ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ವಿದ್ಯುತ್‌ ಬಿಲ್‌ ಪಾವತಿಗೆ ಗ್ರಾಹಕರ ನಕಾರ

ಹಳ್ಳಿಗಳಿಗೆ ಜೆಸ್ಕಾಂ ಸಿಬ್ಬಂದಿಗೆ ಪ್ರವೇಶವಿಲ್ಲ
Published 18 ಮೇ 2023, 23:30 IST
Last Updated 18 ಮೇ 2023, 23:30 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ  ಪಡೆದ ಬಳಿಕ ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿಸಲು ನಿರಾಕರಿಸುತ್ತಿದ್ದಾರೆ. ಹಳ್ಳಿಗಳಲ್ಲಂತೂ ವಿದ್ಯುತ್ ಬಿಲ್‌ ಕೊಡಲು ಬರುವ ‘ಗುಲ್ಬರ್ಗಾ ಇಲೆ‌ಕ್ಟ್ರಿಕಲ್‌ ಕಂಪನಿ’ಯ (ಜೆಸ್ಕಾಂ) ಸಿಬ್ಬಂದಿಯನ್ನು ಒಳಗೇ ಬಿಡುತ್ತಿಲ್ಲ.

‘ಕಾಂಗ್ರೆಸ್‌ ಗೆದ್ದರೆ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ ಎಂದು ಆ ಪಕ್ಷ ಗ್ಯಾರಂಟಿ ಕೊಟ್ಟಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿರುವುದರಿಂದ ನಾವು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ’ ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಮೇ 10ರಂದು ವಿಧಾನಸಭೆ ಚುನಾವಣೆ ನಡೆದು ಮೇ 13ರಂದು ಫಲಿತಾಂಶ ಪ್ರಕಟವಾಗಿದೆ. ಐದು ದಿನಗಳಿಂದ ಹಳ್ಳಿಗಳಿಗೆ ಹೋಗುತ್ತಿರುವ ಜೆಸ್ಕಾಂ ಮೀಟರ್‌ ರೀಡರ್‌ಗಳು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಚಾಲ್ತಿ ವಿದ್ಯುತ್‌ ಬಿಲ್‌ಗಳು ಹೋಗಲಿ, ಹಳೇ ಬಾಕಿಯನ್ನು ಪಾವತಿಸುತ್ತಿಲ್ಲ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ.

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 7.76ಲಕ್ಷ ಗ್ರಾಹಕರಿದ್ದು, ಈ ವರ್ಷ ಮಾರ್ಚ್‌ ಅಂತ್ಯದವರೆಗೆ ಬರಬೇಕಾದ ಬಾಕಿ ₹ 845 ಕೋಟಿ. ಪ್ರತಿ ತಿಂಗಳು ಜೆಸ್ಕಾಂ ತನ್ನ ಗ್ರಾಹಕರಿಗೆ ₹ 20.66 ಕೋಟಿ ಮೊತ್ತದ ವಿದ್ಯುತ್‌ ಪೂರೈಸುತ್ತಿದೆ. ವಸೂಲಾಗುತ್ತಿರುವ ಬಿಲ್‌ ₹ 18. 80 ಕೋಟಿ ಇದರಿಂದಾಗಿ ತಿಂಗಳಿಗೆ ಸುಮಾರು ₹ 2ಕೋಟಿ ನಷ್ಟವಾಗುತ್ತಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಪೂರೈಕೆ ಮತ್ತಿತರ ಸೋರಿಕೆಯಿಂದ ಶೇ 12ರಷ್ಟು ವಿದ್ಯುತ್‌ ನಷ್ಟವಾಗುತ್ತಿದೆ. ಮೊದಲು ನಷ್ಟದ ಪ್ರಮಾಣ ಶೇ 15ರಷ್ಟಿತ್ತು. ಈ ಪ್ರಮಾಣ ತಗ್ಗಿಸಲಾಗಿದೆ. ಭಾಗ್ಯಜ್ಯೋತಿ ಫಲಾನುಭವಿಗಳಿಗೆ 40 ಯುನಿಟ್ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ಉಚಿತ ವಿದ್ಯುತ್‌ ಕೊಡಲಾಗುತ್ತಿದೆ.  ಇದಲ್ಲದೆ, ಇನ್ನೂ ಶೇ 30ರಷ್ಟು ಗ್ರಾಹಕರಿಗೆ ಮೀಟರ್‌ಗಳನ್ನೇ ಅಳವಡಿಸಿಲ್ಲ.

ಕಾಂಗ್ರೆಸ್‌ಗ್ಯಾರಂಟಿಯಂತೆ ಪ್ರತಿ ತಿಂಗಳು ಪ್ರತಿ ಮೀಟರ್‌ಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿರುವುದರಿಂದ ತಿಂಗಳಿಗೆ ಒಂದು ಮೀಟರ್‌ಗೆ ₹ 450ರಿಂದ ₹ 500ರವರೆಗೆ ಸರ್ಕಾರಕ್ಕೆ ಹೊರೆಯಾಗಲಿದೆ. ಈಗಾಗಲೇ ಉಚಿತವಾಗಿರುವ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳನ್ನು 200ಯುನಿಟ್‌ನಲ್ಲಿ ವಿಲೀನ ಮಾಡಲಾಗುವುದದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ವಿದ್ಯುತ್‌ಗೆ ಉಷ್ಣ ವಿದ್ಯುತ್‌ ಸ್ಥಾವರ ಮತ್ತು ಸೌರ ಶಕ್ತಿಯನ್ನು ಅವಲಂಬಿಸಿದೆ. ಬಳ್ಳಾರಿ ತಾಲ್ಲೂಕಿನ ಪಿ.ಡಿ. ಹಳ್ಳಿ ಬಳಿಯ ಸೌರಶಕ್ತಿ ಘಟಕಗಳಿಂದ 70 ಮೆಗಾವ್ಯಾಟ್‌ ವಿದ್ಯುತ್‌ ಪೂರೈಕೆ ಆಗುತ್ತಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಜೆಸ್ಕಾಂ ಬಳ್ಳಾರಿ ವೃತ್ತದ ಅಧೀಕ್ಷಕ ಎಂಜಿನಿಯರ್‌ ಬಿ. ವೆಂಕಟೇಶುಲು
ಜೆಸ್ಕಾಂ ಬಳ್ಳಾರಿ ವೃತ್ತದ ಅಧೀಕ್ಷಕ ಎಂಜಿನಿಯರ್‌ ಬಿ. ವೆಂಕಟೇಶುಲು

ಬಳ್ಳಾರಿ, ವಿಜಯನಗರ ವಿದ್ಯುತ್‌ ಗ್ರಾಹಕರ ಅಂಕಿಅಂಶ ಒಟ್ಟು ವಿದ್ಯುತ್‌ ಗ್ರಾಹಕರು;7.76ಲಕ್ಷ ಭಾಗ್ಯಜ್ಯೋತಿ ಫಲಾನುಭವಿಗಳು;1.25ಲಕ್ಷ ಗೃಹ ಬಳಕೆದಾರರು;4.43ಲಕ್ಷ ವಾಣಿಜ್ಯ ಬಳಕೆದಾರರು;64ಸಾವಿರ ನೀರಾವರಿ ಪಂಪ್‌ಸೆಟ್‌;95ಸಾವಿರ

ಯೋಜನೆ ವಿವರ ಯೋಜನೆ;ಬಾಕಿ;₹ಕೋಟಿಗಳಲ್ಲಿ ಭಾಗ್ಯಜ್ಯೋತಿ;22.73 ಏತ ನೀರಾವರಿ; 29.38 ವಿದ್ಯುತ್‌ ಪಂಪ್‌ಸೆಟ್;158.58 ಗೃಹಬಳಕೆದಾರರು;88 ಬೀದಿ ದೀಪಕುಡಿಯುವ ನೀರು;546

ನಿರ್ಧಾರದ ನಿರೀಕ್ಷೆ: ಎಸ್‌ಇ ಪ್ರತಿ ಮೀಟರ್‌ಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ. ರಾಜ್ಯ ಸರ್ಕಾರ ರಚನೆಯಾದ ಬಳಿಕ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆದೆ. ಸರ್ಕಾರದ ತೀರ್ಮಾನದ ನಿರೀಕ್ಷೆಯಲ್ಲಿ ನಾವೂ ಇದ್ದೇವೆ ಎಂದು ಜೆಸ್ಕಾಂ ಬಳ್ಳಾರಿ ಸರ್ಕಲ್‌ (ಬಳ್ಳಾರಿ ವಿಜಯನಗರ ಜಿಲ್ಲೆ) ಅಧೀಕ್ಷಕ ಎಂಜಿನಿಯರ್‌ ಬಿ. ವೆಂಕಟೇಶುಲು ಹೇಳಿದ್ದಾರೆ. ರಾಜ್ಯ ಸರ್ಕಾರದ ತೀರ್ಮಾನ ಆಗುವವರೆಗೆ ಗ್ರಾಹಕರು ಜೆಸ್ಕಾಂ ಜತೆ ಸಹಕರಿಸಬೇಕು. ಬಿಲ್‌ ಮತ್ತು ಹಳೇ ಬಾಕಿ ಪಾವತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT