ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಾಮೃತ’ ನೀಗಿಸಲಿದೆ ನೀರ ಸಮಸ್ಯೆ

ಹೂವಿನಹಡಗಲಿಯಲ್ಲಿ ಜಲ ಸಂಗ್ರಹಕ್ಕೆ ಸಜ್ಜುಗೊಂಡ ಕೃಷಿ ಹೊಂಡಗಳು
Last Updated 24 ಮಾರ್ಚ್ 2019, 12:56 IST
ಅಕ್ಷರ ಗಾತ್ರ

ಹೂವಿನಹಡಗಲಿ: ಬರಗಾಲಕ್ಕೆ ತಡೆಯೊಡ್ಡಲು ರಾಜ್ಯ ಸರ್ಕಾರ ಹೊಸದಾಗಿ ಪ್ರಾರಂಭಿಸಿರುವ ‘ಜಲಾಮೃತ’ ಯೋಜನೆ ತಾಲ್ಲೂಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವ ದಿಕ್ಕಿನಲ್ಲಿ ಸಾಗಿದೆ.

ತಿಂಗಳ ಹಿಂದೆಯಷ್ಟೇ ಪ್ರಾರಂಭವಾಗಿರುವ ಈ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿದೆ. ತಾಲ್ಲೂಕಿನ ಯಾವುದೇ ದಿಕ್ಕಿನಲ್ಲಿ ಸಾಗಿದರೂ ರೈತರ ಜಮೀನುಗಳಲ್ಲಿ ಪುಷ್ಕರಣಿ ಮಾದರಿಯ ಕೃಷಿ ಹೊಂಡಗಳು ಕಾಣ ಸಿಗುತ್ತವೆ. ಬದು ನಿರ್ಮಾಣ, ಭೂ ಸಮತಟ್ಟು, ಇಂಗು ಗುಂಡಿ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ. ನರೇಗಾ ಸಂಯೋಜಿತ ಈ ಯೋಜನೆಯಿಂದ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಿದೆ.

ಅಂತರ್ಜಲ ಅಭಿವೃದ್ಧಿ, ಜಲಮೂಲಗಳ ಸಂರಕ್ಷಣೆಯ ಜತೆಗೆ ರೈತರಿಗೆ ಉಪಯುಕ್ತವಾಗಿರುವ ‘ಜಲಾಮೃತ’ ಯೋಜನೆ ಅನುಷ್ಠಾನದಲ್ಲಿ ಹೂವಿನಹಡಗಲಿ ತಾಲ್ಲೂಕು ಬಳ್ಳಾರಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ.

ತಾಲ್ಲೂಕು ಪಂಚಾಯಿತಿಯ ಕ್ರಿಯಾಶೀಲ ಅಧಿಕಾರಿ ಯು.ಎಚ್.ಸೋಮಶೇಖರ ಹಳ್ಳಿಗಳಿಗೆ ತೆರಳಿ ಈ ಯೋಜನೆ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರ ಫಲವಾಗಿ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲೂ ಈ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೆನ್ನತ್ತಿ ಅವರು ಅಭಿವೃದ್ಧಿಯ ವೇಗ ಹೆಚ್ಚಿಸಿದ್ದಾರೆ.

ಮಳೆಯಾಶ್ರಿತ ರೈತರು ಈ ಯೋಜನೆ ಅಡಿ ಕೃಷಿ ಹೊಂಡ ನಿರ್ಮಿಸಿಕೊಂಡು, ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿಕೊಳ್ಳಬಹುದು. ಇದನ್ನು ಬಳಸಿಕೊಂಡು ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯಬಹುದು. ನೀರಾವರಿಯ ರೈತರು ಕೊಳವೆಬಾವಿಗಳ ಬಳಿ ಇಂಗುಗುಂಡಿ ನಿರ್ಮಿಸಿಕೊಂಡು ಅಂತರ್ಜಲ ಹೆಚ್ಚಿಸಿಕೊಳ್ಳಲು ಯೋಜನೆ ಸಹಕಾರಿಯಾಗಿದೆ.

ಈ ಯೋಜನೆ ಅಡಿ ತಾಲ್ಲೂಕಿಗೆ 520 ಕೃಷಿ ಹೊಂಡಗಳ ಗುರಿ ನಿಗದಿಯಾಗಿದ್ದರೆ ಒಂದೇ ತಿಂಗಳಲ್ಲಿ 216 ಕಾಮಗಾರಿ ಆರಂಭಿಸಿ, 129 ಪೂರ್ಣಗೊಳಿಸಲಾಗಿದೆ. 512 ಬದುಗಳ ನಿರ್ಮಾಣ ಗುರಿ ಇದ್ದು, 413 ಕಾಮಗಾರಿ ಪ್ರಾರಂಭಿಸಿ, 218ನ್ನು ಪೂರ್ಣಗೊಳಿಸಲಾಗಿದೆ. 344 ಇಂಗುಗುಂಡಿ ನಿರ್ಮಾಣ ಗುರಿಯಲ್ಲಿ 123 ಆರಂಭಿಸಿ, 53 ಕಾಮಗಾರಿ ಪೂರ್ಣಗೊಳಿಸಿದೆ. ವಿವಿಧ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರತಿದಿನ 3,500ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಈ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಬರೀ ಒಂದೇ ತಿಂಗಳಲ್ಲಿ ಒಂದು ಲಕ್ಷ ಮಾನವ ದಿನಗಳ ಸೃಜನೆಯಾಗಿ, ₹26 ಲಕ್ಷ ಕೂಲಿ ಹಣ ಪಾವತಿಸಲಾಗಿದೆ.

‘7.5 ಮೀ ಉದ್ದ–ಅಗಲ, 3 ಮೀ. ಆಳದ ಕೃಷಿ ಹೊಂಡಕ್ಕೆ ₹40 ಸಾವಿರ, 9 ಮೀ. ಉದ್ದ–ಅಗಲ, 3 ಮೀ. ಆಳದ ಕೃಷಿ ಹೊಂಡಕ್ಕೆ ₹50 ಸಾವಿರ, 12 ಮೀ. ಉದ್ದ– ಅಗಲ, 3 ಮೀ. ಆಳದ ಕೃಷಿ ಹೊಂಡಕ್ಕೆ ₹80 ಸಾವಿರ ನೆರವು ರೈತರಿಗೆ ಸಿಗಲಿದೆ. ಬದು ನಿರ್ಮಾಣಕ್ಕೆ ಎಕರೆಗೆ ₹10 ಸಾವಿರ ಸಿಗಲಿದ್ದು, ಒಬ್ಬ ರೈತ ಕನಿಷ್ಠ 5 ಎಕರೆ ಬದು ನಿರ್ಮಿಸಿಕೊಳ್ಳಲು ಯೋಜನೆಯಲ್ಲಿ ಅವಕಾಶವಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್‌. ಸೋಮಶೇಖರ ಮಾಹಿತಿ ನೀಡಿದರು.

ಸತತ ಬರಗಾಲದಿಂದ ರೈತ ಸಮುದಾಯ ಕಂಗೆಟ್ಟಿದೆ. ಕಳೆದ ಮುಂಗಾರು, ಹಿಂಗಾರು ವೈಫಲ್ಯದಿಂದ ಈ ಬಾರಿ ಬಿತ್ತನೆಗೂ ಯೋಚನೆ ಮಾಡುವಂತಹ ಸನ್ನಿವೇಶ ಎದುರಾಗಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಸರ್ಕಾರ ಜಾರಿಗೊಳಿಸಿರುವ ‘ಜಲಾಮೃತ’ ಯೋಜನೆ ರೈತರಲ್ಲಿ ಒಂದಿಷ್ಟು ಆಶಾಭಾವ ಮೂಡಿಸಿದೆ. ರೈತರ ಹೊಲಗಳಲ್ಲಿ ಪುಷ್ಕರಣಿ ಮಾದರಿಯಲ್ಲಿ ನಿರ್ಮಾಣವಾಗಿರುವ ಕೃಷಿ ಹೊಂಡಗಳು ಜಲ ಸಂಗ್ರಹಕ್ಕೆ ಸಜ್ಜುಗೊಂಡಿವೆ. ಪ್ರಸಕ್ತ ಮುಂಗಾರು ಮಳೆಗೆ ಕೃಷಿ ಹೊಂಡಗಳಲ್ಲಿ ಜಲರಾಶಿ ತುಂಬಿಕೊಂಡರೆ ಈ ಯೋಜನೆ ಸಾರ್ಥಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT