರಾಜ್ಯಕ್ಕೆ ಬಂದುಹೋಗಿ ತಿಂಗಳುಗಳೇ ಕಳೆದಿದ್ದು, ಪರಿಹಾರ ಯಾವಾಗ ಸಿಗಬಹುದು‘ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರವಿಕುಮಾರ್‌, ’ ಎಲ್ಲ ರಾಜ್ಯಗಳಿಗೆ ಕೊಟ್ಟಾಗ ಕರ್ನಾಟಕಕ್ಕೂ ಸಿಗಲಿದೆ’ ಎಂದು ಹೇಳಿದರು. 

ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆ ವೇಳಾಪಟ್ಟಿ ವಿವಾದ ಕುರಿತಂತೆ ಕೇಳಲಾದ ಪ್ರಶ್ನೆಗೆ ’ನಮಾಜ್‌ಗಾಗಿ ವೇಳಾಪಟ್ಟಿಯನ್ನೇ ಬದಲಿಸಲಾಗಿದೆ. ಇದು ಎರಡನೇ ಟಿಪ್ಪು ಸರ್ಕಾರ‘ ಎಂದು ವ್ಯಂಗ್ಯವಾಡಿದರು

ನಾಳೆ ಪ್ರತಿಭಟನೆ: ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ರವಿಕುಮಾರ್‌,  ಫೆ.7 (ಮಂಗಳವಾರ) ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರದ ವಿರುದ್ಧದ ಈ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕರು, ಪರಿಷತ್‌ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT