ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಿಂದ ಶ್ರೀರಾಮುಲು, ಹಾಲಿ ಸಂಸದ ವೈ. ದೇವೇಂದ್ರಪ್ಪಗೆ ಸಿಗದ ಅವಕಾಶ

Published 14 ಮಾರ್ಚ್ 2024, 4:55 IST
Last Updated 14 ಮಾರ್ಚ್ 2024, 4:55 IST
ಅಕ್ಷರ ಗಾತ್ರ

ಬಳ್ಳಾರಿ: ಈ ಬಾರಿ ನಡೆಯುವ ಲೋಕಸಭಾ ಚುನಾವಣೆಗೆ ಬಳ್ಳಾರಿ(ಎಸ್‌ಟಿ ಮೀಸಲು) ಕ್ಷೇತ್ರದಿಂದ ನಿರೀಕ್ಷೆಯಂತೆ ಮಾಜಿ ಸಚಿವ  ಬಿ. ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. 2014ರಲ್ಲಿ ಒಮ್ಮೆ ಲೋಕಸಭೆ ಪ್ರವೇಶಿಸಿದ್ದ ಶ್ರೀರಾಮುಲು ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

ಟಿಕೆಟ್ ಘೋಷಣೆಗೂ ಮುಂಚೆಯೇ ಶ್ರೀರಾಮುಲು ಅವರು ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದರು. ಟಿಕೆಟ್ ಘೋಷಣೆಯು ಪ್ರಚಾರ ಕಾರ್ಯಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತುಂಬಿದೆ.

ಒಂದು ಹಂತದಲ್ಲಿ ರಾಯಚೂರು (ಎಸ್‌ಟಿ ಮೀಸಲು) ಕ್ಷೇತ್ರದಲ್ಲೂ ರಾಮುಲು ಅವರ ಹೆಸರು ಕೇಳಿ ಬಂದಿತ್ತು. ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಶ್ರೀರಾಮುಲು ಅವರು ಸಮೀಕ್ಷೆ ನಡೆಸಿದ್ದು, ರಾಯಚೂರು ಅವರಿಗೆ ಪೂರಕವಾಗಿದೆ. ಅವರು ಅಲ್ಲಿಂದಲೇ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಪಕ್ಷದ ವರಿಷ್ಠರು ಶ್ರೀರಾಮುಲು ಅವರನ್ನು ಬಳ್ಳಾರಿಗೇ ನಿಯೋಜಿಸಿದ್ದಾರೆ.

ಆದರೆ, ಯಾವುದೇ ಕೋನದಿಂದ ನೋಡಿದರೂ ಶ್ರೀರಾಮುಲು ಅವರಿಗೆ ಈ ಚುನಾವಣೆ ಅತ್ಯಂತ ಕಠಿಣ ಸವಾಲಿನದ್ದೇ ಸರಿ. ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ 2004ರಿಂದ ಈಚೆಗೆ ಬಿಜೆಪಿ ಪ್ರಾಬಲ್ಯ ಮೆರೆಯಲಾರಂಭಿಸಿತ್ತಾದರೂ, ಇತ್ತೀಚಿನ ದಿನಗಳಲ್ಲಿ ಅದು ಮಸುಕಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಂತೂ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಮೆಟ್ಟಿ ತನ್ನ ಗತಕಾಲದ ವೈಭವವನ್ನು ಪ್ರದರ್ಶಿಸಿತ್ತು. ಹೀಗಾಗಿ ಕಾಂಗ್ರೆಸ್‌ ಅನ್ನು ಮಣಿಸಲು ಶ್ರೀರಾಮುಲು ತುಸು ಹೆಚ್ಚೇ ಶ್ರಮ ಹಾಕಬೇಕು. 

ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ (ಬಳ್ಳಾರಿ ನಗರ–ಕಾಂಗ್ರೆಸ್‌, ಬಳ್ಳಾರಿ ಗ್ರಾಮಾಂತರ –ಕಾಂಗ್ರೆಸ್‌, ಕಂಪ್ಲಿ–ಕಾಂಗ್ರೆಸ್‌, ಸಂಡೂರು–ಕಾಂಗ್ರೆಸ್‌, ಕೂಡ್ಲಿಗಿ–ಕಾಂಗ್ರೆಸ್‌, ವಿಜಯನಗರ–ಕಾಂಗ್ರೆಸ್‌,  ಹಗರಿಬೊಮ್ಮನಹಳ್ಳಿ–ಜೆಡಿಎಸ್‌, ಹೂವಿನಹಡಗಲಿ– ಬಿಜೆಪಿ) 6ರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ತಲಾ ಒಂದೊಂದು ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳು ಗೆದ್ದಿವೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕೈ ಬಲ ಹೆಚ್ಚಾಗಿದೆ. 

ಈ ಮಧ್ಯೆ, ‌ಶ್ರೀರಾಮುಲು ಅವರ ಬಹುಕಾಲದ ಮಿತ್ರ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಣಕ್ಕಿಳಿಸುವುದಾಗಿ ಘೋಷಿಸಿರುವುದು ಶ್ರೀರಾಮುಲು ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದಂತೆ ಲೋಕಸಭಾ ಚುನಾವಣೆಯಲ್ಲೂ ಅವರೇನಾದರೂ ಕಾಂಗ್ರೆಸ್‌ ಪರವಾಗಿ ನಿಂತರಂತೂ ಈ ಚುನಾವಣೆ ಶ್ರೀರಾಮುಲು ಪಾಲಿನ ಅಗ್ನಿ ಪರೀಕ್ಷೆಯಾಗುವುದು ನಿಶ್ಚಿತ.

ಈಗಾಗಲೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲು ಕಂಡಿರುವ ಶ್ರೀರಾಮುಲು ತಮ್ಮ ರಾಜಕೀಯ ಅಸ್ತಿತ್ವ ಬಲಪಡಿಸಿಕೊಳ್ಳಲು ಈ ಚುನಾವಣೆ ಗೆಲ್ಲಲೇ ಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 15 ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಮುಗ್ಗರಿಸಿತ್ತು. ಶ್ರೀರಾಮುಲು ಅವರ ಇಮೇಜ್‌ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂಬ ವ್ಯಾಖ್ಯಾನಗಳು ಕೇಳಿ ಬಂದಿತ್ತು. 1996ರಲ್ಲಿ ಪಾಲಿಕೆ ಸದಸ್ಯನಾಗುವುದರ ಮೂಲಕ ರಾಜಕೀಯ ಆರಂಭಿಸಿದ್ದ ಶ್ರೀರಾಮುಲು ಈ ಎಲ್ಲದ್ದಕ್ಕೂ ಉತ್ತರಸಬೇಕಿದ್ದರೆ ಅವರಿಗೆ ಈ ಚುನಾವಣೆ ಗೆಲುವು ಅನಿವಾರ್ಯ.  

ಸಹಜವಾಗಿಯೇ ನಾನೂ ಆಕಾಂಕ್ಷಿಯಾಗಿದ್ದೆ. ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಶ್ರೀರಾಮುಲು ರಾಜ್ಯ ಮಟ್ಟದ ನಾಯಕ. ನಾನೊಬ್ಬ ಜಿಲ್ಲಾ ಮಟ್ಟದ ನಾಯಕ. ಹೀಗಾಗಿಯೇ ಅವರಿಗೆ ಟಿಕೆಟ್ ಕೊಟ್ಟಿರಬಹುದು. ಬಿಜೆಪಿಯನ್ನು ಗೆಲ್ಲಿಸಲು ದುಡಿಯುತ್ತೇನೆ 

– ವೈ ದೇವೇಂದ್ರಪ್ಪ ಸಂಸದ    

ಮೋದಿ ನಾಮಬಲದೊಂದಿಗೆ ಗೆಲುವು 

ಪಕ್ಷ ಸಾಕಷ್ಟು ಅಧ್ಯಯನ ನಡೆಸಿ ನನಗೆ ಟಿಕೆಟ್‌ ನೀಡಿದೆ. ಪ್ರತಿ ಜಿಲ್ಲೆಯಿಂದ ಮೂವರು ಆಕಾಂಕ್ಷಿಗಳ ಹೆಸರನ್ನು ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ನನ್ನ ಹೆಸರು ಸೋಮಲಿಂಗಪ್ಪ ಅವರ ಹೆಸರಿತ್ತು.  ಈ ಪೈಕಿ ನನಗೆ ಟಿಕೆಟ್‌ ಸಿಕ್ಕಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಬಲವಾಗಿರಬಹುದು. ಆದರೆ ಮೋದಿ ಅವರ ನಾಮಬಲದೊಂದಿಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲಿದ್ದೇವೆ. ಕೆಆರ್‌ಪಿಪಿ ನಾಯಕರು ಯಾವುದೇ  ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಹಾಕಲು ಸರ್ವ ಸ್ವತಂತ್ರರರು ಎಂದು ಮಾಜಿ ಸಚಿವ ಬಿ. ಶ್ರೀರಾಮು ಹೇಳಿದ್ದಾರೆ. 

ಅಭ್ಯರ್ಥಿ ಯಾರು? ಕೈ ಕುತೂಹಲ...  

ಸ್ಪರ್ಧೆ ಮಾಡಲು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡೇ ಇದೆ. ಆದರೆ ಪಕ್ಷಕ್ಕೆ ಪೂರಕ ವಾತಾವರಣವಿರುವ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕೈಚೆಲ್ಲಬಾರದು ಎಂಬ ಇರಾದೆಯಲ್ಲಿರುವ ಕಾಂಗ್ರೆಸ್‌ ನಾಯಕರು ಆಕಾಂಕ್ಷಿಗಳ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಸಂಡೂರು ಶಾಸಕ ತುಕಾರಾಮ್‌ ಅವರು ತಮ್ಮ ಪುತ್ರಿಗೆ ಸೌಪರ್ಣಿಕಾಗೆ ಟಿಕೆಟ್‌ ಕೇಳುತ್ತಿದ್ದರೆ ಸಚಿವ ಬಿ. ನಾಗೇಂದ್ರ ಅವರು ತಮ್ಮ ಅಣ್ಣ ವೆಂಕಟೇಶ್‌ಗೆ ಟಿಕೆಟ್‌ ಕೇಳುತ್ತಿದ್ದಾರೆ. ಆದರೆ ಮಗಳು ಅಣ್ಣನಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ನಾಯಕರಿಗೆ ಮನಸ್ಸಿಲ್ಲ. ಸ್ಪರ್ಧೆ ಮಾಡಲು ಸಚಿವ ನಾಗೇಂದ್ರ ಅವರಿಗಾಗಲಿ ಶಾಸಕ ತುಕಾರಾಮ್‌ ಅವರಿಗಾಗಲಿ ಮನಸ್ಸಿಲ್ಲ. ಇದರ ಲಾಭ ಕಳೆದ ಬಾರಿ ಸೋತಿದ್ದ ವಿ.ಎಸ್‌ ಉಗ್ರಪ್ಪ ಅವರಿಗೆ ಆಗಬಹುದು ಎಂಬ ಲೆಕ್ಕಾಚಾರಗಳಿವೆ. ಈ ಮಧ್ಯೆ ಗುಜ್ಜಲ್‌ ನಾಗರಾಜ್‌ ಅವರೂ ಟಿಕೆಟ್‌ ಸಿಕ್ಕರೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ ಸವಲಿನದ್ದಾಗಿದೆ. ಶೀಘ್ರದಲ್ಲೇ ಈ ಕುತೂಹಲಕ್ಕೂ ತೆರೆ ಬೀಳಲಿದೆ.  

ಕ್ಷೇತ್ರದಲ್ಲಿ ಪಕ್ಷಗಳ ಬಲಾಬಲ  ಕಾಂಗ್ರೆಸ್‌: 6 ಬಿಜೆಪಿ:1  ಜೆಡಿಎಸ್‌: 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT